Gummata Nagari

Bijapur

ನೀರು ದುರ್ಬಳಕೆ ಮಾಡಿದರೆ 5000 ರೂ. ದಂಡ : ಎಚ್ಚರಿಕೆ

 

ಬೆಂಗಳೂರು: ನಗರದಲ್ಲಿ ದಿನನಿತ್ಯದ ಬಳಕೆಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ವಿಚಾರ ಈಗಾಗಲೇ ರಾಜ್ಯದಾದ್ಯಂತ ಸುದ್ದಿಯಾಗಿದೆ. ಇದೀಗ ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ನೀರಿನ ಪೋಲು, ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, 5000 ರೂ. ವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ! ಒಟ್ಟಾರೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು ಎಂದು ಸೊಸೈಟಿ ಹೇಳಿದೆ.
ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೈನಂದಿನ ನೀರಿನ ಬಳಕೆ ವೇಳೆ ಹೆಚ್ಚು ಜಾಗರೂಕತೆ ವಹಿಸುವಂತೆ ಬೆಂಗಳೂರಿನ ಹಲವಾರು ಹೌಸಿಂಗ್ ಸೊಸೈಟಿಗಳು ನಿವಾಸಿಗಳಿಗೆ ಸೂಚನೆ ನೀಡಿವೆ. ವೈಟ್‌ಫೀಲ್ಡ್, ಯಲಹಂಕ ಮತ್ತು ಕನಕಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರಿನ ತೀವ್ರ ಕೊರತೆ ಎದುರಾಗಿದೆ.
ವೈಟ್‌ಫೀಲ್ಡ್ನಲ್ಲಿರುವ ಪಾಮ್ ಮೆಡೋಸ್ ಹೌಸಿಂಗ್ ಸೊಸೈಟಿಯು ನಿವಾಸಿಗಳಿಗೆ ನೋಟಿಸ್ ಕಳುಹಿಸಿದ್ದು, ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ನೀರು ಸರಬರಾಜಾಗುತ್ತಿಲ್ಲ ಎಂದು ಹೇಳಿದೆ. ಸೊಸೈಟಿಯ ಅಧಿಕಾರಿಗಳು ಬೋರ್‌ವೆಲ್‌ಗಳ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಬೋರ್‌ವೆಲ್‌ಗಳ ನೀರಿನ ಪ್ರಮಾಣ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸೊಸೈಟಿ ಆತಂಕ ವ್ಯಕ್ತಪಡಿಸಿದೆ.
ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ನೀರಿನ ಬಳಕೆಯನ್ನು ಶೇಕಡಾ 20 ರಷ್ಟು ಕಡಿಮೆ ಮಾಡುವಂತೆ ನಿವಾಸಿಗಳಿಗೆ ಸೂಚಿಸಲು ಸೊಸೈಟಿ ನಿರ್ಧರಿಸಿದೆ. ಇದನ್ನು ಮತ್ತೆ ಮತ್ತೆ ಉಲ್ಲಂಘಿಸಿದಲ್ಲಿ ಹೆಚ್ಚಿನ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ನೀರಿನ ದುರ್ಬಳಕೆ ಮೇಲೆ ಕಣ್ಗಾವಲಿಡಲು ಸಿಬ್ಬಂದಿ ನೇಮಕ ಮಾಡುವುದಾಗಿಯೂ ಹೇಳಿದೆ.

ಮತ್ತೊಂದೆಡೆ, ಕನಕಪುರದಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್ ಕೂಡ ತನ್ನ 2,500 ಫ್ಲ್ಯಾಟ್‌ಗಳ ನಿವಾಸಿಗಳಿಗೆ ನೀರಿನ ಬಳಕೆ ಮಿತಿಗೊಳಿಸುವಂತೆ ಸೂಚನೆಯುಳ್ಳ ಸಂದೇಶ ಕಳುಹಿಸಿದೆ. ಸದ್ಯ ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ಮಾತ್ರ ನೀರು ಸಂಗ್ರಹವಾಗಿದ್ದು, ಅದು ಹೆಚ್ಚು ದಿನ ಉಳಿಯುವುದಿಲ್ಲ. ಪೂರೈಕೆ ಸಮಸ್ಯೆ ಇದೆ ಎಂದು ಅಪಾರ್ಟ್ಮೆಂಟ್ ತಿಳಿಸಿದೆ.

ಬೆಂಗಳೂರು ಮತ್ತು ರಾಜ್ಯದ ಇತರ ಕಡೆಗಳಲ್ಲಿನ ನೀರಿನ ಸಮಸ್ಯೆ ಬಗ್ಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದು, ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಟ್ಯಾಂಕರ್ ಮಾಫಿಯಾದವರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Most Popular

To Top
error: Content is protected !!