Gummata Nagari

Bijapur

ಬಿಜಾಪುರ: ಪ್ರೇಮಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ

 

ಬಿಜಾಪುರ: ನಿಜವಾದ ಪ್ರೀತಿಗೆ ಜಾತಿ ವಯಸ್ಸು ಬಣ್ಣ ಮುಖ್ಯವಾಗಿರಲ್ಲ. ನಿಜವಾದ ಪ್ರೇಮಿಗಳು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುತ್ತಾರೆ. ಇಲ್ಲಿ ಆಗಿದ್ದೂ ಅದೇ. ಇಂಡಿ ತಾಲೂಕಿನ ಹಂಜಗಿ ಗ್ರಾಮದ ಅನ್ಯ ಕೋಮಿನ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್ಸಿ ಸಮುದಾಯಕ್ಕೆ ಸೇರಿರೋ ಅಶ್ವಿನಿ ಭಂಡಾರಿ ಪರಸ್ಪರ ಇಷ್ಟಪಟ್ಟ್ಟಿದ್ದರು.

ಇಬ್ಬರೂ ವಯಸ್ಕರರಾಗಿದ್ದು ಮದುವೆಯಾಗೋ ಕನಸು ಕಂಡಿದ್ದರು. ಇವರ ಪ್ರೇಮದ ಕಹಾನಿ ಇಬ್ಬರೂ ಮನೆಯವರಿಗೆ ಗೊತ್ತಾಗಿತ್ತು. ಈ ಕಾರಣ ಯಾಸೀನ್ ಹಾಗೂ ಆಶ್ವಿನಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ, ಸದ್ಯ ಆಶ್ವಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.

ಎರಡೂ ಕಡೆಯೆ ಮನೆಯವರ ಉಸಾಬರಿ ಬೇಡಾ ಎಂದು ತಮ್ಮ ಪಾಡಿಗೆ ತಾವಿದ್ದಾರೆ. ಇಷ್ಟರ ಮಧ್ಯೆ ಅಶ್ವಿನಿ ತಾಯಿ ಗರ್ಭಪಾತ ಮಾಡಿಸಿ ನಿನಗೆ ಬೇರೆ ಮದುವೆ ಮಾಡುತ್ತೇವೆ ಎಂದು ದುಂಬಾಲು ಬಿದ್ದಿದ್ದಾಳಂತೆ. ಜೊತೆಗೆ ಅದೇ ಗ್ರಾಮದ ರೌಡಿ ಶೀಟರ್ ಹುಚ್ಚಪ್ಪಾ ಕಾಲೇಬಾಗ್, ಕೊಲೆಯೊಂದರ ಪ್ರಕರಣದ ಆರೋಪಿಯಾಗಿರೋ ಮುತ್ತಪ್ಪ ಎಂಬುವವರ ಜೊತೆ ಬಂದು ಯಾಸೀನ್‌ಗೆ ಬೆದರಿಕೆ ಹಾಕಿದ್ಧಾರೆ. ಅಶ್ವಿನಿಯನ್ನು ಬಿಟ್ಟು ಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಆದರೆ ಯಾಸೀನ್ ಹಾಗೂ ಅಶ್ವಿನಿ ಇಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರಲ್ಲ ಎಂದು ಹೇಳಿದ್ದಾರೆ. ಆಗ ಯುವತಿಯ ಮನೆಯವರು ಯಾಸೀನ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇಷ್ಟರ ಮದ್ಯೆ ರೌಡಿ ಶೀಟರ್ ಆಗಿರೋ ಹುಚ್ಚಪ್ಪ ಕಾಲೇಬಾಗ ನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಟ್ಟುಬಿಡು ನಿನ್ನ ಕೊಲೆ ಮಾಡಲ್ಲಾ ಎಂದು ಹೇಳಿದ್ದಾರೆ. ಜೀವ ಭಯದಲ್ಲಿದ್ದ ಯಾಸೀನ್ ಒಂದು ಲಕ್ಷ ರೂಪಾಯಿಯನ್ನು ಹುಚ್ಚಪ್ಪ ಕಾಲೇಭಾಗಗೆ ನೀಡಿದ್ದಾರೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊoಡಿದ್ದಾರೆ ಎಂದು ಯುವತಿ ಅಶ್ವಿನಿ ಆರೋಪ ಮಾಡಿದ್ದಾಳೆ.

