Gummata Nagari

Bijapur

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆ

 

ಮುದ್ದೇಬಿಹಾಳ: ಏ.26ರಂದು ಬಿಜಾಪುರ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಪ್ರಚಾರಕ್ಕಾಗಿ ಬರಲಿರುವ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲಿ ಜಿಲ್ಲೆಯ ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 10 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಕೆಎಸ್‌ಡಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಇಲ್ಲಿನ ಹುಡ್ಕೋದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಅವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ, ಪಕ್ಷದ ಕರ್ನಾಟಕ ಉಸ್ತುವಾರಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿ ರಾಷ್ಟç, ರಾಜ್ಯದ ಹಲವು ಮುಖಂಡರು ಆಗಮಿಸಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಜನತೆಗೆ ತಿಳಿಸಿ ಹೇಳಲಿದ್ದಾರೆ ಎಂದರು.

ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿರುವ ನಮ್ಮ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರು ಎರಡು ಬಾರಿ ಶಾಸಕರಾಗಿ, 10 ವರ್ಷ ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಡಳಿತದ ಅನುಭವ ಇದ್ದವರು. ಪ್ರೊಫೇಸ್‌ರ್ ಆಗಿ ವಾಕ್ಚಾತುರ್ಯ ಪಡೆದವರು. ಯಾವುದೇ ಅಪರಾಧ ಹಿನ್ನೆಲೆ ಇಲ್ಲದಂಥವರು. ಅನ್ಯಾಯದ ವಿರುದ್ಧ ಧ್ವನಿ ಎತ್ತುವಂಥವರು. ವರ್ಗದ, ಸಮಾಜದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ನಾಗಠಾಣ ಮತಕ್ಷೇತ್ರಲ್ಲಿ ವಿಠ್ಠಲ ಕಟಕದೊಂಡ ಅವರಿಗಾಗಿ ತಮ್ಮ ಸ್ಪರ್ಧೆ ಬಿಟ್ಟುಕೊಟ್ಟಂಥವರು. ನಮ್ಮ ಭಾಗದ ನೀರಾವರಿ, ಪ್ರವಾಸೋದ್ಯಮ ಸೇರಿ ಹಲವು ಸಮಸ್ಯೆಗಳ ಅರಿವಿರುವ ಅವರು ಸಂಸತ್ತಿನಲ್ಲಿ ಪ್ರಭಲವಾಗಿ ಗಮನ ಸೆಳೆಯುವ ರೀತಿಯಲ್ಲಿ ಮಾತನಾಡುವಂಥವರು. ಇಂಥವರ ಅವಶ್ಯಕತೆ ಸಂಸತ್ತಿಗೆ ಇದ್ದು ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಾವು ಗ್ಯಾರಂಟಿ ಜಾರಿಗೊಳಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಅನ್ನುವ ವಿಶ್ವಾಸ ಜನರಲ್ಲಿ ಬಂದಿದೆ. ಎಐಸಿಸಿ ಕೂಡ ದೇಶದ ಜನತೆಗೆ 25 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದೆ. ಕೇಂದ್ರದ ಬಿಜೆಪಿ ಸರ್ಕಾರ ಯಾವ ರೀತಿ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿದೆ, ಮೋದಿ ಸರ್ಕಾರ ಹೇಗೆ ಜನಸಾಮಾನ್ಯರನ್ನು ವಂಚಿಸುತ್ತಿದೆ ಎನ್ನುವ ಕುರಿತು ಅಂದಿನ ಬೃಹತ್ ಬಹಿರಂಗ ಸಭೆಯಲ್ಲಿ ನಮ್ಮ ನಾಯಕರು ಮಾತನಾಡುತ್ತಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾರ್ಯದರ್ಶಿ ಗೋಪಿ ಮಡಿವಾಳರ, ಎಐಸಿಸಿ ಸದಸ್ಯ ಬಾಪೂರಾಯ ದೇಸಾಯಿ ಹಡಗಲಿ ಇದ್ದರು.

