Gummata Nagari

Bijapur

ಪ್ರಧಾನಿ ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ

 

ಚಡಚಣ: ಈ ಸಲ ಮೋದಿಯವರ ಮೋಡಿ ನಡೆಯಲ್ಲ, ಅವರ ಮಾರಿ ನೋಡಿ ಓಟು ಹಾಕುವ ದಿನಗಳು ಹೋದವು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಲೋಕಸಭೆ ಚುನಾವಣೆ ನಿಮಿತ್ತ ಬುಧವಾರ ನಡೆದ ಚಡಚಣ ಬ್ಲಾಕ್ನ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಚ್ಛೇ ದಿನ್ ಅಂತ ಹೇಳಿ ಕೆಟ್ಟ ದಿನಗಳನ್ನು ಕೊಟ್ಟವರು ಮೋದಿ ಎಂದು ವಾಗ್ದಾಳಿ ನಡೆಸಿದರು.
ಮೋದಿಯವರು ಹೇಳಿರುವ ಯಾವ ಭರವಸೆಯೂ ಈಡೇರಿಲ್ಲ. ಆದರೂ ಯುವಕರು ಭ್ರಮೆಯಲ್ಲಿ ತೇಲುತ್ತ ಮೋದಿ ಮೋದಿ ಎನ್ನುತ್ತಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಅಜಗಜಾಂತರವಾಗಿ ಏರಿದೆ. ಸದ್ಯ ಚುನಾವಣಾ ಬಾಂಡ್ ಹಗರಣದಿಂದ ಮೋದಿಯವರ ಒಳ ಮರ್ಮ ಹೊರ ಬಂದಿದೆ ಎಂದರು.
ಕೇಜ್ರಿವಾಲ್ ಬಂಧನಕ್ಕೆ ಕಾರಣವಾಗಿರುವ ಕಂಪನಿಯಿAದಲೇ ಬಿಜೆಪಿ ಬಾಂಡ್ ಹೆಸರಲ್ಲಿ ದುಡ್ಡು ಹೊಡೆದಿದೆ. ಕಳ್ಳತನದಿಂದ ಪಡೆಯುತ್ತಿರುವುದನ್ನು ರಹದಾರಿಯಲ್ಲಿ ಪಡೆದಿದ್ದೇವೆ ಅಂತಲೂ ಇವರು ಹೇಳುತ್ತಾರೆ. ಸುಪ್ರೀಂ ಕೋರ್ಟ್ ಪದೇ ಪದೇ ಛೀಮಾರಿ ಹಾಕುತ್ತಿದೆ. ಇಡಿ, ಸಿಬಿಐ ಮೂಲಕ ಛೂ ಬಿಟ್ಟು ನಂತರ ಬಾಂಡ್ ಮೂಲಕ ಹಣ ಎತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದವರು ಮಾನ್ಯ ಮೋದಿ. ಇವರ ಮುಖವಾಡವೀಗ ಕಳಚಿ ಬಿದ್ದಿದೆ ಎಂದು ಹರಿ ಹಾಯ್ದರು.
ಮೋದಿ ಬರುವ ಮೊದಲೇ ದೇಶವನ್ನು ಕಾಂಗ್ರೆಸ್ ಕಟ್ಟಿದೆ. ಬಹು ದೊಡ್ಡ ಕೆಲಸಗಳನ್ನು ಪಕ್ಷ ಮಾಡಿದೆ. ಡ್ಯಾಂಗಳು, ವಿಶ್ವ ವಿದ್ಯಾಲಯಗಳು, ಆಸ್ಪತ್ರೆ, ಆಹಾರ ಭದ್ರತೆ, ಮಾಹಿತಿ ಕ್ರಾಂತಿಯನ್ನು ದೇಶಕ್ಕೆ ನೀಡಿದ್ದು ಕಾಂಗ್ರೆಸ್. ಆದರೆ, ಮೋದಿ ದಿನಕ್ಕೊಂದು ದಿರಿಸು ಹಾಕಿ ಬರೀ ಪ್ರಚಾರ ಗಿಟ್ಟಿಸುತ್ತಿದ್ದಾರೆ. ನಾವು ಒಂದು ವರ್ಷದಲ್ಲಿ ಹದಿನೈದು ಲಕ್ಷ ಮನೆ ಕಟ್ಟಿದ್ದೆವು. ಇವರು ಒಂದೂ ಕೊಡಲಿಲ್ಲ. ಕೊಟ್ಟಿರುವ ಬಹುತೇಕ ಭರವಸೆ ಈಡೇರಿಸಿದ್ದೇವೆ ಎಂದು ಹೇಳಿದರು.
