ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಅಕ್ಷರ ದಾಸೋಹಿ: ದಿ. ತಿಪ್ಪಣ್ಣ ಲ. ಮುತ್ತಣ್ಣವರ

0

Gummata nagari : Special story

ಬೋಧನೆ ಬಸವಾದಿ ಶರಣರು ಹರಿಸಿದ ಕಾಯಕ,
ಬರವಣಿಗೆ ಪುಣ್ಯ ಜೀವಿಗಳಾದ ಶರಣರ ಮಹಾಶೀರ್ವಾದ. ಮುತ್ತಣ್ಣವರ ಅಂಕಿತವೇ ತವನಿಧಿ.ಆ ಅಕ್ಷರ ದಾಸೋಹಿಯೇ ಶ್ರೀ. ಟಿ ಎಲ್ ಮುತ್ತಣ್ಣವರ ಮಾಸ್ತರ್ ಅಂತ ಚಿರಪರಿಚಿತ. ಅವರ ಆಂತರ್ಯದಲ್ಲಿ ಅಡಕವಾಗಿದ್ದ ಮೃದುವಾದ ಮಾತುಗಳೇ ಗಟ್ಟಿ ಅಕ್ಷರ ಕಾಳುಗಳು.
ಶ್ರೀಯುತ ಟಿ.ಎಲ್ .ಮುತ್ತಣ್ಣವರ ಜನಿಸಿದ್ದು ಖಜ್ಜಿದೋಣಿ ಗ್ರಾಮದಲ್ಲಿ. ಕಡುಬಡತನದ ಕುಟುಂಬದಲ್ಲಿ ಶ್ರೀಮತಿ.ಕೃಷ್ಣವ್ವ ಹಾಗೂ ಶ್ರೀ.ಲಕ್ಷ್ಮಪ್ಪ ಅವರ 5ನೆ ಮಗನಾಗಿ 01/03/1946 ರಲ್ಲಿ ಹುಟ್ಟಿದರು. ಅದೇ ಊರಿನ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಕಲಿತು ಅದೇ ಶಾಲೆಯಲ್ಲಿ 29 ವಷ೯ಗಳ ಕಾಲ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತರಾದರು. ಸಾವಿರಾರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರ ರಾದಂತಹ ಗುರುಗಳು ದಿನಾಂಕ: 18-05-2021 ರಂದು ಸಾಯಂಕಾಲ 4-25 ಗಂಟೆಗೆ ಲಿಂಗೈಕ್ಯರಾದರು.

ಶ್ರೀಯುತರ ಅಗಲಿಕೆಗೆ ಅವರ ಇಡೀ ಶಿಷ್ಯವೃಂದವು ಶೋಕಸಾಗರದಲ್ಲಿ ಮುಳುಗಿದೆ.ಶ್ರೀಯುತರಿಂದ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತೆಂದು ಇಡೀ ಶಿಷ್ಯವೃಂದವು ಟಿ ಎಲ್ ಮುತ್ತಣ್ಣವರ ಮಾಸ್ತರ್ ಅವರಿಗೆ ನುಡಿನಮನ ಸಲ್ಲಿಸಿದೆ.
ಗ್ರಾಮೀಣ ಪ್ರದೇಶದ ಕಜ್ಜಿದೋಣಿ ಗ್ರಾಮದಲ್ಲಿ ಏನಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲೇಬೇಕೆಂದು ಛಲ ತೊಟ್ಟಿದ್ದರು.ಶಾಲಾ ಅವಧಿ ಅಲ್ಲದೆ ಸಂಜೆ ರಾತ್ರಿಶಾಲೆಯನ್ನು ಆರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು.ಗಣಿತ, ವಿಜ್ಞಾನ,ಸಮಾಜ ವಿಜ್ಞಾನ ಹೀಗೆ ಕಠಿಣ ವಿಷಯಗಳನ್ನು ಅತಿ ಸರಳವಾಗಿ ತಿಳಿಸುತ್ತಿದ್ದರು. ಯಾವುದೇ ಜಾತಿ ಮತ ಪಂಥ ಎನ್ನದೆ ಎಲ್ಲ ಮಕ್ಕಳನ್ನು ಸಮಾನವಾಗಿ ನೋಡಿಕೊಂಡು ಅಕ್ಷರ ಜ್ಞಾನ ಕೊಟ್ಟಿದ್ದ ದಾಸೋಹಿ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ದಂಡಿಸುತ್ತಿದ್ದರು.ಹಾಗೆಯೇ ಆಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ತತ್ಪರಿಣಾಮವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಡ ಕ್ರೀಡಾಪಟುಗಳು ತಯಾರಾಗಿ ಖಜ್ಜಿದೋಣಿಯ ಕೀರ್ತಿ ಪತಾಕೆಯನ್ನು ಹಾರಿಸಿದರು.

