ಗುಣಮಟ್ಟದ ರೇಷ್ಮೆಗೂಡಿನ ಜೊತೆಗೆ ಆದಾಯವನ್ನು ಹೆಚ್ಚಿಸಿಕೊಳ್ಳಿ

ರೇಷ್ಮೆ ಬೆಳೆಗಾರರು ಪ್ರೋತ್ಸಾಹಧನ ಪಡೆಯಬಹುದು

0

ಬೈವೋಲ್ಟಿನ್ ರೇಷ್ಮೆಗೂಡು ಉತ್ಪಾದನೆ ಮತ್ತು ಬೆಳೆ ಸ್ಥಿರತೆಗೆ ಸೂಕ್ತ ಸಂಕರಣ ತಳಿಗಳ ಬಳಕೆ ಕುರಿತು ತರಬೇತಿ

ಶ್ರೀನಿವಾಸಪುರ : ತಾಲ್ಲೂಕಿನ ಕಾಡುದೇವಾಂಡಹಳ್ಳಿ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರಿಗೆ ಗುಣಮಟ್ಟದ ಬೈವೋಲ್ಟಿನ್ ರೇಷ್ಮೆಗೂಡು ಉತ್ಪಾದನೆ ಮತ್ತು ಬೆಳೆ ಸ್ಥಿರತೆಗೆ ಸೂಕ್ತ ಸಂಕರಣ ತಳಿಗಳ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ರೇಷ್ಮೆ ಉಪನಿರ್ದೇಶಕರಾದ ಡಿ.ಎಂ. ಆಂಜನೇಯಗೌಡರವರು ಭಾಗವಹಿಸಿ ಸುಧಾರಿತ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆಯ ಜೊತೆಗೆ ಆದಾಯವನ್ನು ಹೆಚ್ಚಿಸಿಕೊಳ್ಳಬಹುದೆಂದು ತಿಳಿಸಿದರು. ಪ್ರಸ್ತುತ ರಾಜ್ಯ ಸರ್ಕಾರವು ಏಪ್ರೀಲ್-1 ರಿಂದ ಅನ್ವಯವಾಗುವಂತೆ ಸೆಪ್ಟೆಂಬರ್‍ವರೆಗೂ ದ್ವಿತಳಿ ಹಾಗೂ ಮಿಶ್ರತಳಿ ರೇಷ್ಮೆಗೂಡು ಬೆಳೆದಿರುವ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ಘೋಷಿಸಿದ್ದು, ಪ್ರತಿ ಕೆ.ಜಿ. ಬೈವೋಲ್ಟಿನ್ ರೇಷ್ಮೆಗೂಡಿಗೆ ರೂ. 50 ರಂತೆ ಹಾಗೆ ಮಿಶ್ರತಳಿ ರೇಷ್ಮೆಗೂಡಿಗೆ ರೂ. 30 ರಂತೆ 100 ಮೊಟ್ಟೆಗೆ 60 ಕೆ.ಜಿ. ಮೇಲ್ಪಟ್ಟು ಇಳುವರಿ ಪಡೆದಿರುವ ರೇಷ್ಮೆ ಬೆಳೆಗಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಪ್ರೋತ್ಸಾಹಧನ ಪಡೆಯಬಹುದೆಂದು ತಿಳಿಸಿದರು.
ನಂತರ ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆಕೃಷಿ ವಿಜ್ಞಾನಿಗಳಾದ ಡಾ. ಶಶಿಧರ್ ಕೆ.