Gummata Nagari

Bijapur

ಆತ್ಮ ಶುದ್ಧೀಕರಣದ ಸೌಭಾಗ್ಯ ಮಾಸ ರಂಜಾನ್

 

ಮಾನವ ತನ್ನ ಬದುಕಿನಲ್ಲಿ ಮಾಡುವ ಎಲ್ಲ ಪಾಪಗಳನ್ನು ವಿಮುಕ್ತಿಗೆ ಹಪಹಪಿಸಿ ಹೊಂದುವ ಮುಕ್ತಿ ಮಾರ್ಗದಡೆಗೆ ಸಾಗುವ ಸನ್ಮಾರ್ಗಕ್ಕೆ ಹತ್ತು ಹಲವು ಸಂಪ್ರದಾಯಗಳನ್ನು ಆಯಾ ಧರ್ಮಿಯರು ಹಾಕಿಕೊಂಡು ಬಂದಿದ್ದಾರೆ. ಇಸ್ಲಾಂ ಧರ್ಮಿಯರಿಗೆ ರಂಜಾನ್ ಮಾಸ ಪವಿತ್ರ ಮಾಸವಾಗಿದ್ದು, ಗೈದ ಪಾಪಗಳ ಪ್ರಾಯಶ್ಚಿತಕ್ಕೆ ಸೂಕ್ತ ಕಾಲವಾಗಿದೆ.

ರಂಜಾನ್ ಮಾಸದ ಚಂದ್ರ ಗೋಚರಿಸುತ್ತಿದ್ದಂತೆ ನವ ಚೈತನ್ಯದ ಚಿಲುಮೆ ಗರಿಗೆದರುತ್ತದೆ, ಆತ್ಮವುಲ್ಲಾಸ ಉಕ್ಕೇರುತ್ತದೆ. ಪವಿತ್ರ ಕುರ್‌ಆನ್‌ನಲ್ಲಿ ಉಪದೇಶಿಸಿದಂತೆ ರಂಜಾನ್ ಮಾಸವು ಪರಲೋಕ ಸಾಧನೆಗಾಗಿ ಇರುವ ಬಂಡವಾಳ ಹೂಡಿಕೆ ಇದ್ದಂತೆ. ಸತ್ಯ, ವಿಶ್ವಾಸ, ಪ್ರತಿಫಲಾಪೇಕ್ಷೆಯಿಂದ ರಂಜಾನ್ ಉಪವಾಸವನ್ನು ಆಚರಿಸುವುದರ ಜೊತೆಗೆ ರಾತ್ರಿ ತರಾವೀಹ್ ನಮಾಜ್ ನಿರ್ವಹಿಸಿದರೆ ಹಿಂದಿನ ಪಾಪಗಳು ಕ್ಷಮಿಸಲ್ಪಡುವವು ಎಂಬ ನಂಬಿಕೆ ಬಲವಾಗಿದೆ.

ಪಾಪ ವಿಮುಕ್ತಿಯ ಸೌಭಾಗ್ಯದ ಮಾಸ ರಂಜಾನ್:
ರಂಜಾನ್ ಎಂಬ ಶಬ್ದಕ್ಕೆ ಸುಟ್ಟು ನಾಶಗೊಳಿಸು ಎಂಬರ್ಥವಿದೆ. ವರ್ಷದ ಹನ್ನೊಂದು ತಿಂಗಳಲ್ಲಿ ಮಾಡಿದ ಪಾಪಗಳನ್ನು ಕಳೆಯಲು ಪಶ್ಚಾತ್ತಾಪ ಪಟ್ಟು ಅಲ್ಲಾಹನ ಅನುಸರಣೆ ತರುವುದೇ ರಂಜಾನ್. ಈ ಪವಿತ್ರ ಮಾಸದಲ್ಲಿ ನಿರ್ವಹಿಸುವ ಉಪವಾಸ ಆಚರಣೆ ಆಗ ಮಾಡುವ ಪ್ರತಿಯೊಂದು ಸತ್ಕಾರ್ಯಕ್ಕೂ ಉತ್ತಮ ಪ್ರತಿಫಲ ದೊರಕಲಿದೆ ಎಂಬ ನಂಬುಗೆ ಇಸ್ಲಾಮಿಯರದು.