ಶಾಲಾ ಶಿಕ್ಷಣ ವ್ಯವಸ್ಥೆಗಳು ಇಂದಿನ ಮಕ್ಕಳಿಗೆ ಏನನ್ನು ಕಲಿಯಬೇಕು ಎಂಬುದರ ಕುರಿತು ತಿಳುವಳಿಕೆ ನೀಡುತ್ತಿದ್ದರು, ಮಕ್ಕಳಲ್ಲಿ ವಿಚಾರ ಶಕ್ತಿಯನ್ನು ಬೆಳೆಸುತ್ತಿದ್ದರು, ಮಕ್ಕಳಲ್ಲಿ ಸ್ವಾಭಾವಿಕವಾಗಿ ವಿಚಾರಶಕ್ತಿ ಬೆಳೆಯುವ ಸಾಧ್ಯತೆಗಳು ಇರುವುದು ನಿಜವಾದರೂ ಆ ವಿಚಾರಶಕ್ತಿಗೆ ಸ್ಪಷ್ಟತೆಯನ್ನು ಗಳಿಸಿಕೊಳ್ಳುವುದರಲ್ಲಿ ನೆರವಾಗುತ್ತಿದ್ದರು. ಆಸಕ್ತರಿಗೆ ತಾನೇ ತಾನಾಗಿ ಹಲವು ದಾರಿಗಳು ತೆರೆದುಕೊಳ್ಳುತ್ತವೆ! ಅಂತಹ ಅನೇಕ ದಾರಿಗಳನ್ನು ತಿಪ್ಪಣ್ಣ ಸರ್ ಕಂಡುಹಿಡಿಯುತ್ತಿದ್ದರು. ಶಿಕ್ಷಣದಲ್ಲಿ ಇರುವ ಶ್ರದ್ಧೆ, ಚಾಕಚಕ್ಯತೆ, ಪ್ರೀತಿ ಹಾಗೂ ಅವರು ಅನುಸರಿಸುತ್ತಿದ್ದ ಸ್ವತಂತ್ರ ರೀತಿಯ ಬೋಧನಾ ಕೌಶಲದ ನಿಲುವುಗಳ ಬಗ್ಗೆ ಅರಿವಿದ್ದವರೇ ತಿಪ್ಪಣ್ಣ ಮಾಸ್ತರ.
ತಾವು ಅನುಸರಿಸುತ್ತಿರುವ ಶಿಕ್ಷಣ ಪದ್ಧತಿಯ ಬಗ್ಗೆ ಆಪ್ತತೆಯಿಂದ ತಮ್ಮನ್ನು ತೆರೆದಿಟ್ಟುಕೊಳ್ಳುತ್ತಿದ್ದ ತಿಪ್ಪಣ್ಣ ಮಾಸ್ತರ್ ಅವರು ಸಾಂಪ್ರಾದಾಯಿಕ ಬೋಧನಾ ಕಲೆ ಮತ್ತು ಇಂದಿನ ಸಾಂಕೇತಿಕ ಬೋಧನಾ ಕಲೆಯ ತಾಕಲಾಟಗಳ ನಡುವೆ ಒಂದು ಹೊಸ ಬೋಧನಾ ಪದ್ಧತಿಯನ್ನು ಹೇಳಿಕೊಡುತ್ತಿದ್ದರು ಎಲ್ಲಕ್ಕಿಂತ ಮಿಗಿಲಾಗಿ ವಿಜ್ಞಾನ ಹಾಗೂ ಗಣಿತದ ಬಗ್ಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಶಬ್ದಸಂಗ್ರಹ, ಭಾಷಾ ಪ್ರಾವೀಣ್ಯತೆ ಹೆಚ್ಚಿಸಿಕೊಳ್ಳುವುದರಲ್ಲಿ ಮಾರ್ಗದರ್ಶನ ನೀಡುವುದರ ಜೊತೆ ಜೊತೆಗೆ, ಶಾಲಾ ಕೊಠಡಿಯಲ್ಲಿ ಮಕ್ಕಳನ್ನು ನಿಯಂತ್ರಿಸುವ ಬಗ್ಗೆ ಹಾಗೂ ಮಕ್ಕಳಲ್ಲಿ ಕಲಿಕಾ ಸುಧಾರಣೆಗಳನ್ನು ಮೂಡಿಸುತ್ತಿದ್ದರು. ಸಲಹಾತ್ಮಕ ವಿಧಾನಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು.

