ಸದಸ್ಯರಿಂದ ಅಧ್ಯಕ್ಷೆಗೆ ತರಾಟೆ

ಗಮನಕ್ಕೆ ತರದೆ ಡಿ ನೌಕರರ ನೇಮಕಾತಿ ಮಾಡಿದ ತಾಪಂ ಅಧ್ಯಕ್ಷೆಯ ವಿರುದ್ದ ಹರಿಹಾಯ್ದ ಸದಸ್ಯರು

0

ಅಧ್ಯಕ್ಷೆ ಸವಿತಾ ಕಲ್ಯಾಣಿ ಸಭೆಯಲ್ಲಿ ಕ್ಷಮೆಯಾಚಿಸಿ ಸಭೆಯಿಂದ ನಿರ್ಗಮಿಸಿದ ಘಟಣೆ ನಡೆಯಿತು.
ನಗರದ ತಾಲೂಕ ಪಂಚಾಯತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗಂಭೀರವಾಗಿ ಚರ್ಚೆಗೆ ಗ್ರಾಸವಾಯಿತು

ಜಮಖಂಡಿ: ಹೊರಗುತ್ತಿಗೆ ಆಧಾರದ ಮೇಲೆ ಡಿ ನೌಕರರ ನೇಮಕಾತಿಯನ್ನು ಯಾವ ತಾ.ಪಂ ಸದಸ್ಯರ ಗಮನಕ್ಕೆ ತರದ ಹಿನ್ನೆಲೆಯಲ್ಲಿ ರದ್ದುಗೊಳಿಸುವಂತೆ ಒತ್ತಾಯಿಸಿ ಉಪಾಧ್ಯಕ್ಷೆ ಹಾಗೂ ಸದಸ್ಯರು ಅಧ್ಯಕ್ಷರ ವಿರುದ್ದ ಹರಿ ಹಾಯುತ್ತಿದ್ದಂತೆ ಅಧ್ಯಕ್ಷೆ ಸವಿತಾ ಕಲ್ಯಾಣಿ ಸಭೆಯಲ್ಲಿ ಕ್ಷಮೆಯಾಚಿಸಿ ಸಭೆಯಿಂದ ನಿರ್ಗಮಿಸಿದ ಘಟಣೆ ನಡೆಯಿತು.
ನಗರದ ತಾಲೂಕ ಪಂಚಾಯತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗಂಭೀರವಾಗಿ ಚರ್ಚೆಗೆ ಗ್ರಾಸವಾಯಿತು.
ಕಳೆದ ಎರಡು ತಿಂಗಳುಗಳ ಹಿಂದೆ ಇಬ್ಬರು ಡಿ ದರ್ಜೆ ಸಿಬ್ಬಂದಿಯನ್ನು ಸಭೆಯಲ್ಲಿ ಚರ್ಚಿಸದೆ, ಸದಸ್ಯರ ಗಮನಕ್ಕೆ ತರದೆ ಅಧ್ಯಕ್ಷರ ಸವಿತಾ ಕಲ್ಯಾಣಿ ಸರ್ವಾಧಿಕಾರಿಯಾಗಿ ಈ ನೇಮಕಾತಿಯನ್ನು ಮಾಡಿದ ಪರಿಣಾಮ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಸದಸ್ಯರಾದ ಧರೆಪ್ಪ ಗುಗ್ಗರಿ, ಬಸವರಾಜ ಕಡಪಟ್ಟಿ, ಗೋವಿಂದ ಗಸ್ತಿ, ಬಸವರಾಜ ಮಾಳಿ ನೇಮಕಾತಿ ರದ್ದುಗೊಳಿಸಿ ಅವರ ವೇತನವನ್ನು ತಡೆಹಿಡಿಯಬೇಕೆಂದು ತಾಪಂ ಇಓ ಅಬೀದ ಗದ್ಯಾಳ ಅವರಿಗೆ ಆಗ್ರಹಿಸಿದರು.
ತಾಪಂ ಉಪಾಧ್ಯಕ್ಷ ಸುಂದ್ರವ್ವ ಬೆಳಗಲಿ ಕಾರ್ಯಾಲಯದ ವ್ಯವಸ್ಥಾಪಕ ಶಹಾಪೂರ ಅವರಿಗೆ ಏಕವಚನದಲ್ಲಿ ಸಂಬೋದಿಸಿದ ಹಿನ್ನೆಲೆಯಲ್ಲಿ ಅವರು ತಿರುಗಿ ನನಗೆ ಏಕವಚನದಲ್ಲಿ ಮಾತನಾಡಬೇಡಿ ಎಂದಾಗ ಸದಸ್ಯರು ಸಿಬ್ಬಂದಿಗಳಿಗೆ ಏಕವಚನದಲ್ಲಿ ಮಾತನಾಡುವದು ಸರಿಯಲ್ಲ ಈ ತರಹ ಮಾತನಾಡಬೇಡಿ ಎಂದಾಗ ಯಾವುದೆ ಕೆಲಸವಿದ್ದರೆ ಹೇಳಿ ನಾನು ಮಾಡಿಕೊಡಲು ಸಿದ್ದನಿದ್ದೇನೆ ಎಂದು ಶಹಾಪೂರ ಹೇಳಿದರು.
ತಾಪಂ ಆವರಣದಲ್ಲಿರುವ ವಸತಿಗೃಹದಲ್ಲಿ ಸರಕಾರಿ ನೌಕರರಲ್ಲದವರು ವಾಸವಾಗಿದ್ದಾರೆ. ಅವುಗಳನ್ನು ಪರಿಶೀಲಿಸಬೇಕು, ತಾಪಂ ವ್ಯಾಪಾರ ಮಳಿಗೆಗಳ ಇಲ್ಲಿಯವರೆಗಿನ ಬಾಡಿಗೆ ಹಣ ಹಾಗೂ ನಿರ್ವಹಣೆಯ ಲೆಕ್ಕಪತ್ರಗಳನ್ನು ನೀಡಬೇಕೆಂದು ಸದಸ್ಯ ಬಸವರಾಜ ಮಾಳಿ ಒತ್ತಾಯಿಸಿದರು.