ಹೀಗೆ ಪ್ರೀತಿಸಿ ಮದುವೆಯಾಗಿರೋ ಯಾಸೀನ್ ಹಾಗೂ ಆಶ್ವಿನಿ, ಹುಚ್ಚಪ್ಪ ಹಾಗೂ ಇತರರಿಗೆ ಜೀವ ಭಯ ಹಾಕಿರೋ ಕಾರಣ ಒಂದು ಲಕ್ಷ ರೂಪಾಯಿ ನೀಡಿ ತಮ್ಮ ಪಾಡಿಗೆ ತಾವಿದ್ದಾರೆ. ಇದೀಗ ಯಾಸೀನ್ ಕೊಲೆ ಮಾಡುತ್ತೇವೆಂದು ಹುಚ್ಚಪ್ಪ ಹಾಗೂ ಮುತ್ತಪ್ಪ ಮತ್ತೇ ಬೆದರಿಕೆ ಹಾಕುತ್ತಿದ್ದಾರಂತೆ. ಒಟ್ಟು 50 ಲಕ್ಷ ರೂಪಾಯಿ ಹಣ ನೀಡಿದರೆ ಮಾತ್ರ ಬಿಡುತ್ತೇವೆ. 50 ಲಕ್ಷ ರೂಪಾಯಿ ಹಣ ನೀಡದಿದ್ದರೆ ಕೊಲೆ ಮಾಡುತ್ತೇವೆಂದು ಹುಚ್ಚಪ್ಪ ಹಾಗೂ ಮುತ್ತಪ್ಪ ಬೆದರಿಕೆ ಹಾಕುತ್ತಿದ್ದಾರಂತೆ. ಇದಕ್ಕೆ ಆಶ್ವಿನಿಯ ತಾಯಿಯೂ ಕೈ ಜೋಡಿಸಿದ್ದಾಳೆ.

 

ಈ ಮಧ್ಯೆ, ಯಾಸೀನ್‌ನನ್ನು ಬಿಟ್ಟು ಬಾ ಬೇರೆ ಮದುವೆ ಮಾಡುತ್ತೇವೆ ಎಂದು ಒತ್ತಾಯ ಮುಂದುವರೆಸಿದ್ದಾಳoತೆ. 50 ಲ್ಷ ಹಣ ಬೇಕೆಂಬ ಬೇಡಿಕೆಗೆ ಯಾಸೀನ್ ಹಾಗೂ ಆಶ್ವಿನಿ ದಂಗಾಗಿದ್ದಾರೆ. ನಮ್ಮ ಬಳಿ ಹಣವಿಲ್ಲಾ ಎಂದು ಹೇಳಿದರೂ ಯಾಸೀನ್ ತಂದೆ ತಾಯಿಯವರ ಮೇಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರೋ ಸುಳ್ಳು ಪ್ರಕರಣ ದಾಖಲು ಮಾಡಿ ಹಿಂಸೆ ನೀಡುತ್ತಿದ್ದಾರಂತೆ. ಇದರಿಂದ ಭಯಗೊಂಡ ಯಾಸೀನ್ ಹಾಗೂ ಅಶ್ವಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.

ಅಪರ ಪೊಲೀಸ್ ವರಿಷ್ಟಾಧಿಕಾರಿ ಶಂಕರ ಮಾರಿಹಾಳ ಅಶ್ವಿನಿ ಹಾಗೂ ಯಾಸೀನ್ ದೂರನ್ನು ಸ್ವೀಕಾರ ಮಾಡಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ಧಾರೆ. 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ. ಭಯದಲ್ಲಿರೋ ಯುವ ಜೋಡಿ ಮಾತ್ರ ನಮಗೆ ಏನಾದರೂ ಅನಾಹುತವಾದರೆ ರೌಡಿ ಶೀಟರ್ ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಯುವತಿಯ ತಾಯಿ ಕಾರಣವೆಂದು ಹೇಳಿದ್ದಾರೆ. ನಮಗೆ ಸೂಕ್ತ ರಕ್ಷಣೆ ಬೇಕೆಂದು ಒತ್ತಾಯ ಮಾಡಿದ್ದಾರೆ.

 

ಪರಸ್ಪರ ಇಷ್ಟ ಪಟ್ಟು ಮದುವೆಯಾಗಿರೋ ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಅದಾಗಲೇ ಒಂದು ಲಕ್ಷ ರೂಪಾಯಿ ಹಣ ಪಡೆದಿರುವವರು 50 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದು ಎಷ್ಟರ ಮಟ್ಟಿಗೆ ಸರಿಯಾದ ಕೆಲಸ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಿಟ್ಟಿನಲ್ಲಿ ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಟಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡೋದಾಗಿ ಭರವಸೆ ನೀಡಿದ್ದಾರೆ.

Most Popular

To Top
error: Content is protected !!