Gummata Nagari

Bijapur

ಬಿಜಾಪುರ ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಗಿಟ್ಟಿಸಿಕೊಂಡ ರಾಜು ಆಲಗೂರ

 

ಬಿಜಾಪುರ:  ಅಂತು ಇಂತೂ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷ ಮಹಾಶಿವರಾತ್ರಿಯ ದಿನದಂದೇ ರಣ ಕಹಳೆ ಮೊಳಗಿಸಿದಂತಿದೆ. ಕುತೂಹಲಕ್ಕೆ ಕಾರಣವಾದ ಬಿಜಾಪುರ ಮೀಸಲು ಮತಕ್ಷೇತ್ರದ ಟಿಕೆಟ್‌ನ್ನು ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಪ್ರೊ. ರಾಜು ಆಲಗೂರ ಅವರಿಗೆ ನೀಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಭದ್ರ ಕೋಟೆಯನ್ನು ಛಿದ್ರ ಮಾಡಲು ಈ ಬಾರಿ ಕಾಂಗ್ರೇಸ್ ಪಣ ತೊಟ್ಟಿದೆ.

ಶುಕ್ರವಾರ(ನಿನ್ನೆ) ಸಂಜೆ  ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲೆ ಕೈ ಅಭ್ಯರ್ಥಿಯನ್ನಾಗಿ ರಾಜು ಆಲಗೂರ ಹೆಸರು ಬಹಿರಂಗಗೊಳ್ಳುತ್ತಿದ್ದoತೆ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಬಿರುಸಿನ ಸಂಚಲನ ಉಂಟು ಮಾಡಿದೆ. ಪ್ರಬಲ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೇಸ್ ಪಾಳೆಯದಲ್ಲಿ ಸೋಲು ಗೆಲುವಿನ ಬಿರುಸಿನ ಚರ್ಚೆಗಳು ಆರಂಭಗೊoಡಿವೆ.
ಸಧ್ಯ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ಈ ಹಿಂದೆ ಸತತವಾಗಿ ಮೂರು ಬಾರಿ ಈ ಕ್ಷೇತ್ರ ವಶಪಡಿಸಿಕೊಳ್ಳಲು ಕಾಂಗ್ರೇಸ್ ಪ್ರಕಾಶ ರಾಠೋಡ ಅವರನ್ನು ಕಣಕ್ಕೆ ಇಳಿಸಿ ಶತಾಯ ಗತಾಯ ಪ್ರಯತ್ನ ನಡೆಸಿ  ವಿಫಲವಾಗಿತ್ತು. ಈ ಬಾರಿ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ರಾಜು ಆಲಗೂಲ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

ಪ್ರೊ. ರಾಜು ಆಲಗೂರ ಜಿಲ್ಲೆಯಲ್ಲಿ ತಮ್ಮದೆ ಆದ ವರ್ಚಸ್ಸನ್ನು ಹೊಂದಿದ್ದಾರೆ. ಜಿಲ್ಲೆಯ ಪ್ರಭಾವಿ ದಲಿತ ನಾಯಕರಾಗಿ ಸಧ್ಯ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬಳ್ಳೂಳ್ಳಿ ಮೀಸಲು ವಿದಾಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ ನಾಗಠಾಣ ಮೀಸಲು ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಕರ್ನಾಟಕದ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಜಿಲ್ಲೆಯ ಅನುಭವಿಕ ರಾಜಕಾರಣಿಯಾಗಿದ್ದಾರೆ.

ಅತ್ತ ಬಿಜೆಪಿ ಪಾಳಯದಲ್ಲಿ  ಈ ಹಿಂದೆ ಚಿಕ್ಕೋಡಿ ಕ್ಷೇತ್ರದಲ್ಲಿಯೂ ಗೆಲುವು ಅನುಭವಿಸಿ, ತದನಂತರ ಬಿಜಾಪುರ ಜಿಲ್ಲೆಯಿಂದ ಸ್ಪರ್ಧಿಸಿದ ಸಂಸದ ರಮೇಶ ಜಿಗಜಿಣಗಿ ಎದುರಾಳಿ ಕಾಂಗ್ರೇಸ್ ಪಕ್ಷಕ್ಕೆ 3 ಬಾರಿ ಸೋಲಿನ ಕಹಿ ಉಣಬಡಿಸಿ, ಇಂದಿಗೂ ಸಂಸದರಾಗಿ ಮುಂದುವರೆದಿದ್ದಾರೆ.

ಒಟ್ಟು 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಕಾಂಗ್ರೇಸ್ ಶಾಸಕ ಬೆಂಬಲದೊoದಿಗೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ರಾಜು ಆಲಗೂರ ಅವರನ್ನು ಕಣಕ್ಕಿಳಿಸುವ ಮೂಲಕ ತನ್ನ ಗೆಲುವಿನ ಪಥದಲ್ಲಿ ನಾಗಾಲೋಟದಲ್ಲಿ ಮುಂದೆ ಸಾಗಲು ಬಿರುಸಿನ ಕಸರತ್ತು ನಡೆಸಿದೆ.

ಆದರೆ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವಾಗಲಿ, ಜೆಡಿಎಸ್ ಪಕ್ಷವಾಗಲಿ ತನ್ನ ಅಭ್ಯರ್ಥಿಯನ್ನು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಈ ಹಿಂದೆ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯ ಅಭ್ಯರ್ಥಿ ಘೋಷಣೆ ಮಾಡುವಲ್ಲಿ ಮೊದಲ ಹೆಜ್ಜೆ ಇಟ್ಟು ಅತೀ ಹೆಚ್ಚು ಸೀಟು ವಶಪಡಿಸಿಕೊಂಡಿತ್ತು. ಲೋಕ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿ ಘೋಷಣೆ ಮೂಲಕ ಮುಂದಡಿ ಇಟ್ಟಿದೆ. ಇಬ್ಬರು ಸಚಿವರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡ ಕಾಂಗ್ರೇಸ್  ಮುಂಬರುವ ದಿನಗಳಲ್ಲಿ  ಬಿಜೆಪಿ ಭದ್ರಕೋಟೆಯನ್ನು ಛಿದ್ರ ಮಾಡಲು  ಯಾವ ರೀತಿಯ ರಣತಂತ್ರ ಹಣೆಯುತ್ತದೆ ಎಂಬುದು ಕಾದು ನೋಡಬೇಕು.

ವಿಶೇಷ ವರದಿ : ಮಲಕಪ್ಪ ಹೂಗಾರ.

Most Popular

To Top
error: Content is protected !!