Gummata Nagari

Headlines

ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಸೇವಿಸಿ

 

ಬೆಳಗಾವಿ: ಬಿಸಿಲಿನ ಬೇಗೆ ತೀವ್ರವಾಗಿರುವುದರಿಂದ ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸಲು ಆಯುಷ್ ಇಲಾಖೆ ಪರಿಚಯಿಸಿರುವ ಚಿಂಚಾ ಪಾನಕ(ಹುಣಸೆ ಹಣ್ಣಿನ ಪಾನಕ)ವನ್ನು ಸಾರ್ವಜನಿಕರು ಸೇವಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಂಗಳವಾರದoದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆಯ ವತಿಯಿಂದ ಆರೋಗ್ಯಕರ ಚಿಂಚಾ ಪಾನಕ(ಹುಣಸೆ ಹಣ್ಣಿನ ಪಾನಕ)ವನ್ನು ಸಾರ್ವಜನಿಕರು ಹಾಗೂ ಕರ್ತವ್ಯನಿರತ ಕಚೇರಿಯ ಸಿಬ್ಬಂದಿಗೆ ವಿತರಿಸಿ ಮಾತನಾಡಿದರು.

ಎಲ್ಲೆಡೆ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಆರೋಗ್ಯ ರಕ್ಷಣೆಗೆ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದರ ಜತೆಗೆ ಆಯುಷ್ ಇಲಾಖೆಯಿಂದ ಪರಿಚಯಿಸಲಾಗುವ ಪಾನಕ ಮತ್ತಿತರರ ಪಾನೀಯ ಸೇವಿಸುವಂತೆ ತಿಳಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ ಅವರು, ಹುಣಸೆ ಹಣ್ಣಿನ ಪಾನಕ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜತೆಗೆ ಬಾಯಾರಿಕೆ ನಿವಾರಿಸಲಿದೆ ಎಂದರು.

ಚುನಾವಣಾ ತರಬೇತಿ ನೋಡಲ್ ಅಧಿಕಾರಿ ಶಂಕರಾನAದ ಬನಶಂಕರಿ, ಆಯುಷ್ ಇಲಾಖೆಯ ಡಾ.ಚಂದ್ರಶೇಖರ್ ಸಿದ್ದಾಪುರ, ಡಾ.ಸುಚೇತಾ ದೇಸಾಯಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ಪಾನಕ ತಯಾರಿಸುವ ವಿಧಾನ: ಪ್ರತಿದಿನ 50 ರಿಂದ 100 ಮಿ.ಲೀ. ಪಾನಕವನ್ನು ಸೇವಿಸಬಹುದು. ಹುಣಸೆ ಹಣ್ಣು(100 ಗ್ರಾಂ), ಬೆಲ್ಲದ ಪುಡಿ(400 ಗ್ರಾಂ), ಜೀರಿಗೆ ಪುಡಿ(10 ಗ್ರಾಂ), ಕಾಳು ಮೆಣಸಿನಪುಡಿ(5 ಗ್ರಾಂ) ಹಾಗೂ ಸೈಂದವ ಲವಣ(5 ಗ್ರಾಂ) ಬಳಸಿಕೊಂಡು ಪಾನಕ ತಯಾರಿಸಬಹುದು. ಹುಣಸೆ ಹಣ್ಣು ರಾತ್ರಿಯಿಡೀ ನೆನೆಸಿಡಬೇಕು; ಮರುದಿನ ಬೆಳಿಗ್ಗೆ ಕೈಯಿಂದ ಹಿಸುಕಿ ಬಾಟಲಿಗಳಲ್ಲಿ ಸೋಸಿಟ್ಟುಕೊಂಡು ಪಾನಕ ತಯಾರಿಕೆಗೆ ಬೇಕಾದಷ್ಟು ಬಳಸಬಹುದು.
ಅಗತ್ಯ ಪ್ರಮಾಣದ ನೀರನ್ನು ಪಾತ್ರೆಗೆ ಹಾಕಿ ಹುಣಸೆ ಹಣ್ಣುನ ಮಿಶ್ರಣವನ್ನು ಬೆರೆಸಿ ಇದರೊಂದಿಗೆ ಬೆಲ್ಲದ ಪುಡಿಯನ್ನು ಹಾಕಿ ಕರಗಿಸಬೇಕು. ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಮತ್ತು ಸೈಂದವ ಲವಣವನ್ನು ಸೇರಿಸಿದರೆ ಪಾನಕ ಸಿದ್ಧವಾಗುತ್ತದೆ.

 

Most Popular

To Top
error: Content is protected !!