Gummata Nagari

Bijapur

ಪವಾಡ ಪುರುಷನ ಕ್ಷೇತ್ರದಲ್ಲಿ ಐತಿಹಾಸಿಕ ಪವಾಡ ಸೃಷ್ಠಿ: ಬದುಕಿ ಬಂದ ಸಾತ್ವಿಕ್

 

ಬಿಜಾಪುರ: ಅದು 280 ಅಡಿ ಆಳವಾದ ಕೊಳವೆ ಭಾವಿ. ಜಮೀನಿನಲ್ಲಿದ್ದ ಕೊಳವೆ ಬಾವಿಯಲ್ಲಿ ಆಟವಾಡುತ್ತಾ ಇದ್ದ ಗಂಡು ಮಗು ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದೆ. ಸುಮಾರು 15 ಅಡಿ ಆಳದಲ್ಲಿ ಸಿಲುಕಿ ಸಾವಿನ ದವಡೆಗೆ ಸಿಲುಕಿ ಸುಮಾರು 20 ಗಂಟೆಯ ವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಈ ಮಗು ಅಲ್ಲಿನ ಪವಾಡ ಪುರುಷನ ಶಕ್ತಿಯಿಂದ ನಗು ನಗುತ್ತಲೇ ಬದುಕಿ ಬಂದು ಸಾವಿನ ದವಡೆಯಿಂದ ಬಚಾವ್ ಆಗಿರುವದು ಮಗುವಿನ ಕುಟುಂಬ ಹಾಗೂ ನಾಡಿನ ಜನತೆಯ ಸಂತಸಕ್ಕೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮ ಸಾಕ್ಷಿಯಾಗಿತ್ತು.

ಹೌದು, ಗ್ರಾಮದ ಸಾತ್ವಿಕ್ ಸತೀಶ ಮುಜಗೊಂಡ ಎಂಬ 14 ತಿಂಗಳ ಬಾಲಕ ಈ ಅಪಾಯಕಾರಿ ಘಟನೆಯಲ್ಲಿ ಬದುಕುಳಿಯುವ ಮೂಲಕ ಪ್ರತ್ಯಕ್ಷ ದರ್ಶಿಗಳಲ್ಲಿ ನಾಡಿನ ಜನತೆಯ ಮನದಲ್ಲಿನ ಸಂತಸದ ಸಂಭ್ರಮ ಮುಗಿಲು ಮುಟ್ಟಿದೆ.

ಕಳೆದ ಬುಧವಾರದಂದು ಸಂಜೆ 5.30 ಗಂಟೆಯ ಸುಮಾರಿಗೆ ಕೊಳವೆ ಬಾವಿಗೆ ಮಗು ಬಿದ್ದಿತ್ತು. ಇದರಿಂದ ಸಮೀಪದಲ್ಲೆ ಇದ್ದ ತಂದೆ ಸತೀಶ ಗಾಬರಿಯಾಗಿ ಚೀರಾಟ ನಡೆಸಿ ಪತ್ನಿ ಪೂಜಾಗೆ, ಬಂಧು ಮಿತ್ರರಿಗೆ ಸುದ್ದಿ ತಿಳಿಸಿದ. ತಕ್ಷಣ ಸುದ್ದಿ ತಿಳಿದ ಸುತ್ತಲ ಜನರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 2 ಜೆಸಿಬಿ ತರಸಿ ರಕ್ಷಣೆಗೆ ಮುಂದಾಗಿದ್ದಾರೆ.

 


ಬಳಿಕ ಸುದ್ದಿ ತಿಳಿದು ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಗ್ನಿ ಶಾಮಕ ಸಿಬ್ಬಂದಿ, ಎನ್.ಡಿ.ಆರ್.ಎಫ್, ತಂಡ, ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 2 ಹಿಟಾಚಿ ವಾಹನ ತರಸಿ, ತಕ್ಷಣ ಆಕ್ಸಿಜನ್ ಪೂರೈಸಿ ಹಗಲಿರುಳು ನಿರಂತರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಸಚಿವ ಎಂ.ಬಿ. ಪಾಟೀಲರು ಅಧಿಕಾರಿಗಳೊಂದಿಗೆ ನಿರಂತರವಾದ ಸಂಪರ್ಕ ಸಾಧಿಸಿ ಮಗುವಿನ ರಕ್ಷಣೆಗಾಗಿ ಸಾಥ್ ನೀಡಿದ್ದರು.

ರಾತ್ರಿಯ ಸಮಯದಲ್ಲಿ ಕಾರ್ಯಾಚಾರಣೆ ನಡೆಸುವ ಸಿಬ್ಬಂದಿಗೆ ಇಲ್ಲಿನ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಿಂದ ಕಡಕ್ ಜೊಳದ ರೊಟ್ಟಿ, ಅನ್ನ, ಸಾರಿನ ವ್ಯವಸ್ಥೆ ಮಾಡಲಾದರೆ, ಗ್ರಾಮ ಪಂಚಾಯಿತಿಯಿAದ ನೀರು, ಚಹಾದ ವ್ಯವಸ್ಥೆ ಮಾಡಲಾಗಿತ್ತು.

ಈ ಘಟನೆಯ ಸಿದ್ದಿ ತಿಳಿದು ಮಧ್ಯರಾತ್ರಿಯಲ್ಲಿ ಘಟನಾ ಸ್ಥಳಕ್ಕೆ ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ವೀಕ್ಷಣೆ ಮಾಡಿ, ಸ್ಥಳದಲ್ಲೆ ಹಲವು ಘಂಟೆಗಳ ಕಾಲ ಠಿಕಾಣಿ ಹೂಡಿದ್ದರು. ಇದಲ್ಲದೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಲೋಕ ಸಭೆಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಉಪವಿಭಾಧಿಕಾರಿ ಅಬಿದ್ ಗದ್ಯಾಳ ಭೇಟಿ ನೀಡಿ ಕಾರ್ಯಾಚರಣೆಗೆ ಸಾಥ್ ನೀಡಿದರು.

ಮತ್ತೊಂದೆಡೆ ಸ್ಥಳಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ಥಳಿಯ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಬಾಲಕನ ಉಳಿವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು.

ರಾತ್ರಿಯ ಸಮಯದಲ್ಲೆ ಮಗು ಬದುಕಿ ಹೊರಬರುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ನಿರೀಕ್ಷಿಸಿದ್ದರು. ಆದರೆ ಸುಧೀರ್ಘ ಕಾರ್ಯಾಚರಣೆಯ ಫಲವಾಗಿ 15 ಅಡಿ ಆಳದಲ್ಲಿ ಸಿಲುಕಿದ್ದ ಮಗುವಿಗಾಗಿ , 20 ಅಡಿ ಆಳದ ವರೆಗೆ ಸಮಾನಾಂತರ ಗುಂಡಿ ತೋಡಿ ಕೊನೆಗೆ 20 ಗಂಟೆಗಳ ಕಾರ್ಯಾಚರಣೆ ಫಲವಾಗಿ ಇಂದು ಮಧ್ಯಾಹ್ನ ಮಗು ಸಾತ್ವಿಕ್ ಬದುಕಿ ಬಂದಿರುವದು ಎಲ್ಲರ ಮುಖದಲ್ಲೂ ನಗು ತರಿಸಿದೆ.

Most Popular

To Top
error: Content is protected !!