Gummata Nagari

Headlines

ಮೆಟ್ರೋ ಬರುವಾಗ ಹಳಿಗೆ ಹಾರಿ ಯುವಕ ಆತ್ಮಹತ್ಯೆ

 

ಬೆಂಗಳೂರು: ನಮ್ಮ ಮೆಟ್ರೋ ಟ್ರ‍್ಯಾಕ್‌ಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ದುರದೃಷ್ಟವಶಾತ್ ಮೆಟ್ರೋ ರೈಲಿಗೆ ಸಿಲುಕಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದಬಂದಿದೆ.

ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಟ್ರೈನ್ ಬರುವಾಗ ಹಳಿಗೆ ಜಿಗಿದು ಪ್ರಾಣಕಳೆದುಕೊಂಡಿದ್ದಾನೆ. ಮೃತ ಯುವಕ ಯಾರು? ಯಾಕಾಗಿ ಆತ್ಮಹತ್ಯೆ ಮಾಡಿಕೊಂಡ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಾರಣಕ್ಕೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೂಡಲೇ ಸಿಬ್ಬಂದಿ ಮೆಟ್ರೋದಿಂದ ಎಲ್ಲ ಪ್ರಯಾಣಿಕರನ್ನು ಇಳಿಸಿದ್ದಾರೆ. ಮಾರ್ಚ್ 21ರ ಮಧ್ಯಾಹ್ನ 2:10ರ ಸುಮಾರಿಗೆ ಹಳಿಗೆ ಹಾರಿದ್ದಾನೆ. ಈ ಬಗ್ಗೆ ಬಿಎಂಆರ್‌ಸಿಎಲ್ ಎಕ್ಸ್ ಮೂಲಕ ತಿಳಿಸಿದೆ.
ಸದ್ಯ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ಓಡಾಟ ಸ್ಥಗಿತವಾಗಿದ್ದು, ಮಾಗಡಿ ರೋಡ್‌ನಿಂದ ವೈಟ್ ಫೀಲ್ಡ್ವರೆಗೆ ಮಾತ್ರ ಮೆಟ್ರೋ ಸಂಚಾರ ಇದೆ. ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಯಾವುದೇ ಸೇವೆ ಇಲ್ಲ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಹಾಗೂ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

 

ಮೆಟ್ರೋ ಬರುತ್ತಿದ್ದುದನ್ನು ಗಮನಿಸಿದ ವ್ಯಕ್ತಿ ಟ್ರ‍್ಯಾಕ್‌ಗೆ ಹಾರಿದ್ದಾನೆ. ಪರಿಣಾಮ ಮೆಟ್ರೋಗೆ ಸಿಲುಕೊಂಡು ಮೃತಪಟ್ಟಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ .ಎಸ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತ ವ್ಯಕ್ತಿಯ ಬಗ್ಗೆ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

ಇದೇ ಮೊದಲ ಸಾವು:
ಈ ರೀತಿ ಮೆಟ್ರೋ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವಿನ್ನಪ್ಪಿರುವುದು ಇದೇ ಮೊದಲ ಪ್ರಕರಣವಾಗಿದೆ. ಈ ಹಿಂದೆ ಹಳಿ ಮೇಲೆ ಜಿಗಿದಿರುವ ಪ್ರಕರಣಗಳು ನಡೆದಿದ್ದವು. ಆದ್ರೆ, ಯಾವುದೇ ಸಾವು-ನೋವು ಆಗಿರಲಿಲ್ಲ.

Most Popular

To Top
error: Content is protected !!