ವೈದ್ಯಕೀಯ ಉಪಕರಣಗಳ ಕೊರತೆ ನೀಗಿಸಿ

ಜಿಲ್ಲಾ ಆರೋಗ್ಯಾಧಿಕಾರಿಗೆ ಜಿ.ಪಂ ಅಧ್ಯಕ್ಷೆ ಸೂಚನೆ

0

ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಹಿತದೃಷ್ಟಿಯಿಂದ ಜಿಪಂ ಅಧ್ಯಕ್ಷೆ ಸುಜಾತಾ ಅವರು ಜಿಪಂ ಸದಸ್ಯೆಯರಾದ ಪ್ರೇಮಬಾಯಿ, ಪದ್ಮಾವತಿ ಅವರೊಂದಿಗೆ ಆಸ್ಪತ್ರೆಯ ಪ್ರತ್ಯೇಕ ವಾರ್ಡನಲ್ಲಿ ಮಲಗಿ, ಅಧ್ಯಕ್ಷರ ಜೊತೆ ಬಂದಿದ್ದ ಅಧಿಕಾರಿಗಳು, ಆಪ್ತ ಸಿಬ್ಬಂದಿ, ಕೆಲ ಕಾಂಗ್ರೆಸ್ ಮುಖಂಡರು ಸ್ಥಳೀಯ ಸಮುದಾಯ ಭವನದಲ್ಲಿ ರಾತ್ರಿ ಕಳೆದರು. ಮುದ್ದೇಬಿಹಾಳ ಪೊಲೀಸ್ ಠಾಣೆಯ ಎಎಸ್ಐ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Gummata Nagari : Bijapur News

ಮುದ್ದೇಬಿಹಾಳ : ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ತಜ್ಞರು, ವೈದ್ಯರು, ಸಿಬ್ಬಂದಿ, ಅಗತ್ಯ ವೈದ್ಯಕೀಯ ಉಪಕರಣ ಕೊರತೆ ನೀಗಿಸಲು ಕೊರೊನಾದಿಂದ ಹಿನ್ನೆಡೆಯಾಗಿದೆ. ಜಿಲ್ಲಾ ಪಂಚಾಯತ್‌ಗೆ ಅನುದಾನದ ಕೊರತೆ ಕಾಡುತ್ತಿದೆ. ಆದರೂ ಕೊರತೆ ಶೀಘ್ರ ನೀಗಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ. ನನ್ನ ಅಧಿಕಾರ ಇರುವಷ್ಟು ದಿನ ಜಿಲ್ಲೆಯನ್ನು ಮಾದರಿಯಾಗಿ ಮಾಡಲು ಶ್ರಮಿಸುತ್ತೇನೆ ಎಂದು ಬಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದ್ದಾರೆ.

ಕಾಳಗಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಗರ್ಭಿಣಿ, ಬಾಣಂತಿಯರ ಸಮಸ್ಯೆ ತಿಳಿದುಕೊಳ್ಳಲು ಗುರುವಾರ ರಾತ್ರಿ ಆಸ್ಪತ್ರೆ ವಾಸ್ತವ್ಯ ನಡೆಸಿ, ಶುಕ್ರವಾರ ಬೆಳಿಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ ಇನಾಮದಾರರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ಕಳೆದ ತಿಂಗಳು ಕುರಿಗಾರರ ದೊಡ್ಡಿಯಲ್ಲಿ ವಾಸ್ತವ್ಯ ನಡೆಸಿದ್ದಾಗ ಪಡೆದ ಅನುಭವದಿಂದ ಆಸ್ಪತ್ರೆ ವಾಸ್ತವ್ಯ ನಡೆಸಲಾಗಿದೆ. ಇದರಿಂದ ಅಲ್ಲಿನ ಕಷ್ಟಗಳು, ಸಮಸ್ಯೆಗಳು, ಕುಂದುಕೊರತೆಗಳು ಪ್ರಾಯೋಗಿಕವಾಗಿ ಗೊತ್ತಾಗಿ ಮುಂದೇನು ಮಾಡಬೇಕು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಅವಕಾಶವಾಗುತ್ತದೆ.

ಸಣ್ಣಪುಟ್ಟ ತೊಂದರೆ ಕಂಡುಬಂದಲ್ಲಿ ಸ್ಥಳದಲ್ಲೇ ಬಗೆಹರಿಸಲು ಅವಕಾಶವಾಗುತ್ತದೆ. ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಸಮಸ್ಯೆ ಪರಿಹಾರಕ್ಕೆ, ಅಭಿವೃಧ್ದಿಗೆ ಸ್ವಲ್ಪ ಹಿನ್ನೆಡೆ ಆಗಿದ್ದರೂ ಆದಷ್ಟು ಬೇಗ ಸರಿಪಡಿಸಲಾಗುತ್ತದೆ ಎಂದರು.