ತಾಲೂಕಿನ ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳ ಸ್ಥಾಪಿಸಲು ಹಣ ಬಿಡುಗಡೆಯಾಗಿದೆ. ಯಾವ ಶಾಲೆಗೆ ಎಷ್ಟು ಹಣ ಬಂದಿದೆ ಅದರ ಮಾಹಿತಿ ನೀಡಬೇಕು ಎಂದು ಸದಸ್ಯ ಧರೆಪ್ಪ ಗುಗ್ಗರಿ ಒತ್ತಾಯಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಕಳಪೆಮಟ್ಟದ ಆಹಾರ ದಾನ್ಯಗಳು ಪೂರೈಕೆಯಾಗುತ್ತಿದ್ದು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು, ಬಿಲ್ ಹಣವನ್ನು ತಡೆಹಿಡಿಯಬೇಕು ಎಂದು ಪ್ರತಿ ಸಭೆಯಲ್ಲಿ ಚರ್ಚೆಯಾಗುತ್ತಿದೆ. ಅಂಗನವಾಡಿ ಆಹಾರ ವಿತರಣೆಯ ಬಗ್ಗೆ ಮನೆಗಳಿಗೆ ಭೆಟ್ಟಿ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದಾಗ ಸಿಡಿಪಿಒ ಅನುರಾಧಾ ಹಾದಿಮನಿ ಮಾತನಾಡಿ ಪೂರೈಕೆಯಾಗುತ್ತಿರುವ ಆಹಾರದಾನ್ಯಗಳನ್ನು ಪರಶೀಲಿಸಿ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯಿಂದ ರೈತರ ಜಮೀನುಗಳಲ್ಲಿನ ಬೆಳೆಗಳ ಜಿಪಿಎಸ್ ಮಾಹಿತಿ ಮಾಡಲಾಗುತ್ತಿಲ್ಲ ಇದರಿಂದ ರೈತರು ತೊಂದರೆಗೊಳಗಾಗಿದ್ದಾರೆ ಎಂದು ಸದಸ್ಯ ಬಸವರಾಜ ಮಾಳಿ ದೂರಿದರು.
ತಾಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಅವುಗಳ ದುರಸ್ತಿ ಕಾರ್ಯ ಕೂಡಲೆ ಕೈಗೆತ್ತಿಕೊಳ್ಳಬೇಕು ಎಂದು ಸದಸ್ಯರಾದ ಸದಾಶಿವ ಮಾಂಗ, ಶೋಭಾ ಹೊಸೂರ, ಧರೆಪ್ಪ ಗುಗ್ಗರಿ, ಬಸವರಾಜ ಮಾಳಿ ಲೊಕೊಪಯೋಗಿ ಇಲಾಖೆಯ ಎಇಇ ಪಿ.ಎಚ್. ಗಾಯಕವಾಡ ಅವರಿಗೆ ಒತ್ತಾಯಿಸಿದರು. ಕೂಡಲೆ ರಸ್ತೆಗಳ ದುರಸ್ತಿ ಕಾರ್ಯ ಮಾಡಲಾಗುವದು ಎಂದು ತಿಳಿಸಿದರು.
ಟಿಎಚ್‌ಓ ಜಿ.ಎಸ್. ಗಲಗಲಿ ಮಾತನಾಡಿ ಇಲ್ಲಿಯವರೆಗೆ ತಾಲೂಕಿನಲ್ಲಿ ೯೪೮೪ ಕೋವಿಡ್-೧೯ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊರೊನಾ ಮಹಾಮಾರಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ದೇಶದಲ್ಲಿ ಶೇ.೧೦ ರಷ್ಟು ಕೊರೊನಾ ಸೊಂಕು ದೃಢಪಟ್ಟಿದೆ. ಶೇ. ೩ರಷ್ಟು ಸಾವಿನ ಪ್ರಮಾಣವಿದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ ಮಾತನಾಡಿ ತಾಲೂಕಿನಾದ್ಯಂತ ೬೭ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾಗಮ ಶಿಕ್ಷಣ ನೀಡಲಾಗುತ್ತಿದೆ, ಅಕ್ಟೋಬರ ೯ರಂದು ಶಿಕ್ಷಣ ಸಚಿವ ಸುರೇಶಕುಮಾರ ಅವರು ಸಾವಳಗಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸಮಾಜಕಲ್ಯಾಣ, ಪಶು ಸಂಗೋಪನಾ, ಅಕ್ಷರ ದಾಸೋಹ, ಹೆಸ್ಕಾಮ್, ಹಿಂದುಳಿದ ಕಲ್ಯಾಣ, ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.