ಶೌಚಾಲಯ ಸ್ವಚ್ಛಗೊಳಿಸಿದ ಜಿ.ಪಂ ಅಧ್ಯಕ್ಷೆ

0

Gummata Nagari : Bijapur News

ಮುದ್ದೇಬಿಹಾಳ : ಬಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಶೌಚಾಲಯಗಳನ್ನು ಶುಕ್ರವಾರ ಖುದ್ದು ತಾವೇ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಮಹತ್ವದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕಾಳಗಿ ಆಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಅವರು ಬೆಳಿಗ್ಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕಾಳಗಿ ಗ್ರಾಮ ಪಂಚಾಯಿತಿ ಸಂಯುಕ್ತವಾಗಿ ಆಯೋಜಿಸಿದ್ದ ಮಹಾತ್ಮಾ ಗಾಂಧೀ ಜಯಂತಿ ನಿಮಿತ್ತ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಸಬರಿಗೆ, ಬ್ರಶ್, ಶೌಚಾಲಯ ತೊಳೆಯುವ ಸಾಧನಗಳನ್ನು ಕೈಯಲ್ಲಿ ಹಿಡಿದು ಶೌಚಾಲಯ ಸ್ವಚ್ಛತೆಗೆ ಮುಂದಾದರು ಅಲ್ಲಿದ್ದ ಇತರೆ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಅವರನ್ನು ಅನುಕರಿಸಿದರು. ಇದಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಯೂ ಸೇರಿ ಗ್ರಾಮದ ವಿವಿಧೆಡೆ ಯುವಕರ ತಂಡ ಸ್ವಚ್ಛತಾ ಕಾರ್ಯ ನಡೆಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಜಾತಾ ಅವರು, ಮಹಾತ್ಮಾ ಗಾಂಧೀಜಿ ಅವರ ಕನಸು ಸ್ಚಚ್ಛ ಭಾರತ, ಸ್ವಚ್ಛ ಗ್ರಾಮ. ನಾಗರಿಕರು ಗಾಂಧೀಜಿಯವರ ಕನಸಿನ ಮಹತ್ವ ಅರಿತುಕೊಂಡರೆ ಆರೋಗ್ಯವಂತ ಬದುಕು ನಡೆಸಬಹುದು. ಮೊದಲು ನಾವು ನಮ್ಮ ಮನೆ ಸುತ್ತಲಿನ ವಾತಾವರಣ ಸ್ವಚ್ಛಗೊಳಿಸಬೇಕು. ಅಂದಾಗ ಮಾತ್ರ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯವಿದೆ ಎಂದರು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಕೊರೊನಾ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ನಿಯಂತ್ರಣ ಕ್ರಮ ಕೈಕೊಳ್ಳಲಾಗಿದೆ. ಸ್ವಚ್ಛತೆ ಪಾಲಿಸಲು ಗ್ರಾಪಂಗಳ ಪಿಡಿಓಗಳಿಗೂ ಸೂಚನೆ ಕೊಡಲಾಗುತ್ತಿದೆ. ನಿರ್ಲಕ್ಷ್ಯ ತೋರುವ ಹಾಗೂ ಆರೋಪಗಳು ಕೇಳಿಬಂದ ಪಿಡಿಓಗಳ ಮೇಲೆ ಕ್ರಮ ಕೈಕೊಳ್ಳಲಾಗುತ್ತದೆ ಎಂದರು.

ಜಿಪಂ ಸದಸ್ಯೆಯರಾದ ಪ್ರೇಮಬಾಯಿ ಚವ್ಹಾಣ, ಪದ್ಮಾವತಿ ವಾಲಿಕಾರ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ, ತಾಪಂ ಇಓ ಶಶಿಧರ ಶಿವಪುರೆ, ಕಾಂಗ್ರೆಸ್ ಧುರೀಣರಾದ ಸೋಮನಾಥ ಕಳ್ಳಿಮನಿ, ಸಂತೋಷ ರಾಠೋಡ, ಜಾವೀದ ಜಮಾದಾರ, ಮುತ್ತಣ್ಣ ಮುತ್ತಣ್ಣವರ್, ನಾಗರಾಜ ತಂಗಡಗಿ, ಲಕ್ಷ್ಮಣ ಲಮಾಣಿ, ಸ್ಥಳೀಯ ಧುರೀಣರು, ಯುವಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೆ ಎಲ್ಲರೂ ಸ್ವಚ್ಛ ಭಾರತ ಮಹತ್ವ ಸಾರುವ ಬಿಳಿ ಬಣ್ಣದ ಟೀಶರ್ಟ್, ಕ್ಯಾಪ್ ಧರಿಸಿ ಗಮನಸೆಳೆದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.