Gummata Nagari

Bijapur

ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ಶಾಸಕ ನಾಡಗೌಡ

 

ಮುದ್ದೇಬಿಹಾಳ: ನದಾಫ ಪಿಂಜಾರ ಸಮಾಜದವರು ಕಾಯಕ ಜೀವಿಗಳು, ಶ್ರಮ ಜೀವಿಗಳು. ಇವರು ತಮ್ಮ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವಂಥವರು. ಇವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನದಾಫ ಪಿಂಜಾರ ಸಮಾಜ ಸಂಘಟನೆ ಆಗುತ್ತಿರುವುದು ಒಳ್ಳೇಯ ಬೆಳವಣಿಗೆ ಎಂದು ಕೆಎಸ್‌ಡಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಇಲ್ಲಿನ ಹುಡ್ಕೋ ಹಿಂಭಾಗದಲ್ಲಿರುವ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಮುದ್ದೇಬಿಹಾಳ ತಾಲೂಕ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಂತ್ರಗಳ ಆಧುನೀಕರಣದಿಂದ ಮೂಲ ವೃತ್ತಿಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಇದರ ಪರಿಣಾಮ ನದಾಫ ಪಿಂಜಾರ ಸಮಾಜದ ಶ್ರಮಜೀವಿಗಳ ಮೇಲೂ ಆಗಿದೆ. ಆದರೂ ವೃತ್ತಿ ಮುಂದುವರೆಸುವ ಅನಿವಾರ್ಯತೆ ಇವರಿಗಿದೆ. ಈ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು ನಿವೇಶನದ ಬೇಡಿಕೆ ಇಟ್ಟಿದ್ದಾರೆ. ಆದರೆ ಇತ್ತೀಚೆಗೆ ಸರ್ಕಾರದ ನಿಯಮಗಳು ಸಾಕಷ್ಟು ಬದಲಾಗಿದೆ. ನಿವೇಶನ ಬೇಡಿಕೆ ಬದಲು ನೀವೇ ನಿವೇಶನ ಖರೀದಿಸಿದರೆ ನಿಮ್ಮದೇ ಆದ ಸಮುದಾಯ ಭವನ ಕಟ್ಟಲು 20 ಲಕ್ಷ ರೂ ಅನುದಾನ ನೀಡುತ್ತೇನೆ. ಈಗಾಗಲೇ ಅಂಜುಮನ್ ಇಸ್ಲಾಂ ಕಮೀಟಿಗೆ 1.25 ಕೋಟಿ, ಮಕಾನದಾರ ದರವೇಶ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ ನೀಡಿದ್ದೇನೆ. ಮುಸ್ಲಿಂ ಸಮಾಜದಡಿ ಬರುವ ಮಕಾನದಾರ, ಪಿಂಜಾರ, ದರವೇಶಿ, ಖುರೇಶಿ ಎಲ್ಲಾ ಒಂದಾಗಿ 5 ಕೋಟಿ ರೂ ಭವನ ನಿರ್ಮಾಣ ಮಾಡೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಅವರು ಮಾತನಾಡಿ, ನದಾಫ ಪಿಂಜಾರ ಸಮಾಜವು ಎಲ್ಲ ಸಮಾಜದವರೊಂದಿಗೆ ಸಹೋದರತ್ವ ಭಾವದೊಂದಿಗೆ ಬದುಕುವ ಭಾವೈಕ್ಯತೆಯ ಸಮುದಾಯವಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ ನನ್ನಿಂದಲೂ ಸಾಧ್ಯವಾದ ನೆರವು ನೀಡುತ್ತೇನೆ ಎಂದರು.
ಸಮಾಜದ ಬಾಗಲಕೋಟೆ ಜಿಲ್ಲಾಧ್ಯಕ್ಷೆ ರಿಯಾನಾಬಾನು ನದಾಫ, ಉಪನ್ಯಾಸಕ ಡಾ| ಎಚ್.ಟ.ಕಟಗೂರ ಮಾತನಾಡಿದರು. ಸಾನಿಧ್ಯವಹಿಸಿದ್ದ ಹಿರೂರು ಅನ್ನದಾನೇಶ್ವರ ಮಠದ ಜಯಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಎಂ.ಕೆ.ನಧಾಪ ವಕೀಲರು, ಬಿ.ಬಿ.ಪಿಂಜಾರ, ಅಬ್ದೂಲಗಫೂರ ಮಕಾನದಾರ, ಎಲ್.ಎನ್.ನದಾಫ, ಮಹಿಬೂಬ ಮುಲ್ಲಾ, ಲಾಳೆಸಾ ನದಾಫ, ಮಹ್ಮದಹುಸೇನ ಮಾದಿನಾಳ, ಲಾಡ್ಲೇಮಶಾಕ ನಧಾಪ, ಎಂ.ಎA.ಮುದ್ದೇಬಿಹಾಳ ವಕೀಲರು ಸೇರಿ ಹಲವರು ವೇದಿಕೆಯಲ್ಲಿದ್ದರು. ಶಾಸಕರಾದ ನಾಡಗೌಡ, ರಾಜೂಗೌಡರಿಗೆ ಸಮಾಜದ ವತಿಯಿಂದ ಸಮುದಾಯ ಭವನ ನಿವೇಶನ ಬೇಡಿಕೆ ಕುರಿತು ಮನವಿ ಸಲ್ಲಿಸಲಾಯಿತು.

ಮೌಲಾನಾ ಮಹ್ಮದರಫೀಕ ನದಾಫ ಕುರಾನ್ ಪಠಿಸಿದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಟಿ.ಎನ್.ರೂಢಗಿ ಸ್ವಾಗತಿಸಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಾಬು ದಿಡ್ಡಿಮನಿ ವಂದಿಸಿದರು.

 

Most Popular

To Top
error: Content is protected !!