ಗುಂಡಿಗಳಲ್ಲಿ ರಸ್ತೆ ನಿರ್ಮಾಣ?

ಬಿಜಾಪುರ ನಗರದಲ್ಲಿ ಗುಂಡಿಗಳದ್ದೇ ದರಬಾರ್: ವಾಹನ ಸವಾರರ ಸರ್ಕಸ್ ಆಡಳಿತಕ್ಕೆ ಹಿಡಿಶಾಪ

0

Gummata Nagari

ಬಿಜಾಪುರ : ನಗರದ ರಸ್ತೆಗಳ ಅವ್ಯವಸ್ಥೆ ಇಡೀ ನಾಡಿನಲ್ಲಿಯೇ ಪ್ರಸಿದ್ಧಿ. ರಸ್ತೆಯ ಮಧ್ಯದಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲಿಯೇ ರಸ್ತೆ ನಿರ್ಮಿಸಿದ್ದಾರೋ ಎಂಬ ಪ್ರಶ್ನೆಗೆ ವಾಹನ ಸವಾರರು ಉತ್ತರ ಹುಡುಕುತ್ತಲೆ ಇದ್ದಾರೆ.

ಝಿಗ್ ಝಾಗ್ ಮಾದರಿಯ ಈ ಸಾಹಸಿ ರಸ್ತೆಗಳ ಮೇಲೆ ವಾಹನ ಓಡಿಸಲು ಸರ್ಕಸ್ ಮಾಡಲೇಬೇಕು. ಬಿಜಾಪುರದ ಅಧ್ಬುತ ರಸ್ತೆಗಳಲ್ಲಿ ವಾಹನ ಓಡಿಸುವವರು ಜಗತ್ತಿನ ಯಾವುದೇ ಮೂಲೆಯಲ್ಲಿ ವಾಹನವನ್ನು ಓಡಿಸಬಲ್ಲ ಎದೆಗಾರಿಕೆ ಬೆಳಸಿದ್ದೇ ಈ ರಸ್ತೆಗಳು. ಬಹುಶಃ ಈ ಕಾರಣಕ್ಕಾಗಿಯೇ ಈ ರಸ್ತೆಗಳು ಸುಧಾರಣೆಯಾಗುತ್ತಿಲ್ಲವೇನೋ ಎಂಬಂತಾಗಿದೆ.

ಬಿಜಾಪುರ ನಗರ ಐತಿಹಾಸಿಕ ತಾಣ. ಹತ್ತಾರು ಐತಿಹಾಸಿಕ ಸ್ಮಾರಕಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡಿದೆ. ಬಿಜಾಪುರ ನಗರಕ್ಕೆ ಪ್ರವಾಸಿಗರು ದಿನಂ ಪ್ರತಿ ಆಗಮಿಸುತ್ತಲಿರುತ್ತಾರೆ. ಆದರೆ ಅವರಿಗೆ ನಗರ ಪ್ರವೇಶಿಸುತ್ತಿದ್ದಂತೆ ಅವರಿಗೆ ಸ್ವಾಗತಿಸುವುದು ರಸ್ತೆಗಲ್ಲಿನ ಗುಂಡಿಗಳು. ನಗರದ ಒಂದೇ ಒಂದು ರಸ್ತೆಯು ಗುಂಡಿಯಿಲ್ಲದೆ ಇಲ್ಲಾ. ನಗರದ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ಗುಂಡಿಗಳಿವೆ. ಇನ್ನು ಇದಷ್ಟೆ ಅಲ್ಲದೆ ನಗರದ ಪ್ರಮುಖ ರಸ್ತೆಗಳಾದ ಸೂಲಾಪುರ ರೋಡ, ಜುಮ್ಮಾ ಮಸೀದಿ ರಸ್ತೆ, ಬಾಗಲಕೋಟ ರೋಡ, ಬಸ್ ಸ್ಟ್ಯಾಂಡ್ ರಸ್ತೆ, ಜೋಡ ಗುಮ್ಮಟ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ಗುಂಡಿಗಳಿದ್ದು ಅಲ್ಲಿಂದ ಸಂಚರಿಸುವ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ.

