Gummata Nagari

Bijapur

ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನಕ್ಕೆ ಕಾನಿಪ ಸಂತಾಪ

 

ಬಿಜಾಪುರ: ನೆರೆಯ ಬಾಗಲಕೋಟೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಿಜಾಪುರ ಜಿಲ್ಲಾ ಘಟಕದ ವತಿಯಿಂದ ಶನಿವಾರದಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಸಭೆ ಆರಂಭಕ್ಕೂ ಮುನ್ನ ಮೃತರಿಗೆ ಒಂದು ನಿಮಿಷ ಮೌನ ಆಚರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯವಾಣಿ ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಕೆ.ಎನ್.ರಮೇಶ ಮಾತನಾಡಿ, ಸಂಯುಕ್ತ ಕರ್ನಾಟಕ ಬಾಗಲಕೋಟ ಜಿಲ್ಲಾ ವರದಿಗಾರರಾಗಿ ತಮ್ಮ ಬರವಣಿಗೆಯ ಮೂಲಕ ಹಲವಾರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದರು. ಆಡು ಮುಟ್ಟದ ಗಿಡವಿಲ್ಲ, ಪತ್ರಕರ್ತ ರಾಮ ಮನಗೂಳಿ ಅವರು ಬರೆಯದ ವಿಷಯವಿಲ್ಲ. ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ವಿಶೇಷ ಛಾಪು ಮೂಡಿಸಿದ್ದರು. ಎಲ್ಲ ವಿಷಯಗಳಲ್ಲಿ ಅವರಿಗೆ ಆಳವಾದ  ಅನುಭವವಿತ್ತು. ಅವರು ಪತ್ರಿಕಾರಂಗದ ಧೃವತಾರೆ ಎಂದರೆ ತಪ್ಪಾಗಲಾರದು ಎಂದರು.

ಸoಯುಕ್ತ ಕರ್ನಾಟಕ ವಿಜಯಪುರ ಜಿಲ್ಲಾ ಮುಖ್ಯ ವರದಿಗಾರ ವಾದುದೇವ ಹೆರಕಲ್ ಮಾತನಾಡಿ, ರಾಮ ಮನಗೂಳಿ ಅವರು ಕೇವಲ ಪತ್ರಕರ್ತರಷ್ಟೇ ಆಗಿರಲಿಲ್ಲ. ಅವರೊಬ್ಬ ಉತ್ತಮ ಸಂಘಟನಾಕಾರರು ಹಾಗೂ ಹೋರಾಟಗಾರರೂ ಆಗಿದ್ದರು. ಅವರು ಸರಳ ವ್ಯಕ್ತಿಯಾಗಿದ್ದರು. ಯಾರನ್ನೂ ಅವರು ಎದುರು ಹಾಕಿಕೊಂಡವರಲ್ಲ. ಆದರೆ ಯಾರೊಂದಿಗೂ ರಾಜೀ ಮಾಡಿಕೊಳ್ಳುತ್ತಿರಲಿಲ್ಲ. ಪತ್ರಿಕಾರಂಗದಲ್ಲಿ ಅವರು ಹೆಮ್ಮರವಾಗಿ ಬೆಳೆದಿದ್ದರು ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಸುಶಿಲೇಂದ್ರ ನಾಯಿಕ ಮಾತನಾಡಿ, ಪತ್ರಕರ್ತ ರಾಮ ಮನಗೂಳಿ ಹಾಗೂ ನಮ್ಮ ನಡುವೆ ಒಳ್ಳೆಯ ಬಾಂಧವ್ಯವಿತ್ತು. ನಮ್ಮ ಎಲ್ಲ ಕಾರ್ಯಕ್ಕೆ ಅವರು ಬೆಂಬಲ ನೀಡುತ್ತಿದ್ದರು. ಅವರ ಅಗಲಿಕೆ ನಮಗೆ ತುಂಬಾ ದು:ಖವನ್ನುಂಟು ಮಾಡಿದೆ ಎಂದು ಕಣ್ಣೀರಿಟ್ಟರು.