ಉತ್ತಮ ಪರಿಸರ, ವೈದ್ಯಕೀಯ ಸೌಲಭ್ಯ, ಸ್ವಚ್ಛತೆ ಹೊಂದಿರುವ ಗ್ರಾಮೀಣ ಭಾಗದ ಕಾಳಗಿ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿನ ಹೆರಿಗೆ ತಜ್ಞ ಡಾ. ರಂಗನಾಥ ವೈದ್ಯ ಜಿಲ್ಲೆಗೆ ಮಾದರಿ. ಇದೇ ಮಾದರಿ ಎಲ್ಲ ಕಡೆ ಇರಬೇಕು ಮತ್ತು ನೆಗೆಟಿವ್‌ನೆಸ್ ಜೊತೆಗೆ ಪೊಜಿಟಿವ್‌ನೆಸ್ ಅನ್ನೂ ಜನರಿಗೆ ತಿಳಿಸಲು ಈ ಆಸ್ಪತ್ರೆಯನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದೆ.                                                 -ಸುಜಾತಾ ಕಳ್ಳಿಮನಿ, ಅಧ್ಯಕ್ಷರು, ಜಿಪಂ, ಬಿಜಾಪುರ.

ವಾಸ್ತವ್ಯದ ವೇಳೆ ಗರ್ಭಿಣಿಯರು, ಬಾಣಂತಿಯರನ್ನು ಮಾತನಾಡಿಸಿದಾಗ ಆಸ್ಪತ್ರೆ ಸ್ವಚ್ಛವಾಗಿದೆ. ಅನುಕೂಲಕರ ಪರಿಸರ ಇದೆ. ಕೊರತೆ ಇಲ್ಲ ಎಂದರು. ಪ್ರತಿಯೊಂದು ಆಸ್ಪತ್ರೆ ಸುವ್ಯವಸ್ಥೆಯಲ್ಲಿದ್ದರೆ ಸಮಸ್ಯೆಗಳು ಇರುವುದಿಲ್ಲ ಎನ್ನುವುದನ್ನು ತಿಳಿದುಕೊಂಡೆ. ಪಿಎಚ್‌ಸಿಗಳಿಗೆ ಭೇಟಿ ನೀಡಿದ್ದಾಗ ಹಲವು ಸಮಸ್ಯೆಗಳು ಗೊತ್ತಾಗಿವೆ. ಅಲ್ಲಿನ ಸಿಬ್ಬಂದಿಗೆ ಕೆಲಸದ ಮೇಲೆ ನಿಗಾ ಇದ್ದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು ಸರಿಯಾಗಿ ಸ್ಪಂಧಿಸುತ್ತಿಲ್ಲ. ಪೌಷ್ಠಿಕ ಆಹಾರ ಕೊಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರೋದಿಲ್ಲ. ಸೂಕ್ತ ಸ್ಪಂಧನೆ ಇಲ್ಲ. ವೈದ್ಯರು ತಮ್ಮ ಕಡೆ ಚಿಕಿತ್ಸೆ ಸಾಧ್ಯವಿದ್ದರೂ ಬೇರೆ ಕಡೆ ಹೋಗಿ ಎಂದು ಶಿಫಾರಸ್ಸು ಮಾಡಿ ಕಳಿಸುತ್ತಿದ್ದಾರೆ ಎನ್ನುವ ಆರೋಪಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಕ್ರಮ ಕೈಕೊಂಡಿದ್ದೇನೆ ಎಂದರು.

ಜಿಪಂ ಸದಸ್ಯೆಯರಾದ ಪ್ರೇಮಬಾಯಿ ಚವ್ಹಾಣ, ಪದ್ಮಾವತಿ ವಾಲಿಕಾರ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ, ತಾಪಂ ಇಓ ಶಶಿಧರ ಶಿವಪುರೆ, ಕಾಂಗ್ರೆಸ್ ಧುರೀಣರಾದ ಸೋಮನಾಥ ಕಳ್ಳಿಮನಿ, ಸಂತೋಷ ರಾಠೋಡ, ಜಾವೀದ ಜಮಾದಾರ, ಮುತ್ತಣ್ಣ ಮುತ್ತಣ್ಣವರ್, ನಾಗರಾಜ ತಂಗಡಗಿ, ಲಕ್ಷ್ಮಣ ಲಮಾಣಿ, ಸ್ಥಳೀಯ ಧುರೀಣರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.