ಜಗತ್ತಿನ ಎಲ್ಲ ಪುಸ್ತಕಗಳ ತಾತ್ವಿಕ ಸಾರವನ್ನೊಳಗೊಂಡ ಮನುಷ್ಯನಿಗೆ ಸನ್ಮಾರ್ಗ ತೋರುವ ಪವಿತ್ರ ಗ್ರಂಥ ಕುರ್‌ಆನ್ ಬೆಳಕು ಕಂಡಿದ್ದು ಇದೇ ಮಾಸದಲ್ಲಿ, ಜನರಿಗೆ ಮಾರ್ಗದರ್ಶನ ನೇರ ಸನ್ಮಾರ್ಗ ಹಾಗೂ ಸತ್ಯ, ಅಸತ್ಯವನ್ನು ಬೇರ್ಪಡಿಸುವ ಸುವ್ಯಕ್ತ ಸಾಕ್ಷಿಯಾಗಿ ಪವಿತ್ರ ಕುರ್‌ಆನ್ ಅವತರಿಸಿದೆ. ಕುರ್‌ಆನ್‌ನಲ್ಲಿ ಕೆಲವು ಆಚರಣೆಗಳನ್ನು ಹಾಕಿ ಕೊಡಲಾಗಿದೆ. ಮಾನವ ಕುಲದ ಜೀವನ ಕ್ರಮ, ಧಾರ್ಮಿಕ ವಿಧಿ ವಿಧಾನಗಳ ಐಹಿಕ ಜೀವನ, ಮರಣಾ ನಂತರ ಕಾರ್ಯಗಳ ಬಗ್ಗೆ ವಿಶ್ಲೇಷಣಗಳಿವೆ. ಕುರ್‌ಆನ್ ಪ್ರವಾದಿ ಮಹಮ್ಮದರ ಊಕ್ತಿಗಳಿವೆ.

ಕುರ್‌ಆನ್ ತಿಳಿಸಿದ ಇಸ್ಲಾಂನ ಐದು ಪ್ರಮುಖ ಬೋಧನೆಗಳು:
ಏಕ ದೇವೋಪಾಸನೆ, ದೇವರು ಒಬ್ಬನೇ, ಮಹಮ್ಮದ ಪೈಗಂಬರ್ ಪ್ರವಾದಿಯಾಗಿದ್ದಾರೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ(ನಮಾಜ್) ನಿರ್ವಹಿಸಬೇಕು. ರಂಜಾನ್ ಮಾಸದಲ್ಲಿ ಹಗಲು ಉಪವಾಸ ಕೈಕೊಳ್ಳಬೇಕು. ಶ್ರೀಮಂತರು ಬಡವರಿಗೆ ದಾನ (ಜಕಾತ್) ನೀಡಬೇಕು ಸಾಧ್ಯವಾದರೆ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಕೊಳ್ಳಬೇಕು.

ಇಸ್ಲಾಂ ಧರ್ಮದಲ್ಲಿ ಅಲ್ಲಾಹನು ಹೇಳುವಂತೆ ‘ಉಪವಾಸ ನನಗಾಗಿರುವುದು ಅದಕ್ಕೆ ಉತ್ತಮ ಪ್ರತಿಫಲ ನೀಡುವವನು ನಾನಾಗಿರುತ್ತೇನೆ’ ಎಂದು ಹೇಳಲಾಗಿದೆ. ಪವಿತ್ರ ರಂಜಾನ್ ಮಾಸದಲ್ಲಿ ಉಪವಾಸ ಅನುಷ್ಠಾನಗೊಳಿಸಿ ತಿಂಗಳ ಪರ್ಯಂತ ತರಾವಿಹ ನಮಾಜ್ ನಿರ್ವಹಿಸುವುದು. ಮನ ಶುದ್ಧಿಗೊಳಿಸಿ ಸೃಷ್ಠಿಕರ್ತನಿಗೆ ಆರಾಧನಾ ಕ್ರಮಗಳನ್ನು ಮಾಡುತ್ತಿರಬೇಕು. ಮಲೀನ ಮನಸ್ಸಿನ ಮೌಡ್ಯದಿಂದ ಹೊರಬಂದು ನಿರ್ಮಲ ಹೃದಯದಿಂದ ಕಾರ್ಯ ಕೈಕೊಂಡರೆ ವರ್ತನೆಯಲ್ಲಿ ಪರಿವರ್ತನೆ, ಮಾನಸಿಕ ನೆಮ್ಮದಿ, ದೈಹಿಕ ಸಾಮರ್ಥ್ಯ ಹಾಗೂ ಬದುಕಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುತ್ತದೆ. ಮನುಷ್ಯನ ಮಿತಿ ಮೀರಿದ ಬೇಡಿಕೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ. ಅಲ್ಲದೆ ಮೌಲ್ಯಗಳನ್ನು ರಕ್ಷಿಸಲು ಸಹಕಾರಿಯಾಗುತ್ತದೆ. ಪ್ರಾಪಂಚಿಕ ಜಂಜಾಟದಿAದ ಮುಕ್ತಿಯಡೆಗೆ ಕೊಂಡೊಯ್ಯುತ್ತದೆ.

