ಮಳೆ, ಪ್ರವಾಹ, ಹಾನಿ: ಸಮಗ್ರ ಮಾಹಿತಿಗೆ ಡಿಸಿ ಸೂಚನೆ

0

Gummata Nagari : Yadgiri News

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಹಾನಿಯ ಹಾಗೂ ಹಾನಿ ನಿರ್ವಹಣೆಗೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮನೆ ಹಾನಿ, ಜೀವಹಾನಿಗೆ ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತರಾಜ್ ಇಂಜಿನೀಯರಿಂಗ್ ವಿಭಾಗದ ಕಾಮಗಾರಿಗಳಿಗೆ ಹಾನಿ ಸಂಭವಿಸಿದ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಅಂದಾಜು 2163.82 ಹೆಕ್ಟೇರ್ ಹಾಗೂ ಪ್ರವಾಹದಿಂದ ಅಂದಾಜು 307 ಹೆಕ್ಟೇರ್ ಸೇರಿ ಅಂದಾಜು ಒಟ್ಟು 2470.82 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಒಟ್ಟು 609 ಮನೆಗಳು ಹಾನಿಯಾಗಿದ್ದು, ಇದರಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 237, ಶಹಾಪುರ ತಾಲ್ಲೂಕಿನಲ್ಲಿ 27, ಗುರುಮಠಕಲ್‌ನಲ್ಲಿ 23, ವಡಗೇರಾದಲ್ಲಿ 44, ಹುಣಸಗಿಯಲ್ಲಿ 253 ಮನೆಗಳು ಹಾನಿಯಾಗಿವೆ. ಸುರಪುರ ತಾಲ್ಲೂಕಿನಲ್ಲಿ 25 ಕುರಿಗಳು ಸಾವನಪ್ಪಿವೆ ಎಂದು ಸಹಾಯಕ ಆಯುಕ್ತರಾದ ಶಂಕರಗೌಡ ಎಸ್ ಸೋಮನಾಳ ಅವರು ಮಾಹಿತಿ ನೀಡಿದರು.

ಗುರುಸಣಗಿ ಬ್ರೀಜ್ ಕಮ್ ಬ್ಯಾರೆಜ್‌ನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಮೀರಿ ಬ್ಯಾರೇಜ್‌ನ ಹಿನ್ನೀರು ಹೆಚ್ಚಾಗಿ ನಾಯ್ಕಲ್ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಸುತ್ತ-ಮುತ್ತಲಿನ ಕೃಷಿ ಭೂಮಿ ಮುಳುಗಡೆಯಾಗಿ ಬೆಳೆ ಹಾನಿಯಾಗಿರುವ ಕುರಿತು ಕೃಷಿ ಅಧಿಕಾರಿಗಳು ಅತಿ ಶೀಘ್ರದಲ್ಲೇ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಸನ್ನತಿ ಬ್ರೀಜ್ ಕಮ್ ಬ್ಯಾರೇಜ್ ಭರ್ತಿಯಾಗಿದ್ದು, ಹುರಸಗುಂಡಗಿ ಗ್ರಾಮದ ನೀರು ನುಗ್ಗಿದ ಮನೆಗಳ ಕುಟುಂಬಗಳನ್ನು ಸ್ಥಳಾಂತರಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾದಂತೆ ಬ್ಯಾರೇಜ್‌ನ ಹಿನ್ನಲೇಯ ಪ್ರದೇಶವು ಜಲಾವೃತ್ತವಾಗಿ ಮುಳುಗಡೆಯಾಗುವ ಸಂಭವವಿದೆ. ಹೀಗಾಗಿ ಇಂಜಿನೀಯರರು ಪರಸ್ಥಿತಿಯನ್ನು ಅರಿತು ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬ್ರೀಜ್ ಕಮ್ ಬ್ಯಾರೇಜ್‌ಗೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೃಷ್ಣಾ ನದಿಗೆ ಸುಮಾರು 2.5ಲಕ್ಷ ಕ್ಯೂಸೇಕ್ ನೀರು ಹರಿದು ಬಂದರೆ ಕೋಳ್ಳೂರು ಬ್ರೀಜ್ ಮುಳುಗಡೆಯಾಗುತ್ತದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ತಿಳಿಸಿದರು.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಮಾಹಿತಿ ಇದ್ದು, ಅಂತಹ ಮನೆಗಳ ಜನರನ್ನು ಗಂಜಿ ಕೇಂದ್ರ ಹಾಗೂ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿ, ಪರಿಹಾರ ಧನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಹಾನಿಯಾಗಿದ್ದು, ಅವುಗಳನ್ನು ಶೀಘ್ರವಾಗಿ ದುರಸ್ತಿ ಕಾರ್ಯ ಚುರುಕುಗೊಳಿಸಿ, ಹಾನಿಯ ಸಂಭವಿಸಿದ ಕುರಿತು ಅಂದಾಜು ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್. ಸೋಮನಾಳ, ಲೋಕೋಪಯೋಗಿ ಕಾರ್ಯಪಾಲಕ ಇಂಜಿನೀಯರ್ ದೇವಿದಾಸ ಚವ್ಹಾಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನೀಯರ್ ಶಂಕರ ರುಬಿಕರ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.