Gummata Nagari

Bijapur

ಚರಿತ್ರೆಗಿಂತ ಸಾಧನೆ ಮುಖ್ಯ: ಲೇಖಕಿ ಶಾರದಾ ಕೊಪ್ಪ

ಬಿಜಾಪುರ: 12ನೇ ಶತಮಾನದ ಬಸವಾದಿ ಶರಣರು ಭೌತಿಕ, ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮಾರಸ್ಯಗೊಳಿಸಿ ಸವಿದು ಅನುಭವಿಸಿ ಇಹಪರ ಎಂಬ ಅಖಂಡ ಪರಿಪೂರ್ಣ ನಿತ್ಯ ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರವರು. ಅಂತಹ ವಚನಕಾರರಲ್ಲಿ ಶಿವಶರಣೆ ಮುಕ್ತಾಯಕ್ಕಾ-ಅಜಗಣ್ಣನವರು ಪ್ರಮುಖರು. ಅವರ ವಚನಗಳಲ್ಲಿ ಆತ್ಮಸಾಕ್ಷಾತ್ಕಾರ, ಜ್ಞಾನಸಾಕ್ಷಾತ್ಕಾರ ರೂಪಿಸಲು ಸಂತ ಮಹಾಂತರ ಚಿಂತನೆಗಳನ್ನು ಮೆಲಕು ಹಾಕುವುದು ಅಲ್ಲಮಪ್ರಭುಗಳು ಮಧ್ಯ ನಡೆಯುವಂತಹ ಸಂವಾದ 38 ಬೆಡಗಿನ ವಚನಗಳಲ್ಲಿ ನಾವು ಕಾಣುತ್ತೇವೆ. ಒಟ್ಟು 58 ವಚನಗಳು ಲಭ್ಯವಾಗಿವೆ. ಚರಿತ್ರೆಗಿಂತ ಸಾಧನೆ ಮುಖ್ಯ. ಶರಣರನ್ನು ನೆನೆಯುವುದು ಜನಾಂಗದ ಉನ್ನತಿಗಾಗಿ ಶ್ರಮಿಸಿದವರು ಅವರು ನಮಗೆ ಜೀವನ ಅಮೃತ ನೀಡಿದವರು ಎಂದು ಲೇಖಕಿ ಶಾರದಾ ಕೊಪ್ಪ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶಿವಶರಣೆ ಮುಕ್ತಾಯಕ್ಕ-ಅಜಗಣ್ಣರ ಅವರ ಅನುಭಾವ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಹಿರಿಯ ಸಂಶೋಧಕ ಡಾ. ಎಮ್.ಎಸ್. ಮದಭಾವಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, 12ನೇ ಶತಮಾನದ ಸಾಹಿತ್ಯ ಶತ ಶತಮಾನಗಳಿಂದ ನಡೆಯುತ್ತಲಿದೆ. ಆದರೆ ಅದರ ವಿಶ್ಲೇಷಣೆಯ ಕೊರತೆ ಕಾಣುತ್ತಿದ್ದೇವೆ. ವಚನಗಳ ಕುರಿತು 13 ರಿಂದ 19ರ ಶತಮಾನದವರೆಗೆ ವಚನ ಸಾಹಿತ್ಯ ವಿಶ್ಲೇಷಣೆ ಅದರ ವಿವರಣೆ ಸರಿಯಾಗಿಲ್ಲ. ಆದರೂ 20ನೇ ಶತಮಾನದಲ್ಲಿ ಫ.ಗು. ಹಳಕಟ್ಟಿ ಅವರು ಶರಣ ಮಡಿವಾಳ ಮಾಚಿದೇವರ ವಚನಗಳಿಗೆ ಸಂಕಲನ ಮಾಡಿದರು.  ಹೀಗಾಗಿ ವಚನ ಸಾಹಿತ್ಯಕ್ಕೆ ಹೆಚ್ಚು ಮಹತ್ವ ಬಂದಿತು. ಶರಣ ಪರಂಪರೆಯಲ್ಲಿಯೇ ಪರಿಪೂರ್ಣ ವಿಕಸನವಾದ ನವ್ಯ ದಿವ್ಯ ಭವ್ಯವಾದ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು ಬಸವಾದಿ ಶರಣರು. ಮುಕ್ತಾಯಕ್ಕ-ಅಜಗಣ್ಣ ಅವರ ವಚನಗಳು ನಮಗೆ ಇಂದು ದಾರಿದೀಪವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ತುಂಬಾ ಅಗತ್ಯತೆ ಇದೆ ಎಂದರು.

ಡಾ. ವಿ.ಡಿ. ಐಹೊಳ್ಳಿ ಮಾತನಾಡಿ, ಬಸವಾದಿ ಶರಣರು ಸಮಸ್ತ ಮನುಕುಲದ ಪರಿಪೂರ್ಣವಾದ ಸಾರ್ಥಕ ಬದುಕಿನ ಅರಿವು, ಆಚಾರ, ವಿಚಾರ, ಇತಿಹಾಸ ಪರಂಪರೆಯಲ್ಲಿಯೇ ಭವ್ಯವಾದ ಬದುಕನ್ನು ಬಾಳಿದವರು. ಇಂದು ಶರಣತತ್ವ ಸಿದ್ಧಾಂತ ನಾವೆಲ್ಲಾ ಒಂದಾಗಿ ಅನುಸರಿಸಿ ಬಾಳಬೇಕು ಮುನ್ನಡೆಯಬೇಕು ಎಂದರು.

ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಮಹಿಳಾ ಸಾಧಕಿಯರಲ್ಲಿ ಅಗ್ರಸ್ಥಾನ ಪಡೆದವರು ಮುಕ್ತಾಯಕ್ಕ-ಅಜಗಣ್ಣರು ಸಮರ್ಪಕವಾದ ಚಿಂತನೆಯಿAದ ವಚನ ರಚಿಸಿದ್ದಾರೆ ಅವುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಎಮ್.ಜೆ. ಯಾದವಾಡ, ಎಸ್.ಜೆ. ನಾಡಗೌಡ, ಬ್ಯಾಕೋಡ ದಂಪತಿಗಳು, ಕವಿ ಗೀತಯೋಗಿ, ಭೀಮಣ್ಣ ಭಜಂತ್ರಿ, ಅಮರೇಶ ಸಾಲಕ್ಕಿ, ಡಾ. ಎಮ್.ಎಸ್. ಮಾಗನಗೇರಿ, ಬಸವರಾಜ ಒಂಟಗೂಡಿ, ಪ್ರೊ. ಕೆರಕಲಮನೆ, ಪ್ರೊ. ಚಾಂದಕವಟೆ, ಎಸ್.ಬಿ. ದೊಡ್ಡಮನಿ, ಅಪ್ಪಾಸಾಹೇಬ ಕೋರಿ, ವಿಠ್ಠಲ ತೇಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶರಣ ಶರಣೇಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಡಾ. ಸೋಮಶೇಖರ ವಾಲಿ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು.

Most Popular

To Top
error: Content is protected !!