ಸಾವಿರ ಮಾಸಗಳಿಗಿಂತಲು ಶ್ರೇಷ್ಠ ಲೈಲತುಲ್ ಖದ್ರ್:
ರಂಜಾನ್ ಮಾಸದ ರಾತ್ರಿಗಳು ಹಾಗು ಹಗಲುಗಳಿಗೂ ಧಾರಾಳ ಪುಣ್ಯಗಳಿವೆ. ಅಂತೆಯೇ ಸಾವಿರ ಮಾಸಕ್ಕಿಂತಲೂ ಶ್ರೇಷ್ಠವಾದ ಲೈಲತುಲ್ ಖದ್ರ್ ಎಂಬ ರಾತ್ರಿ ಅಡಗಿಕೊಂಡಿದ್ದು, ಇದು ರಂಜಾನ್ ಮಾಸದ ಕೊನೆಯ ಹತ್ತು ದಿನಗಳಲ್ಲಿ ಒಂದು ಬೆಸ (ಅಸಮ) ದಿನ ಆಗಿರುತ್ತದೆ. ಆ ರಾತ್ರಿ ಆರಾಧಿಸಿದರೆ ಸಾವಿರ ಮಾಸದ ಪುಣ್ಯ ಲಭಿಸುತ್ತದೆ ಎಂಬುದು ಇಸ್ಲಾಂ ಧರ್ಮೀಯರ ಶೃದ್ಧೆಯೂ ಆಗಿದೆ. ರಂಜಾನ್ ಮಹತ್ವ ತಿಳಿಯಲು ಅಲ್ಲಾಹನು ಪವಿತ್ರ ಕುರ್‌ಆನ್‌ನಲ್ಲಿ ಒಂದು ಶ್ಲೋಕವನ್ನು ಸೃಷ್ಠಿಸಿದ್ದಾನೆ ‘ಲೈಲ್‌ತುಲ್ ಖದ್ರ’ದಲ್ಲಿ ಸಾವಿರ ಮಾಸಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ.

ಅಂದು ಮಲಕ್‌ಗಳು ಪ್ರಭುವಿನ ಅನುಮತಿಯೊಂದಿಗೆ ಭೂಮಿಗೆ ಇಳಿದು ಬರುತ್ತಾರೆ. ಅರುಣೋದಯದವರೆಗೂ ಆ ರಾತ್ರಿಯೂ ಮಂಗಳಕರವಾಗಿದೆ. ರಂಜಾನ್ ಮಾಸದ ಇನ್ನೊಂದು ಬಹುಮುಖ್ಯ ಕಾರ್ಯವೆಂದರೆ ಝಕಾತ್ (ದಾನ) ನೀಡುವುದು ಕಡ್ಡಾಯಗೊಳಿಸಲಾಗಿದೆ. ಮನೆಯಲ್ಲಿರುವವರ ಸಂಖ್ಯೆಗನುಗುಣವಾಗಿ ಒಬ್ಬರಿಗೆ 2.5 ಕೆಜಿಗಿಂತ ಹೆಚ್ಚು ಧಾನ್ಯ ಅಥವಾ ಅದರ ಮೌಲ್ಯದ ಹಣ ದಾನವಗಿ ನೀಡಬೇಕು. ಫಿತ್ರ ಝಕಾತ್ ಕೈಕೊಂಡಲ್ಲಿ ಸೌಭಾಗ್ಯ ಪಡೆಯಬಹಹುದಾಗಿದೆ. ಕರ್ಮ ಬಂಧನಗಳ ಬಿಡುಗಡೆಗಾಗಿ ಉಪವಾಸ ಆಚರಿಸಿ ಕೊನೆಯ ದಿನ ಬಡವರಿಗಗೆ, ನಿರ್ಗತಿಕರಿಗೆ ಆತ್ಮೀಯರಿಗೆ ಧಾನಾಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ವರ್ಷದುದ್ದಕ್ಕೂ ಎಸಗುವ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳಬಹುದಾಗಿದೆ.

ಒಟ್ಟಾರೆಯಾಗಿ ‘ರಂಜಾನ್ ಪಾಪವಿಮುಕ್ತಿಯ ಸೌಭಾಗ್ಯದ ಮಾಸ’ ಪಾಪಕರ್ಮಳಿಗೆ ಪ್ರಾಯಶ್ಚಿತ ಪಡುವ ಪುಣ್ಯ ಗಳಿಸುವ ಸದಾವಕಾಶವನ್ನು ಒದಗಿಸಿದೆ. ಪ್ರಾಪಂಚಿಕ ತೊಳಲಾಟ ಬದಿಗೊತ್ತಿ, ಸ್ವರ್ಗದ ಮಾರ್ಗ ಅರಸುತ್ತ ಜಗದೊದ್ಧರಾಕ ಆಲ್ಲಾಹನ ಸ್ತುತಿಸುತ್ತ ಜೀವನ ಸಾರ್ಥಕ ಪಡಿಸಿಕೊಳ್ಳುವ ಮಾಸವಾಗಿದೆ. ಬನ್ನಿ ಪವಿತ್ರ ರಂಜಾನ್ ಮಾಸದಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಂಡು ಸಾಮಾಜಿಕ ಸಾಮರಸ್ಯ ಕಾಪಾಡೋಣ. ಇಡೀ ಜಗತ್ತಿಗೆ ಮಾದರಿಯಾಗಿರುವ ಭಾರತೀಯ ಸಂಸ್ಕೃತಿಯನ್ನು ಸಾರೋಣ.

ಲೇಖಕರು : ಕಬೂಲ್ ಆರ್ ಕೊಕಟನೂರ, ದೇವರಹಿಪ್ಪರಗಿ. ಬಿಜಾಪುರ ಜಿಲ್ಲೆ. ಮೊ.ನಂ. 9972115502

Most Popular

To Top
error: Content is protected !!