*ಮೋದಿ ಬುದ್ದಿಗೇಡಿ:
ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿ ಬಡವರು ಚಿನ್ನದ ತಾಳಿ ಕಟ್ಟಿಕೊಳ್ಳುವ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್. ದಶಕಗಳ ಹಿಂದೆ ಬಡವರ ಕೊರಳಲ್ಲಿ ಹಿತ್ತಾಳೆಯ ತಾಳಿ ಇರುತ್ತಿತ್ತು. ಪ್ರಧಾನಿ ಮೋದಿ ಭಾಷಣವೊಂದರಲ್ಲಿ ಕಾಂಗ್ರೆಸ್ ಆಯ್ಕೆ ಮಾಡಿದರೆ ಬಡವರ ಚಿನ್ನದ ತಾಳಿ ಕಸಿದುಕೊಳ್ತಾರೆ ಎಂದು ಹೇಳಿದ್ದು ಬುದ್ದಿಗೇಡಿತನದ್ದು. ಇದು ದೇಶದಲ್ಲಿ ಹಿಂದು ಮುಸ್ಲಿಂರ ನಡುವೆ ಜಗಳ ಹಚ್ಚಲು ಹೂಡಿರುವ ಸಂಚಿನ ಭಾಗವಲ್ಲದೆ ಬೇರೇನೂ ಅಲ್ಲ. ಕಾಂಗ್ರೆಸ್ ಗೆದ್ದರೆ ಸಂಪತ್ತನ್ನು ಮುಸ್ಲೀಮರಿಗೆ ಹಂಚಿಕೆ ಮಾಡ್ತಾರೆ ಎಂದು ಅವರೇ ಹೇಳಿದ್ದು ಯಾರ ಸಂಪತ್ತನ್ನು ಯಾರೂ ಕಸಿದುಕೊಂಡು ಯಾರಿಗೂ ಹಂಚುವುದು ಸಾಧ್ಯವಿಲ್ಲ. ಆದರೆ ಸಂಪತ್ತು ಅಂಬಾನಿ, ಅದಾನಿ ಅಂಥವರ ಬಳಿ ಕೇಂದ್ರೀಕೃತವಾಗಿರುವುದನ್ನು ತಡೆಯಲು ಮೀಸಲಾತಿ ಅನ್ವಯ ಹಂಚಿಕೆಯ ಮಾತನ್ನು ನಮ್ಮ ನಾಯಕರು ಆಡಿರಬಹುದು ಎಂದು ನಾಡಗೌಡರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
*ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ:
ಲೋಕಸಭೆ ಚುನಾವಣೆಯ ನಂತರ ಮುಖ್ಯಮಂತ್ರಿ ಬದಲಾಗ್ತಾರೆ ಅನ್ನೋದು ಸುಳ್ಳು. ಸಧ್ಯಕ್ಕೆ ನಮ್ಮಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಕಾಂಟ್ರೋವರ್ಷಿ ವಿಷಯಗಳಲ್ಲಿ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ. ಡಿಕೆಶಿ ಅವರು ಮುಖ್ಯಮಂತ್ರಿಯಾಗಬೇಕೆನ್ನುವ ಆಕಾಂಕ್ಷೆ ವ್ಯಕ್ತಪಡಿಸಿದ್ದು ಸಹಜ, ನನಗೂ ಮುಖ್ಯಮಂತ್ರಿ ಆಗಬೇಕೆನ್ನುವ ಆಸೆ ಇದೆ. ಆದರೆ ಪಕ್ಷದ ಹೈಕಮಾಂಡ್ ಹೇಳಿದಂತೆ ನಾವೆಲ್ಲ ಕೇಳಬೇಕು. ಸಚಿವ ಭೈರತಿ ಸುರೇಶ ಅವರು ಪ್ರಚಾರವೊಂದರಲ್ಲಿ ಮಾತನಾಡಿ ಚುನಾವಣೆ ಮುಗಿದ ಮೇಲೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಬೇಕೆoದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಹೇಳಿದ್ದು ಅವರ ವೈಯುಕ್ತಿಕ ವಿಚಾರ. ತಮ್ಮ ಸಮುದಾಯದ ಕಾಳಜಿಯಿಂದ ಅವರು ಹೇಳಿದ್ದಾರೆಯೇ ಹೊರತು ಬದಲಾವಣೆ ಏನೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ನಾಡಗೌಡರು ಪ್ರತಿಕ್ರಿಯಿಸಿದರು.
*ಜಿಗಜಿಣಗಿ ಒಳ್ಳೇಯವರು:
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವೈಯಕ್ತಿಕವಾಗಿ ಒಳ್ಳೇಯವರು. ನಾನು ಅವರೊಂದಿಗೆ ವೈಯುಕ್ತಿಕವಾಗಿ ಉತ್ತಮ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆದರೆ ಅವರಿಗೀಗ ವಯಸ್ಸಾಗಿದೆ. ಮೇಲಾಗಿ ಅವರು ಜನರ ಸಂಪರ್ಕದಿAದ ದೂರಾಗುತ್ತಿದ್ದಾರೆ. ನನ್ನ ಮುಖ ನೋಡಿ ಯಾರು ವೋಟ್ ಹಾಕ್ತಾರೆ. ಮೋದಿ ಮುಖ ನೋಡಿ ವೋಟ್ ಹಾಕ್ತಾರೆ ಎಂದು ಅವರೇ ಹೇಳುತ್ತಿದ್ದಾರೆ. ಬಿಜೆಪಿಗೆ ಮೋದಿ ಒಬ್ಬರೇ ನಾಯಕರು. ಕಾಂಗ್ರೆಸ್ಸಿನಲ್ಲಿ ನಾಯಕರ ಪಟ್ಟಿಯೇ ಇದೆ. ಪ್ರಧಾನಿಯಾಗುವ ಅರ್ಹತೆ ಇದ್ದವರು ಬೇಕಾದಷ್ಟು ಜನ ಇದ್ದಾರೆ ಎಂದರು.

Most Popular

To Top
error: Content is protected !!