Gummata Nagari

Headlines

ನಾಗಠಾಣದಲ್ಲಿ ಮಾತೃ ಸಂಗಮ ಕಾರ್ಯಕ್ರಮ

 

ಬಿಜಾಪುರ: ಜಿಲ್ಲೆಯ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಾತೃ ಸಂಗಮ, ತಾಯಂದಿರ ಪಾದಪೂಜೆ ಹಾಗೂ ಮಕ್ಕಳಿಗೆ ಕೈತುತ್ತು ಉಣಿಸುವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಅಥರ್ಗಾ ಗುರುದೇವಾಶ್ರಮದ ಈಶಪ್ರಸಾದ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಮಕ್ಕಳು ಅಕ್ಷರದೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ, ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ತಾಯಿ ತನ್ನ ಸಂತೋಷವನ್ನು ತನ್ನ ಮಗುವಿಗೆ ತ್ಯಾಗ ಮಾಡುತ್ತಾಳೆ. ತಾಯಿ ಕಲಿಸಿದ ನೈತಿಕ ಮೌಲ್ಯಗಳು ಮಗುವಿನ ಭವಿಷ್ಯಕ್ಕೆ ಭದ್ರಬುನಾದಿ. ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ತಾಯಿಯ ಪಾತ್ರ ಬಹುಮುಖ್ಯ ಎಂದು ಹೇಳಿದರು.
ನಾಗಠಾಣ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯ ಉಪ ಪ್ರಾಚಾರ್ಯ ಪ್ರಮೋದ ಮೆಂಚ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಂದಿರು ಕುಟುಂಬದ ಭಾವನಾತ್ಮಕ ಬೆನ್ನೆಲುಬು.ಅವರು ದೇವರ ಅಮೂಲ್ಯ ಉಡುಗೊರೆ.‘ಜನನಿ ತಾನೇ ಮಗುವಿನ ಮೊದಲ ಗುರು’ ಎಂಬAತೆ ಮಗುವಿನ ಸಮಗ್ರ ಬದುಕು ರೂಪಿಸುವಲ್ಲಿ ತಾಯಿಯ ಪಾತ್ರ ಅನನ್ಯ ಎಂದು ಹೇಳಿದರು.
ಉಪನ್ಯಾಸ ನೀಡಿದ ಶಿಕ್ಷಕ ಸಂತೋಷ ಬಂಡೆ, ಭೂಮಿಯ ಮೇಲೆ ನಿಸ್ವಾರ್ಥ ಮನಸ್ಸಿನ ಜೀವವೇ ತಾಯಿ. ತಾಯಿಯು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಎಲ್ಲರೊಂದಿಗೆ ಪ್ರೀತಿ, ಕರುಣೆಯನ್ನು ತೋರಿಸುವ ಗುಣವನ್ನು ಬೆಳೆಸುತ್ತಾಳೆ. ತಾಯಿಯು ಮೈತುಂಬಾ ಕಣ್ಣಾಗಿ ಇದ್ದು ಮಕ್ಕಳ ಭವಿಷ್ಯ ನಿರ್ಮಾಣ ಮಾಡಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ಶಿಕ್ಷಕರಾದ ಎಂ ಎಸ್ ಪಾಪನಾಳಮಠ,ರಾಘು ಮೊಗಳ,ಭೀಮಾಶಂಕರ ಕೋರೆ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಮಧುಮತಿ ನಿಕ್ಕಂ, ರೂಪಾ ಶಹಾಪುರ, ಸರೋಜಿನಿ ಕಟ್ಟಿಮನಿ, ರೇಣುಕಾ ಭಜಂತ್ರಿ, ಲಕ್ಷ್ಮೀ ಮೇತ್ರಿ,ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು, ತಾಯಂದಿರು, ಪಾಲಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ತಮ್ಮ ತಾಯಂದಿರ ಪಾದಪೂಜೆ ಮಾಡಿದರು. ಜೊತೆಗೆ ತಾಯಂದಿರು ಮಕ್ಕಳಿಗೆ ಕೈತುತ್ತು ಉಣಿಸಿದರು.

Most Popular

To Top
error: Content is protected !!