ಈ ಭಾಗ ಜೂನ್ ತಿಂಗಳ ಹೊತ್ತಿಗೆ ಸಂಪೂರ್ಣ ನೀರಿನ ಸಮಸ್ಯೆಯಿಂದ ಮುಕ್ತವಾಗಲಿದೆ. ಇದಕ್ಕೆ ಬದ್ಧ. ಸದ್ಯ ಬದಲಾವಣೆ ಕಾಲವಾಗಿದ್ದು, ನೀವು ಕಾಂಗ್ರೆಸ್ಗೆ ಮತ ನೀಡಿದರೆ ದೇಶದಲ್ಲೂ ಗ್ಯಾರಂಟಿಗಳ ಪರ್ವ ಆರಂಭವಾಗಲಿದೆ. ಆಲಗೂರರು ಕೆಲಸಗಾರರಾಗಿದ್ದಾರೆ, ಇವರನ್ನು ಆರಿಸಿ ಕಳಿಸಿ. ಚಡಚಣ ಭಾಗದಿಂದ ಐವತ್ತು ಸಾವಿರ ಬಹುಮತ ಬರಬೇಕು ಎಂದು ಹೇಳಿದರು.
ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಇದೊಂದು ಬಾರಿ ತಮಗೆ ಅವಕಾಶ ನೀಡಿದರೆ ಜಿಲ್ಲೆ ಹಿಂದೆAದೂ ಕಾಣದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಜಿಗಜಿಣಗಿಯವರು ಒಂದಿನವೂ ಎಲ್ಲೂ ಕಂಡಿಲ್ಲ. ಯಾವ ಊರಲ್ಲೂ ಅವರ ಕೆಲಸದ ಬೋರ್ಡಿಲ್ಲ. ಮೋದಿ ಮುಖ ನೋಡಿ ಮತ ಹಾಕಿ ನೀವೆಲ್ಲ ಬೇಸತ್ತಿರುವಿರಿ. ಇಂತಹವರು ನಿಮಗೆ ಬೇಕೆ ಎಂದು ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.
ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಜನ ಸಾಮಾನ್ಯರ ಹಾಗೂ ಸಾಮಾಜಿಕ ನ್ಯಾಯದ ಪರ ಪಕ್ಷವಿದೆ. ಜನ ಹಿತದ ಕಾರ್ಯಗಳು ಬಡವರಿಗೆ ತಲುಪಿವೆ. ಈ ಭಾಗಕ್ಕೆ ನೀರು ಬೇಕಾದರೆ ಹೆಚ್ಚು ಮತ ನೀಡಿ ಎಂದು ವಿನಂತಿಸಿದರು.
ಮುಖAಡರಾದ ಬಾಬುಗೌಡ ಪಾಟೀಲ, ವಿಶ್ವನಾಥ ಧೋತ್ರೆ ಸೇರಿದಂತೆ ನೂರಾರು ಜನ ಇದೇ ಸಂದರ್ಭ ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ವೇದಿಕೆಯಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಪ್ರಮುಖರಾದ ದಾನಮ್ಮಗೌಡತಿ ಬಿರಾದಾರ, ಶ್ರೀದೇವಿ, ಎಂ.ಆರ್.ಪಾಟೀಲ, ಸುರೇಶಗೌಡ ಪಾಟೀಲ, ಡಿ.ಎಲ್. ಚವ್ಹಾಣ, ಬ್ಲಾಕ್ ಅಧ್ಯಕ್ಷ ಆರ್.ಡಿ.ಹಕ್ಕೆ, ಸುರೇಶ ಗೊಣಸಗಿ, ಮುರ್ತುಜಾ ನದಾಫ್, ಪ್ರಕಾಶ ಪಾಟೀಲ, ಸಾಹೇಬಗೌಡ ಪಾಟೀಲ, ಗೌಡೇಶಗೌಡ, ಬಸು ಸಾಹುಕಾರ್ ಬಿರಾದಾರ, ಶಿವರಾಜಸಿಂಗ್, ಮಹಾದೇವ ಹಿರೇಕುರುಬರ, ಡಾ.ಪವಾರ್ ಅನೇಕರಿದ್ದರು.

Most Popular

To Top
error: Content is protected !!