ಆರ್‍ರವರು ಮಾತನಾಡಿ, ಬೈವೋಲ್ಟಿನ್ ನೂತನ ಸಂಕರಣ ತಳಿಯಾದ fc2 x fc1 ಡಬಲ್ ಹೈಬ್ರಿಡ್ ಸಂಕರಣ ತಳಿಯು ಕೋಲಾರ ಭಾಗದ ರೈತರಿಗೆ ಆಶಾದಾಯಕವಾಗಿದ್ದು, ಜಿಲ್ಲೆಯ ಶೇಕಡ 80 ರಷ್ಟು ಬೈವೋಲ್ಟಿನ್ ರೇಷ್ಮೆಗೂಡು ಉತ್ಪಾದನೆಯಲ್ಲಿ ಸದರಿ ಸಂಕರಣ ತಳಿಯನ್ನು ಹುಳು ಸಾಕಾಣಿಕೆ ಮಾಡುತ್ತಿದ್ದು, ಗುಣಮಟ್ಟದ ಗೂಡು ಉತ್ಪಾದನೆಯ ಜೊತೆಗೆ ಬೆಳೆ ಸ್ಥಿರತೆಯನ್ನು ಕಾಪಾಡಿಕೊಂಡು ಬೆಳೆಯಬಹುದಾಗಿದೆ ಎಂದು ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಕೃಷಿ ಹವಾಮಾನ ಶಾಸ್ತ್ರ ತಜ್ಞಾರಾದ ಕುಮಾರಿ ಸ್ವಾತಿ ಜಿ.ಆರ್ ರವರು ಮಾತನಾಡಿ, ಹವಾಮಾನ ಮುನ್ಸೂಚನೆ ನೀಡಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹಾಗೂ ಭಾರತೀಯ ಹವಾಮಾನ ಇಲಾಖೆಯು ಒಗ್ಗೂಡಿ ಮೇಘದೂತ್ ಹಾಗೂ ದಾಮಿನಿ ಎಂಬ ತಂತ್ರಾಂಶಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೇಘದೂತ ತಂತ್ರಾಶವು ಸ್ಥಳೀಯ ಭಾಷೆಯಲ್ಲಿ ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ನೀಡುತ್ತದೆ. ಜೊತೆಗೆ ಹವಾಮಾನ ಆಧಾರಿತ ಬೆಳೆ ಸಲಹೆಯನ್ನು ಸಹ ಆಯಾ ಜಿಲ್ಲೆಗೆ ಅನುಸಾರವಾಗಿ ಮಾಹಿತಿಯನ್ನು ನೀಡುತ್ತದೆ. ಅದನ್ನು ರೈತರು ತಮ್ಮ ಅಂಡ್ರಾಯಿಡ್ ಮೊಬೈಲ್‍ನಲ್ಲಿ ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಸೆರಿಕೇರ್ ಸಂಸ್ಥೆಯ ಬೆಂಗಳೂರು ವಿಭಾಗದ ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ. ವಿಜಯಕುಮಾರ್‍ರವರು ಗುಣಮಟ್ಟದ ಸೊಪ್ಪು ಉತ್ಪಾದನೆಯಲ್ಲಿ ಲಘುಪೋಷಕಾಂಶಗಳ ಮಿಶ್ರಣವಾದ ಸೇರಿಪೋಷಣ್ ಎಲೆ ಸಿಂಪರಕವನ್ನು ಬಳಸುವುದು, ವೈಜ್ಞಾನಿಕ ಪದ್ಧತಿಯಲ್ಲಿ ಸೊಂಕು ನಿರ್ವಹಣೆಯನ್ನು ಹುಳುಸಾಕಾಣಿಕೆಯಲ್ಲಿ ಕೈಗೊಳ್ಳುವ ಬಗ್ಗೆ ಪದ್ಧತಿ ಪ್ರಾತ್ಯೆಕ್ಷಿಕೆಯ ಮುಖಾಂತರ ರೈತರಿಗೆ ಮಾಹಿತಿ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ನಾಗರಾಜ, ವಲಯಾಧಿಕಾರಿಗಳಾದ ಶ್ರೀನಿವಾಸ, ಸೇರಿಕೇರ್ ಸಂಸ್ಥೆಯ ಸುರೇಶ್, ಪ್ರಗತಿಪರ ರೈತರಾದ ರಮೇಶ ಭಾಗವಹಿಸಿದ್ದರು ಹಾಗೂ 40 ರೈತರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.