ಇನ್ನು ರಸ್ತೆಗಳ ಸುಧಾರಣೆಗೆ ಹಲವು ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಮಾಡುತ್ತಲೆ ಇದ್ದು ಇಷ್ಟಕ್ಕು ಸಾಕಾಗದೆ ರಸ್ತೆಗಳಲ್ಲಿ ಸಸಿಗಳನ್ನು ನೆಟ್ಟು ತಮ್ಮ ಆಕ್ರೋಶ ಹೊರಹಾಕಿದ್ದರು ಇದಕ್ಕೂ ಕ್ಯಾರೆ ಎನ್ನದ ಅಧಿಕಾರಗಳು ಗಪ್‌ಚುಪ್ ಆಗಿದ್ದಾರೆ. ಇನ್ನು ನಗರ ಶಾಸಕ ಯತ್ನಾಳ ವಿರುದ್ಧವು ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ರಸ್ತೆಗಳ ದುಸ್ಥಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.

” ಐತಿಹಾಸಿಕ ನಗರದಲ್ಲಿ ಮೊದಲು ಮೂಲ ಸೌಲಭ್ಯಗಳು ಕಲ್ಪಿಸುವಲ್ಲಿ ಜಿಲ್ಲಾಡಳಿತ ಗಮನಹರಿಸಬೇಕು. ಸರಕಾರ ಅಭಿವೃದ್ಧಿ ಮಾಡುತ್ತಿದೆ ಎಂದು ಕೇವಲ ಘೋಷಣೆ ಮಾಡುತ್ತಿದೆ ಹೊರತು ಯಾವುದೇ ಸೌಲಭ್ಯ ಒದಗಿಸುತ್ತಿಲ್ಲ. ನಗರದ ರಸ್ತೆಗಳನ್ನು ನೋಡಿದರೆ ಅಭಿವೃದ್ಧಿ ಶೂನ್ಯ ಎಂಬುದು ಗೊತ್ತಾಗುತ್ತದೆ ”
-ಅಬ್ದುಲ್ ಹಮೀದ್ ಮುಶ್ರೀಫ್, ಕಾಂಗ್ರೆಸ್ ಮುಖಂಡ, ಬಿಜಾಪುರ.

ಗುಂಡಿ ಇರುವ ರಸ್ತೆಯಲ್ಲಿ ಸಂಚರಿಸಲು ಗುಂಡಿಗೆ ಇರಬೇಕು

ಗುಂಡಿಗಳಿಂದಲೇ ತುಂಬಿಹೋಗಿರುವ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರಿಗೆ ಗುಂಡಿಗೆ ಇರಬೇಕು, ಸ್ವಲ್ಪವೇ ಆಯತಪ್ಪಿದರೂ ರಾಡಿ ನೀರಿನ ಸ್ನಾನ ಮಾತ್ರ ಖಾತ್ರಿ. ಹೀಗಾಗಿ ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸಿ ಎಲ್ಲಿ ಆಪತ್ತು ಮೈಗೆಳೆದುಕೊಳ್ಳುವುದು ಎಂದು ಅನೇಕರು ಬೈಕ್ ಬದಿಗಿಟ್ಟು ನಡೆದುಕೊಂಡೇ ಸಂಚರಿಸುವಂತಾಗಿದೆ.

ವಾಹನ ಸವಾರರು ಒಂದೆಡೆ ಇರಲಿ ನಡೆದುಕೊಂಡು ಹೋಗುವವರು ಸಹ ರಾಡಿ ನೀರಿನ ಅಭಿಷೇಕ ಸ್ವೀಕರಿಸುವಂತಾಗಿದೆ, ಗುಂಡಿಗಳಲ್ಲಿ ಹಾದು ಹೋಗುವ ವಾಹನಗಳ ರಭಸಕ್ಕೆ ರಾಡಿ ನೀರು ಚಿಮ್ಮಿ ಪಾದಚಾರಿಗಳಿಗೆ ಸಿಡಿಯುತ್ತಲೇ ಇದೆ.