ಹಿರಿಯ ಪತ್ರಕರ್ತರ ಪ್ರಭು ಮಲ್ಲಿಕಾರ್ಜುನಮಠ ಮಾತನಾಡಿ, ಪತ್ರಕರ್ತ ರಾಮ ಮನಗೂಳಿ ಅವರ ಅಗಲಿಕೆ ಸುದ್ದಿ ಕೇಳಿ ನನಗೆ ಬಹಳ ವ್ಯಥೆಯಾಯಿತು. ಅವರೊಬ್ಬ ಪ್ರಭಾವಿ ಪತ್ರಕರ್ತರಾಗಿದ್ದರು. ಪತ್ರಿಕೋದ್ಯಮದಲ್ಲಿ ಅವರು ಬಹಳ ಎತ್ತರಕ್ಕೆ ಬೆಳೆದಿದ್ದರು. ಅವರು ಪತ್ರಕರ್ತರಷ್ಟೇ ಆಗಿರಲಿಲ್ಲ ಕೊಡುಗೈ ದಾನಿಯೂ ಆಗಿದ್ದರು. ಹಲವಾರು ಜನರಿಗೆ ಅವರು ಸಹಾಯ ಮಾಡಿದ್ದರು. ಅವರೊಂದಿಗೆ ನನ್ನ ಒಳ್ಳೆಯ ಒಡನಾಟವಿತ್ತು. ಇಂದು ಅವರು ನಮ್ಮೊಂದಿಗೆ ಇಲ್ಲ ಎನ್ನುವುದೇ ನೋವಿನ ಸಂಗತಿ ಎಂದು ಭಾವುಕರಾದರು.

ಜಿಲ್ಲಾ ಕಾನಿಪ ಸಂಘದ ಸಲಹಾ ಸಮಿತಿ ಸದಸ್ಯ ದೇವೇಂದ್ರ ಹೆಳವರ ಮಾತನಾಡಿ, ಪತ್ರಕರ್ತ ರಾಮ ಮನಗೂಳಿ ಅವರು ಓರ್ವ ಶ್ರೇಷ್ಠ ಬರಹಗಾರರಾಗಿದ್ದರು. ಯಾವುದೇ ಭೇದಭಾವವಿಲ್ಲದೇ ಎಲ್ಲರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿದ್ದರು. ಅವರ ಅಗಲಿಕೆಯಿಂದ ಪತ್ರಿಕಾರಂಗ ಓರ್ವ ಶ್ರೇಷ್ಠ ಪತ್ರಕರ್ತನನ್ನು ಕಳೆದುಕೊಂಡoತಾಗಿದೆ ಎಂದು ನುಡಿದರು.

ಪ್ರಜಾವಾಣಿ ಜಿಲ್ಲಾ ವರದಿಗಾರ ಬಸವರಾಜ ಸಂಪಳ್ಳಿ ಮಾತನಾಡಿ, ಪತ್ರಕರ್ತ ರಾಮ ಮನಗೂಳಿ ಅವರಿಗೆ ಆಳವಾದ ಅನುಭವ, ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಅವರು ಬರೆದ ಹಲವಾರು ವರದಿಗಳು ಆಳುವ ಸರಕಾರಗಳ ಹಾಗೂ ಸಾರ್ವಜನಿಕರ ಗಮನ ಸೆಳೆದಿವೆ ಎಂದರು.

ವಿಜಯ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಬರವಣಿಗೆ ಮೂಲಕ ತಮ್ಮನ್ನು ರಾಜ್ಯದಲ್ಲಿ ಗುರುತಿಸಿಕೊಂಡಿದ್ದ ಪತ್ರಕರ್ತ ರಾಮ ಮನಗೂಳಿ ಅವರು, ಯುವ ಪ್ರತಿಭೆಗಳಿಗೆ, ಕಿರಿಯ ಪತ್ರಕರ್ತರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಿರಿಯ ಪತ್ರಕರ್ತರಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರೂ ಯಾವುದೇ ಹಮ್ಮು ಬಿಮ್ಮು ಅವರಲ್ಲಿರಲಿಲ್ಲ. ಅವರು ಸ್ನೇಹಜೀವಿ, ಮಾತೃಹೃದಯಿಯಾಗಿದ್ದರು ಎಂದರು.

ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಸಲಹಾ ಸಮಿತಿ ಸದಸ್ಯ ಅಶೋಕ ಯಡಳ್ಳಿ, ಕನ್ನಡ ಕಹಳೆ ಪತ್ರಿಕೆ ಸಂಪಾದಕಿ ರಶ್ಮಿ ಪಾಟೀಲ ಮಾತನಾಡಿ, ಪತ್ರಕರ್ತ ರಾಮ ಮನಗೂಳಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಸಭೆಯಲ್ಲಿ ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಖಜಾಂಚಿ ರಾಹುಲ ಆಪ್ಟೆ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ನಿನ್ನೆ ನಿಧನರಾಗಿರುವ ಉದಯವಾಣಿ ಪತ್ರಿಕೆ ಮಂಗಳೂರು ವರದಿಗಾರ ಮನೋಹರ ಪ್ರಸಾದ್ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Most Popular

To Top
error: Content is protected !!