Gummata Nagari

Bijapur

ರೈತರು ಸೂಕ್ತ ನಿರ್ವಾತ ತಾಂತ್ರಿಕತೆ ಅಳವಡಿಸಿಕೊಳ್ಳಿ: ಡಾ. ಎ. ಭೀಮಪ್ಪ

 

ಬಿಜಾಪುರ: ಮಾನವನು ಪುರಾತನ ಕಾಲದಿಂದಲೂ ಬೇಸಾಯ ಪ್ರಾರಂಭಿಸಿದ ದಿನದಿಂದ ಇಂದಿನವರೆಗೆ ತನ್ನ ಅನುಭವದೊಂದಿಗೆ ಅವಶ್ಯಕತೆ, ಬೇಡಿಕೆಗೆ ತಕ್ಕಂತೆ, ಸೂಕ್ತ ತಾಂತ್ರಿಕ ಸಂಶೋಧನೆ, ಬದಲಾವಣೆಯೊಂದಿಗೆ ಬೀಜಗಳ ಸಂಗ್ರಹಣೆ ಮತ್ತು ಸಂರಕ್ಷಣೆ ಮಾಡುತ್ತಾ ಬಂದಿದ್ದಾನೆ. ಆದರೆ ಬದಲಾದ ಪರಿಸ್ಥಿತಿಗೆ ತಕ್ಕಂತೆ ಆಧುನಿಕ ನಿರ್ವಾತ ತಾಂತ್ರಿಕತೆ ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕೃಷಿ ಮಹಾವಿದ್ಯಾಲಯ ವಿದ್ಯಾಧಿಕಾರಿ ಡಾ. ಎ, ಭೀಮಪ್ಪ ಕರೆ ನೀಡಿದರು.

ನಗರದ ಹೊರವಲಯದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ಜರುಗಿದ ನಿರ್ವಾತ ಕಂತೆಕಟ್ಟುವ ತಂತ್ರಜ್ಞಾನ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇಂದು ಸಾರಿಗೆ, ಅಧಿಕ ತೇವಾಂಶ, ಸಂಸ್ಕರಣೆ, ಥ್ರೆಸಿಂಗ್, ಶೇಖರಣಾ ಕೀಟಗಳ ಹಾವಳಿಯಿಂದಾಗಿ ಶೇ. 10 ರಷ್ಟು ಆಹಾರಧಾನ್ಯ ನಷ್ಟವಾಗುತ್ತಿದೆ. ಆದರೆ ರೈತರು ಸೂಕ್ತ ನಿರ್ವಾತ ತಂತ್ರಜ್ಞಾನ ಅಳವಡಿಸಿ ಆಹಾರಧಾನ್ಯ ನಷ್ಟವಾಗುವದನ್ನು ತಪ್ಪಿಸಬಹುದಾಗಿದೆ ಎಂದರು.

ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ. ಎಸ್. ಸಜ್ಜನ, ಮಾತನಾಡಿ, ರೈತರು ಹಿಂದೆ ತಮ್ಮ ಆಹಾರಧಾನ್ಯಗಳನ್ನು ಹಗೆಯಲ್ಲಿ ಕೆಡದಂತೆ ವರ್ಷವಿಡಿ ಇಡುತ್ತಿದ್ದರು. ಆದರೆ ಕಾಲ ಬದಲಾದಂತೆ ಅವೆಲ್ಲವೂ ಇಂದು ಮಾಯವಾಗಿವೆ. ಆಧುನಿಕತೆ ಹೆಚ್ಚಿದಂತೆ ವಿವಿಧ ತಾಂತ್ರಿಕತೆಗಳ ಅವಿಷ್ಕಾರಗಳಾಗುತ್ತಿವೆ. ಕಾರಣ ರೈತರು ನಿರ್ವಾತ ತಂತ್ರಜ್ಞಾನ ಮೂಲಕ ಧಾನ್ಯಗಳ ಸಂಗ್ರಹಣೆ ಮತ್ತು ಪ್ಯಾಕಿಂಗ್ ಮಾಡಿ ಉತ್ತಮ ಲಾಭಗಳಿಸಬಹುದಾಗಿದೆ ಎಂದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ಬಾಲರಾಜ ಬಿರಾದಾರ ಮಾತನಾಡಿ, ರೈತ ಉತ್ಪಾದಕ ಸಂಸ್ಥೆಗಳಿoದ ಪ್ಯಾಕಿಂಗ್  ಮಾಡಿ ಮಾರುಕಟ್ಟೆ ಮಾಡಲು ಸಹಾಯಧನ ಲಭ್ಯವಿದೆ. ರೈತರು ಮತ್ತು ಸ್ವಸಹಾಯ ಸಂಘದ ಸದಸ್ಯರು ಇದರ ಲಾಭ ಪಡೆಯಲು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಇಂದು ರೈತರು ತಮ್ಮ ಧಾನ್ಯಗಳನ್ನು ಸಂಗ್ರಹಿಸಲು ಅವೈಜ್ಞಾನಿಕ ಸಂಗ್ರಹಣೆ, ಸಂಗ್ರಹಣಾ ಸೌಲಭ್ಯ ಕೊರತೆ, ಅಸಮರ್ಪಕ ಸಾಗಾಣಿಕೆ, ಶೀತಲಗೃಹ ಕೊರತೆ, ಅವ್ಯವಸ್ಥಿತ ಮಾರಾಟ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ರೈತರು ಸರಕಾರದ ಸೌಲಭ್ಯ ಪಡೆದು ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ವ್ಯವಸ್ಥಿತ ಮಾರಾಟ ಮಾಡಲು ನಿರ್ವಾತ ಕಂತೆ ಕಟ್ಟುವ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಡಾ. ಡಿ. ಎಸ್. ಉಪ್ಪಾರ ಮಾತನಾಡಿ, ನಿರ್ವಾತ ಕಂತೆ ಕಟ್ಟುವ ತಂತ್ರಜ್ಞಾನ ಮತ್ತು ಡಾ. ಆರ್. ಬಿ. ಜೊಳ್ಳಿ ಪ್ಯಾಕಿಂಗ್ ವ್ಯವಸ್ಥೆ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಎಪ್‌ಪಿಓ ಸಂಯೋಜನಾಧಿಕಾರಿ ಮಹಾದೇವ ಅಂಬಲಿ, ಜವಾರಿ ಆರ್ಗ್ಯಾನಿಕ್ಸ್ ಎಂಬ ಬ್ರ್ಯಾಂಡ್ ಎಫಪಿಓಗಳ ಮೂಲಕ ವಿವಿಧ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರುಕಟ್ಟೆ ಮಾಡುವ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಊರ್ವಿ ಲೈಫ್‌ನ ಬೋಜನಗೌಡ ಪಾಟೀಲ, ಪ್ರಗತಿಪರ ರೈತರಾದ ಎಸ್. ಟಿ. ಪಾಟೀಲ, ಸಿದ್ದಪ್ಪ ಬೂಸಗೊಂಡ, ಶಿವಾನಂದ ಹುಗ್ಗಿ, ಕಾಶೀಮ, ಚಾಂದಬಿ ಆಲಮೇಲ, ವಿಜಯಲಕ್ಷ್ಮಿ ಬಿರಾದಾರ, ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು, ರೈತಮಹಿಳೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಡಾ. ಎಸ್. ಎಂ. ವಸ್ತçದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ರಾಠೋಡ ನಿರೂಪಿಸಿದರು, ಡಾ. ಮಲ್ಲಪ್ಪ ವಂದಿಸಿದರು.

 

Most Popular

To Top
error: Content is protected !!