Gummata Nagari

Bijapur

ಭಾವನೆ – ಬದುಕಿನ ಮಧ್ಯದ ಚುನಾವಣೆ: ಎಚ್.ಕೆ. ಪಾಟೀಲ

ಬಬಲೇಶ್ವರ: ಭಾವನೆ ಕೆರಳಿಸುವ ಹಾಗೂ ಬದುಕು ರೂಪಿಸುವ ನಡುವಿನ ಸಂಘರ್ಷದ ಲೋಕಸಭೆ ಚುನಾವಣೆ ಇದಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ತಾಲೂಕಿನ ಗಲಗಲಿ ಬಳಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಮೋದಿಯವರು ಹೇಳಿದಂತೆ ಯಾವುದೂ ಈಡೇರಿಸಲಿಲ್ಲ. ಆದರೆ ನಾವು ನುಡಿದಂತೆ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಶೇ.90 ಭಾಗದಷ್ಟು ಹೆಣ್ಣುಮಕ್ಕಳಿಗೆ ಹಣ ನೇರವಾಗಿ ತಲುಪಿದೆ. ಮಧ್ಯವರ್ತಿಗಳಿಲ್ಲ, ಶೋಷಣೆ ಇಲ್ಲದೆ ಯೋಜನೆ ಮುಟ್ಟಿಸಿದ್ದೇವೆ. ಆದರೆ ಕೇಂದ್ರ ಸರಕಾರ ವಚನ ಭ್ರಷ್ಟತೆ ಮೆರೆದಿದೆ. ರಾಜ್ಯಕ್ಕೆ ಪರಿಹಾರ ನೀಡಲು, ಜಿಎಸ್‌ಟಿ ಪಾಲು ನೀಡುವಲ್ಲಿ ತಾರತಮ್ಯವನ್ನು ಮಾಡಲಾಗಿದೆ. ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ನಾವು ಬಡವರ ಪರ ದುಡ್ಡು ಹಾಕಿದರೆ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ ಅಚ್ಚುಕಟ್ಟಾಗಿ ಯೋಜನೆ ತಲುಪಿಸಿದ್ದು ನಮ್ಮ ಸಾಧನೆ ಎಂದು ಹೇಳಿದರು.

ರೈತರಿಗೆ ವಿಮೆ ಕೊಡುವುದರಲ್ಲೂ ಹಗರಣ ಮಾಡಲಾಗಿದೆ. ಎಕರೆಗೆ ಎಪ್ಪತ್ತು ರೂ. ಪರಿಹಾರವನ್ನು ರೈತರಿಗೆ ನೀಡಿ ಮೋದಿ ಸರಕಾರ ನಾಚಿಕೆ ಮೆರೆದಿದೆ. ಮತದಾರರು ಪ್ರಜಾಪ್ರಭುತ್ವ ಹಕ್ಕನ್ನು ಉಳಿಸಲು ಪ್ರಜ್ಞಾವಂತಿಕೆ ಮೆರೆಯಬೇಕಿದೆ. ಸಂಸತ್ತನ್ನು ತಮ್ಮ ದುರ್ನಡತೆಗೆ ಇವರು ಬಳಸಿಕೊಂಡಿದ್ದಾರೆ. ಚುನಾವಣಾ ಬಾಂಡ್ ಮೂಲಕ ನಡೆಸಿದ ಅವ್ಯವಹಾರದ ಬಣ್ಣವನ್ನು ಸುಪ್ರೀಂ ಕೋರ್ಟ್ ಕಳಚಿದೆ ಎಂದರು.

ರೈತರ ಹೋರಾಟಕ್ಕೆ ಬೆಲೆ ಇಲ್ಲ. ಅವರ ಕಲ್ಯಾಣದ ವಿಚಾರವಿಲ್ಲ. ವ್ಯಾಪಾರಿಗಳ ಹದಿನಾಲ್ಕು ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ಇವರು, ರೈತರಿಗೆ ನೀಡುವ ಪರಿಹಾರದ ಲೆಕ್ಕ ಹಾಕುತ್ತಾರೆ. ಸದ್ಯ ಲೋಕಸಭೆಗೆ ವಿವೇಚನೆಯಿಂದ ಆಲಗೂರರಿಗೆ ಮತ ನೀಡಿದರೆ ವಿಜಯಪುರ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ಗ್ಯಾರಂಟಿಗಳ ಮೂಲಕ ಬಡವರ ಮನೆಗೆ ಸೌಖ್ಯ ಬಂದಿದೆ. ಬೆಲೆ ಏರಿಕೆ ದಿನಗಳಲ್ಲಿ ಇದು ಸಂಜೀವಿನಿಯಾಗಿದೆ ಎಂದರು.

ಕೇoದ್ರ ಸರ್ಕಾರ ಎಲ್ಲ ರಂಗಗಳಲ್ಲಿ ಮಾತು ತಪ್ಪಿ ವೈಫಲ್ಯ ಕಂಡಿದೆ. ಸದ್ಯದ ಸಂಸತ್ ಸದಸ್ಯರು ಯಾವೊಂದು ಕೆಲಸ ಮಾಡಿಲ್ಲ. ಇದೆಲ್ಲ ವ್ಯತ್ಯಾಸ ಗಮನಿಸಿ ತಮಗೆ ಮತ ನೀಡಿದರೆ ನಿಮ್ಮ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.

ಸಕ್ಕರೆ ಕಾರಖಾನೆ ಅಧ್ಯಕ್ಷ ಆನಂದ ಕುಮಾರ ದೇಸಾಯಿ, ಮುಖಂಡರಾದ ಬಸವರಾಜ ದೇಸಾಯಿ, ಎಚ್.ಬಿ.ಹರಣಹಟ್ಟಿ, ಅದೃಶ್ಯಪ್ಪ ದೇಸಾಯಿ, ಸಂಗಮೇಶ ಬಬಲೇಶ್ವರ, ಡಾ.ಮಹಾಂತೇಶ ಬಿರಾದಾರ, ಲಕ್ಷ್ಮಣ ಚಿಕ್ಕದಾನಿ, ತಿಪ್ಪಣ್ಣ ತುಂಗಳ, ಶಶಿಧರ ಬೀದರ, ಎಸ್.ಟಿ.ಪಾಟೀಲ, ರಮೇಶ ದೇಸಾಯಿ, ಶಂಕರಗೌಡ ಪಾಟೀಲ ಅನೇಕರಿದ್ದರು.

Most Popular

To Top
error: Content is protected !!