Gummata Nagari

Bijapur

ಮುಮ್ಮೆಟಿಗುಡ್ಡದಲ್ಲಿ ಅಮೋಘಸಿದ್ದೇಶ್ವರ ಸಮುದಾಯ ಭವನ ಉದ್ಘಾಟನೆ

 

ಬಿಜಾಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಮುಮ್ಮೆಟಿಗುಡ್ಡ ಶ್ರೀ ಅಮೋಘಸಿದ್ಧ ದೇವಸ್ಥಾನದ ಬಳಿ ರೂ. 3.50 ಕೋ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮದಾಯ ಭವನ ಮತ್ತು ರೂ. 25 ಲಕ್ಷ ವೆಚ್ಚದಲ್ಲಿ ಕಟ್ಟಲಾಗಿರುವ ಯಾತ್ರಿ ನಿವಾಸವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಶ್ರೀ ಅಮೋಘಸಿದ್ಧರ ಕೃಪೆಯಿಂದ ಮತ್ತಷ್ಟು ಒಳ್ಳೆಯ ದಿನಗಳು ಬರಲಿವೆ. ದೇವಸ್ಥಾನ ಬಳಿ ಸಮುದಾಯ ಭವನ ನಿರ್ಮಾಣದಿಂದ ಈ ಭಾಗದ ಬಡವರು ಮತ್ತು ಮಧ್ಯಮ ವರ್ಗದ ಜನರ ಶುಭ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೇ, ಯಾತ್ರಿ ನಿವಾಸ ನಿರ್ಮಾಣದಿಂದ ಭಕ್ತಾದಿಗಳಿಗೆ ಉಳಿದುಕೊಳ್ಳಲು ನೆರವಾಗಲಿದೆ. ಸಮುದಾಯ ಭವನ ನಿರ್ವಹಣೆಗೆ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮುಮ್ಮೆಟಿಗುಡ್ಡ ಸಂಪರ್ಕಿಸುವ ರಸ್ತೆಗಳ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ. ಸುನೀಲಗೌಡ ಪಾಟೀಲರ ಮುತುವರ್ಜಿಯಲ್ಲಿ ಶ್ರೀ ಅಮೋಘಸಿದ್ಧ ದೇವಸ್ಥಾನದ ಆವರಣದಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಕ್ರಿ ಕುಟುಂಬಸ್ಥರು ಭೂಮಿ ನೀಡಿ ಸಹಕರಿಸಿದ್ದಾರೆ. ಯಾತ್ರಿ ನಿವಾಸಕ್ಕೆ ಇನ್ನೋಂದು ಮಹಡಿ ನಿರ್ಮಿಸಲಾಗುವುದು. ಈ ಭಾಗದ ಜನರ ಬೇಡಿಕೆಯಂತೆ ಗ್ರಾಮ ಪಂಚಾಯಿತಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಶ್ರೀ ಅಮೋಘಸಿದ್ಧರು ನನ್ನ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾರೆ. ಈ ಭಾಗದಲ್ಲಿ ಮತ್ತಷ್ಟು ನೀರಾವರಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಅಮೋಘಸಿದ್ಧ ಅವಧೂತರು ಮಾತನಾಡಿ, ಎಂ. ಬಿ. ಪಾಟೀಲರು ಜಾತ್ಯತೀತ, ಪಕ್ಷಾತೀತ ಮತ್ತು ಧರ್ಮಾತೀತವಾಗಿ ಸರ್ವಜನಾಂಗದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನೀರಾವರಿ ಹಸಿರು ಕ್ರಾಂತಿಗೆ ಕಾರಣರಾಗಿದ್ದು, ವಿಜಯಪುರವನ್ನು ಮಲೆನಾಡನ್ನಾಗಿ ಮಾಡುತ್ತಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು.
ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಸಕ್ರಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಅವರ ನೀರಾವರಿ ಯೋಜನೆಗಳಿಂದಾಗಿ ಇಂದಿನ ಭೀಕರ ಬರದಲ್ಲಿಯೂ ನಮ್ಮ ಭಾಗದಲ್ಲಿ ಜನ ಗುಳೆ ಹೋಗುವುದು ತಪ್ಪಿದೆ. ನಾವೆಲ್ಲರೂ ನಮ್ಮ ಊರಿನಲ್ಲಿಯೇ ಉಳಿಯುವಂತಾಗಿದೆ ಎಂದು ಹೇಳಿದರು.
ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಮಾತನಾಡಿ, ಕರ್ನಾಟಕವಷ್ಟೇ ನೆರೆಯ ಮಹಾರಾಷ್ಟ್ರದಿಂದಲೂ ಅಮೋಘಸಿದ್ಧರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಗುಡ್ಡದಲ್ಲಿ ರೂ. 5 ಕೋ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಈಗ ಸಮುದಾಯ ಭವನ ಮತ್ತು ಯಾತ್ರಿ ನಿವಾಸ ನಿರ್ಮಿಸುವ ಮೂಲಕ ಈ ಭಾಗದ ಜನರ ಬೇಡಿಕೆ ಈಡೇರಿಸಿದ್ದಾರೆ. ಜಿಲ್ಲಾದ್ಯಂತವೂ ನಾನಾ ಸಮುದಾಯ ಭವನ ನಿರ್ಮುಸಿದ್ದಾರೆ. ರೈತರು, ಕಾರ್ಮಿಕರು, ಬಡವರು ಸೇರಿದಂತೆ ಮತಕ್ಷೇತ್ರದ ಸರ್ವಸಮುದಾಯದ ಕಲ್ಯಾಣಕ್ಕೆ ಕೆಲಸ ಮಾಡಿದ್ದಾರೆ. ಅಮೋಘಸಿದ್ಧರ ಗುಡ್ಡದವರೆಗೂ ನೀರು ಬಂದಿದೆ. ನಮ್ಮ ಪರವಾಗಿ ಕೆಲಸ ಮಾಡುವವರ ಪರವಾಗಿ ನಾವೆಲ್ಲರೂ ಸದಾ ಬೆಂಬಲವಾಗಿರೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಗೀತಾಂಜಲಿ ಪಾಟೀಲ, ಅರಕೇರಿ ಗ್ರಾ. ಪಂ. ಅಧ್ಯಕ್ಷೆ ಸಂಗೀತ ಡೂಂಬಾಳೆ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಎಸ್. ಎಚ್. ನಾಡಗೌಡ, ಅಶೋಕ ದಳವಾಯಿ, ಚನ್ನಪ್ಪ ದಳವಾಯಿ, ಪೀರ್ ಪಟೇಲ್, ರಮೇಶ್ ಸಕ್ರಿ, ಶ್ರೀಶೈಲ್ ದಳವಾಯಿ, ಅಪ್ಪು ಒಡೆಯರ, ಹುಸೇನ್ ಮನಗೂಳಿ, ಸುರೇಶ್ ಭಂಡಾರಿ, ತುಕಾರಾಂ ರಾಠೋಡ ಮುಂತಾದವರು ಉಪಸ್ಥಿತರಿದ್ದರು.
ಸೋಮನಿಂಗ ಕಟಾವಿ ಕಾರ್ಯಕ್ರಮ ನಿರೂಪಿಸಿದರು.

 

Most Popular

To Top
error: Content is protected !!