ಅನೇಕರು ತಗ್ಗು-ದಿನ್ನೆ ಗೊತ್ತಾಗದೇ ನೀರಿನಲ್ಲಿ ವಾಹನ ಓಡಿಸಿ ಕೈಕಾಲು ಮುರಿದುಕೊಂಡ ಘಟನೆಗಳು ವರದಿಯಾಗಿವೆ, ಹೀಗಾಗಿ ವಾಹನ ಓಡಿಸುವ ಸರ್ಕ್ಸ್ ಕಲಿಯಲೇಬೇಕಾದ ಅನಿವಾರ್ಯತೆ ಇದೆ.

“ಬಿಜಾಪುರದ ರಸ್ತೆಗಳು ರಸ್ತೆಗಳೇ ಅಲ್ಲಾ ಅವುಗಳು ತಿಪ್ಪೆಗುಂಡಿಗಳಾಗಿವೆ. ಅಭಿವೃದ್ಧಿಯನ್ನೆ ಮುಂದಿಟ್ಟುಕೊಂಡು ಬಂದಿರುವ ನಗರ ಶಾಸಕರು ಈ ಕಡೆ ಗಮನಹರಿಸಬೇಕು. ಯಾವುದೇ ವಿಷಯವಿಟ್ಟುಕೊಂಡು ನಗರ ಶಾಸಕರು ಬಹಳ ಮಾತನಾಡುತ್ತಿದ್ದರು ಈಗ ಮಾತನಾಡುವುದೇ ಕಡಿಮೆ ಮಾಡಿದ್ದಾರೆ, ಏಕೆಂದರೆ ಅವರಿಂದು ರಸ್ತೆ ಮಾಡಲು ಆಗುವುದಿಲ್ಲಾ ಅಂತಾಗೊತ್ತಿದೆ. ಅವರಿಗೇನಾದರು ಮಾತನಾಡುವುದು ಇದ್ದರೆ ಕೆಲಸ ಮಾಡಿ ಮಾತನಾಡಲಿ”
-ಶ್ರೀನಾಥ ಪೂಜಾರಿ, ಬಿಎಸ್ಪಿ ಮುಖಂಡ.

ಇನ್ನು ಈ ರಸ್ತೆಗಳಿಗೆ ರಸ್ತೆಗಳೆನ್ನುವದಕ್ಕಿಂತಲೂ ಗುಂಡಿಗಳ ರಸ್ತೆ ಎಂದರೆ ಸರಿಹೋಗುತ್ತದೆ. ಈ ರಸ್ತೆಗಳಲ್ಲಿ ದಿನಂಪ್ರತಿ ಸಂಚರಿಸುವ ವಾಹನಸವಾರರು ತಮ್ಮ ಜೀವ ಕೈಯಲ್ಲಿಹಿಡಿದುಕೊಂಡು ಸಂಚರಿಸುವಂತಾಗಿದೆ. ಇನ್ನು ಇದೆ ರಸ್ತಗಳ ಮೂಲಕವು ದಿನಂ ಪ್ರತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಚರಿಸುತ್ತಿದ್ದರು ರಸ್ತೆಗಳಲ್ಲಿನ ಗುಂಡಿಗಳು ಕಂಡು ಕಾಣದಂತೆ ಜಾಣಕುರುಡರಂತೆ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.

ರಸ್ತೆಗಳಲ್ಲಿನ ಗುಂಡಿಗಳಿಂದ ಬೇಸತ್ತಿರುವ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿದ್ದಾರೆ. ಈಗಲಾದರು ಅಧಿಕಾರಿಗಲು ಎಚ್ಚೆತ್ತು ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕಿದೆ.

– ಸಮೀವುಲ್ಲಾ ಉಸ್ತಾದ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.