Gummata Nagari

Headlines

ನ್ಯಾಯಾಧೀಶ ಜಹೀರ್ ಆತನೂರ ಛಲಗಾರ: ತಾಂಬೋಳಿ

 

ಬಿಜಾಪುರ: ಸಾಧನೆಗೆ ಛಲವಿರಬೇಕು. ಸಾಧಕನಿಗೆ ಸದಾವಕಾಶಗಳು ಹುಡುಕಿಕೊಂಡು ಬರುತ್ತವೆ. ಶ್ರಮದಿಂದ ಕ್ರಮವಾಗಿ ಅಧ್ಯಯನ ನಡೆಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಇಂತಹವರ ಸಾಲಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ನಿಲ್ಲುತ್ತಾರೆ ಎಂದು ಖ್ಯಾತ ನ್ಯಾಯವಾದಿ ಎ ಎಂ ತಾಂಬೋಳಿ ಹೇಳಿದರು.
ನಗರದಲ್ಲಿ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಸಂಜೆ ನ್ಯಾಯಾಧೀಶರಾಗಿ ಆಯ್ಕೆಯಾಗಿ ರಾಜ್ಯಕ್ಕೆ ಎರಡನೇ ರ‍್ಯಾಂಕ ಪಡೆದ ನ್ಯಾಯಾಧೀಶ ಜಹೀರ ಅತನೂರ ಇವರ ಗೌರವ ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಆದರೆ ನ್ಯಾಯಾಂಗ ಇಲಾಖೆಯಲ್ಲಿ ಎಲ್ಲ ಪರೀಕ್ಷೆ ಪಾಸಾಗಿ ನ್ಯಾಯಾಧೀಶರಾಗುವುದು ನಾಗರೀಕ ಸೇವಾ ಪರೀಕ್ಷೆಗಿಂತ ಕಠಿಣವಾಗಿರುತ್ತದೆ. ಇಂತಹದರಲ್ಲಿ ಉತ್ತಮ ರೀತಿಯಲ್ಲಿ ಓದಿ ಕುಟುಂಬ ಹಾಗೂ ಜಿಲ್ಲೆಗೆ ಕೀರ್ತಿ ತಂದ ನ್ಯಾಯಾಧೀಶ ಜಹೀರ ಅತನೂರ ಅವರ ಸಾಧನೆ ಶ್ಲಾಘನೀಯವಾಗಿದೆ ಎಂದರು.
ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಇರಫಾನ್ ಶೇಖ ಹಾಗೂ ಶಿಕ್ಷಕ-ಸಾಹಿತಿ ಕಬೂಲ್ ಕೊಕಟನೂರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರಲ್ಲಿ ಇಂತಹ ಪ್ರತಿಭೆಗಳು ಬಹಳ ಕಡಿಮೆ ಆದರೂ ಛಲ ಬಿಡದೆ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಗೌರವಾನ್ವಿತ ಜಹೀರ್ ಅತನೂರ, ನ್ಯಾಯಾಧೀಶನಾಗಲು ನಮ್ಮ ತಂದೆಯೇ ಪ್ರೇರಣೆಯಾಗಿದ್ದರು. ಇಷ್ಟ ಪಟ್ಟು ಓದಿದೆ ಮನನ ಮಾಡಿಕೊಂಡೆ ಯಾವುದೇ ವಿಶೇಷ ತರಬೇತಿ ಪಡೆಯದೆ ಪರೀಕ್ಷೆ ಬರೆದು ಯಶಸ್ವಿಯಾದೆ. ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು ಯುವಜನತೆ ಮುಂದೆ ಬರಬೇಕು ಉನ್ನತ ಹುದ್ದೆಯ ಕನಸು ನನಸು ಮಾಡಿಕೊಳ್ಳಬೇಕು ಎಂದರು.
ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಜುಮನ್ ಪದವಿ ಕಾಲೇಜಿನ ಪ್ರಾಚಾರ್ಯ ಎ ಎಂ ಚಟ್ಟರಕಿ, ಶಿಕ್ಷಕರಾದ ಸಿ ಜಿ ಹಾರಿವಾಳ, ಐ ಆರ್ ಹೊಸಮನಿ, ಸಲೀಮ್ ಶೇಖ, ಹಿದಾಯತ್ ಮಾಶಾಳಕರ್, ಆಬೀದ್ ಇನಾಮದಾರ, ಜಾವಿದ್ ಗುಡಗುಂಟಿ, ಹಾಜಿ ಪಿಂಜಾರ ಶಾಹಿದ್ ಶೇಖ, ಬಂದೇನವಾಜ ಕವಲಗಿ, ಸಂಗಮೇಶ ಸಗರ, ಮೊಹಸೀನ್ ಕೊಕಟನೂರ, ಮುನ್ನಾ ಮುಲ್ಲಾ ಸೇರಿದಂತೆ ಮತ್ತೀತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Most Popular

To Top
error: Content is protected !!