ಹನ್ನೆರಡನೇ ಶತಮಾನದಲ್ಲಿ ಹೇಗೆ ಶೂನ್ಯದಿಂದ ಅಕ್ಷರ ಕ್ರಾಂತಿಯಾಯಿತು ಎಂಬ ಬಸವಣ್ಣನವರ ಮಾದರಿ ಅನುಸರಣ ಯೋಗ್ಯ ಎಂದು ತಿಪ್ಪಣ್ಣ ಮಾಸ್ತರ್ ಆಳವಾಗಿ ನಂಬಿದ್ದರು. 12ನೆಯ ಶತಮಾನದದಲ್ಲಿ ನಡೆದ ಶರಣರ ಕ್ರಾಂತಿ ನೆನೆಯುತ್ತಾ, 12ನ್ನು ಉಲ್ಟಾ ಮಾಡಿಕೊಂಡಾಗ 21 ಆಗುತ್ತದೆ. ಅಂದರೆ ಇಂದು ನಾವಿರುವ 21ನೆಯ ಶತಮಾನದಲ್ಲಿ ಅಕ್ಷರ ಕ್ರಾಂತಿ ಪುನರವರ್ತನೆಯಾಗುತ್ತಿದೆ ಎಂದು ಹೇಳುತ್ತಿದ್ದರು. ಅವರಲ್ಲೊಂದು ಆಪ್ತತೆಯ ಮಿನುಗಿದೆ. ಇದರ ಪ್ರಯೋಜನ ಇಂದಿನ ಶಿಕ್ಷಕರ ಮೂಲಕ ಉತ್ತಮವಾಗಿ ವಿದ್ಯಾರ್ಥಿಗಳನ್ನು ಮೊಳಕೆಯಲ್ಲೇ ತಲುಪಬೇಕು ಎಂಬ ಸದುಧ್ಯೇಯವನ್ನು ತಿಪ್ಪಣ್ಣ ಮಾಸ್ತರ್ ಅವರು ತಮ್ಮದಾಗಿರಿಸಿಕೊಂಡಿದ್ದಾರೆ. ಈ ಶಿಕ್ಷಣ ಕಾಯಕವನ್ನು ಹೆಚ್ಚಿನ ಸಂಪಾದನೆಯ ಹಾದಿಯನ್ನಾಗಿ ಮಾಡಿಕೊಂಡಿಲ್ಲ. ತಮ್ಮ ಬದುಕಿಗೆ ತಾವು ನಿರ್ವಹಿಸುತ್ತಿರುವ ಸಂಬಳವನ್ನು ಮಾತ್ರ ಅವಲಂಬಿಸಿದ್ದರು.
ಅವರ ಕಾಯಕದ ಕುರಿತು ಇಡೀ ಬಾಗಲಕೋಟ ಜಿಲ್ಲೆಯಲ್ಲಿ ಸಹೃದಯತಾ ಭಾವ ಹೊರಹೊಮ್ಮುತ್ತಿದೆ. ಅವರ ಕಾಯಕವನ್ನು ಶ್ಲಾಘನಾ ಭಾವದಿಂದ ಕಂಡಿರುವ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಾ ಸಂಸ್ಥೆಗಳು ಅವರನ್ನು ಹಲವು ರೀತಿಯ ಗೌರವಗಳಿಂದ ಸನ್ಮಾನಿಸಿವೆ. ಬಾಗಲಕೋಟೆಯ ಶಿಕ್ಷಕ ದಿನೋತ್ಸವ ಸಮಿತಿಯು 2000-01ರಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ತಿಪ್ಪಣ್ಣ ಮಾಸ್ತರ್ ಅವರ ಈ ಜ್ಞಾನ ಪ್ರಸರಣ ಕ್ರಾಂತಿ ಹೆಚ್ಚು ಹೆಚ್ಚು ಪ್ರಜ್ವಲಿಸಿ ಕಜ್ಜಿದೋಣಿಯಲ್ಲಿ ಅಕ್ಷರ ಕ್ರಾಂತಿಯಾಯಿತು. ಅವರಿಂದ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜದಲ್ಲಿ ಉತ್ತಮತೆಯ ಬದಲಾವಣೆಗೆ ಮಹತ್ತರವಾದ ಕೊಡುಗೆಗಳು ಅಪಾರ. ಅಂತಹ ಮಹನೀಯರು ಈಗ ನಮ್ಮೊಂದಿಗಿಲ್ಲ.ಅವರು ಒಂದು ನೆನಪು ಆದರೆ ಇಡೀ ಖಜ್ಜಿದೋಣಿ ಗ್ರಾಮವನ್ನು ಸುಶಿಕ್ಷಿತ ಗ್ರಾಮವನ್ನಾಗಿಸಲು ತಿಪ್ಪಣ್ಣ ಮಾಸ್ತರ್ ಶ್ರಮ ಇದೆ.ಅವರ ಕಾಳಜಿಯಿಂದ ಗ್ರಾಮದ ಅನೇಕರು ವಿವಿಧ ಹುದ್ದೆಗಳಲ್ಲಿ, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಅಂತಹ ಮಹನೀಯರನ್ನು ಖಜ್ಜಿದೋಣಿಯು ಜನತೆಯು ಸದಾಕಾಲ ಸ್ಮರಿಸುತ್ತದೆ.

ಪ್ರೊ.ಭಾರ್ಗವ ಎಚ್ ಕೆ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.