Gummata Nagari

Headlines

ಅಮ್ಮಾಜೇಶ್ವರಿ ಏತ ನೀರಾವರಿಯಿಂದ ಶೇ. 95 ರಷ್ಟು ನೀರಾವರಿ: ಸಿದ್ದರಾಮಯ್ಯ

 

ಅಥಣಿ: ತಾಲೂಕಿನ ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಯಿಂದ ಅಥಣಿ ತಾಲೂಕಿನ ಶೇ.95 ರಷ್ಟು ಕೃಷಿ ಭೂಮಿ ನೀರಾವರಿ ಸೌಲಭ್ಯ ಹೊಂದಲಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮೇಲೆತ್ತುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಅಂತರ್ಜಲ ಕುಸಿತ ತಪ್ಪಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಬುಧವಾರ(ಮಾ.06) ನಡೆದ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಕೃಷ್ಣಾ ನದಿಯ ಎಡದಂಡೆಯಿAದ 2.903 ಟಿ.ಎಂ.ಸಿ ನೀರು ಎತ್ತುವ ಮೂಲಕ ರೈತರ ಅನುಕೂಲಕ್ಕಾಗಿ ಯೋಜನೆ ಪ್ರಾರಂಭಿಸಲಾಗಿದೆ. ಇಲ್ಲಿನ ಶಾಸಕ ಲಕ್ಷ್ಮಣ ಸವದಿ ಅವರ ಬೇಡಿಕೆಯಂತೆ ಅಂದಾಜು 1486 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಚಾಲನೆ ನೀಡಲಾಗಿದೆ. ಈ ಯೋಜನೆಯ ಪ್ರತಿ ಹನಿ ನೀರು ರೈತರಿಗೆ ಉಪಯೋಗವಾಗಬೇಕು. ರೈತರ ಜಮೀನುಗಳಿಗೆ ಹರಿ ಬಿಡುವ ಮೂಲಕ ನೀರು ಸಮರ್ಪಕ ಸದ್ಬಳಕೆಯಾಗಬೇಕು ಎಂದು ಹೇಳಿದರು.

ಈ ಯೋಜನೆಯಿಂದ ಸುಮಾರು 19274.00 ಹೆಕ್ಟೇರ್ ಪ್ರದೇಶಕ್ಕೆ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಚುನಾವಣೆಗಿಂತ ಮುಂಚಿತವಾಗಿ ಹೇಳಿದ ಐದು ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಸರ್ಕಾರ ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆ ಮೂಲಕ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗಿದೆ. ಬಡವರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿ ತಿಂಗಳು 1 ಕೋಟಿ 20 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಪ್ರತಿ ತಿಂಗಳಿಗೆ 2 ಸಾವಿರ ನೀಡುವುದರ ಮೂಲಕ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿರುವುದು ರಾಜ್ಯದ ಜನರಿಗೆ ಅನುಕೂಲದಾಯಕವಾಗಿದೆ. ಪೆಟ್ರೋಲ್, ಡೀಸೆಲ್, ದವಸ ಧಾನ್ಯಗಳ ಬೆಲೆ ಏರಿಕೆಗೆ ರಾಜ್ಯದ ಜನತೆ ಬೇಸತ್ತು ಹೋಗಿತ್ತು. ಆ ವೇಳೆಯಲ್ಲಿ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಬಹಳ ಅನುಕೂಲವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ಅನ್ನಭಾಗ್ಯ, ಗ್ರಹಲಕ್ಷ್ಮೀ, ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳನ್ನು ರಾಜ್ಯದ ಜನತೆಯ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಈ ಭಾಗದ ಅಭಿವೃದ್ಧಿಗೆ ನಿಮ್ಮ ಶಾಸಕರಾದ ಲಕ್ಷ್ಮಣ ಸವದಿ ಅವರು ನಿರಂತರ ಶ್ರಮಿಸುತ್ತಿದ್ದಾರೆ. ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದ ಕುಟುಂಬಗಳ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಅಥಣಿ ಶಾಸಕ  ಸವದಿ ಮಾತನಾಡಿ, ಚುನಾವಣೆಯ ಪೂರ್ವದಲ್ಲಿ ರಾಜ್ಯಕ್ಕೆ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಬಸವಣ್ಣನವರ ವಚನದಂತೆ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ಈ ಭಾಗದ ರೈತರು ಸ್ವಾವಲಂಬಿ ಜೀವನ ಸಾಗಿಸಲು ನೀರಿನ ಅವಶ್ಯಕತೆ ಬಹಳಷ್ಟಿದೆ. ಅಥಣಿ ತಾಲೂಕಿನ ಪೂರ್ವಭಾಗದ ಆಸೆಯಂತೆ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸುಮಾರು ವರ್ಷಗಳಿಂದ ಈ ಭಾಗದ ರೈತರಿಗೆ ನೀರಾವರಿ ಯೋಜನೆಯ ಅವಶ್ಯಕತೆಯಿತ್ತು. ರೈತರ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ. ಪ್ರತಿ ವರ್ಷ ಬರಗಾಲದಲ್ಲಿ ರೈತರಿಗೆ ಬಹಳ ತೊಂದರೆ ಆಗುತಿತ್ತು. ಈ ನೀರಾವರಿ ಯೋಜನೆ ಪ್ರಾರಂಭದಿAದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಸಮಗ್ರ ನೀರಾವರಿ ಅಭಿವೃದ್ಧಿಗೆ ಸರ್ಕಾರ ಬದ್ದವಿದೆ ಎಂದು ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಮ್. ಬಿ ಪಾಟೀಲ ತಿಳಿಸಿದರು.

ಸಚಿವೆ  ಹೆಬ್ಬಾಳಕರ್ ಮಾತನಾಡಿ, ಸುಮಾರು 1486 ಕೋಟಿ ವೆಚ್ಚದಲ್ಲಿ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಪ್ರಾಂಭಿಸುವ ಮೂಲಕ ಈ ಭಾಗದ ರೈತರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ತಿಂಗಳಿಗೆ 5 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ವ್ಯಯ ಮಾಡುತ್ತಿದೆ. ಅದರ ಜೊತೆಗೆ ಸರ್ಕಾರ ಸಾಕಷ್ಟು ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುತಿದೆ ಎಂದು ತಿಳಿಸಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಇದಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಲೋಕೋಪಯೋಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಗುದ್ದಲಿ ಪೂಜೆ ಸಲ್ಲಿಸುವುದರ ಮೂಲಕ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್ ಶಾಸಕ ಚನ್ನರಾಜ ಹಟ್ಟಿಹೊಳಿ, ವಿಧಾನ ಸಭೆ ಶಾಸಕ ಮಹೇಂದ್ರ ತಮ್ಮಣ್ಣವರ, ಮಹಾರಾಷ್ಟ್ರ ಮಾಜಿ ಸಚಿವ ಶಾಸಕ ವಿಶ್ವಜೀತ್ ಕದಮ್. ಜತ್ತ ಶಾಸಕರಾದ ವಿಕ್ರಮಜೀತ ಸಾಮಂತ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್. ಆನಂರ ನ್ಯಾಮಗೌಡ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ರಾಹುಲ್ ಶಿಂಧೆ, ಡಾ.ಭೀಮಾಶಂಕರ ಎಸ್ ಗುಳೇದ, ಕೊಟ್ಟಲಗಿ ಗ್ರಾಪಂ ಅಧ್ಯಕ್ಷೆ ನೀಲವ್ವ ತೇಲಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಅಥಣಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Most Popular

To Top
error: Content is protected !!