ಸೆ.19ರಂದು ಮಹಿಳಾ ವಿವಿ ಘಟಿಕೋತ್ಸವ

0

Gummata Nagari : Bijapur News

ಬಿಜಾಪುರ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 11ನೇ ಘಟಿಕೋತ್ಸವವು ಇದೇ ಸೆಪ್ಟೆಂಬರ್ 19ರಂದು ನಡೆಯಲಿದೆ’ ಎಂದು ವಿವಿಯ ಪ್ರಭಾರ ಕುಲಪತಿ ಪ್ರೊ.ಓಂಕಾರ ಕಾಕಡೆ ಹೇಳಿದರು.

ನಗರದ ಅಕ್ಕಮಹಾದೇವಿ ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿAದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19 ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನಶಕ್ತಿ ಆವರಣದ ಆಡಳಿತ ಭವನದ ಎದುರುಗಡೆ ನಿರ್ಮಿಸಿರುವ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದ್ದು, ‘ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ನವದೆಹಲಿಯ ವಿಶ್ವವಿದ್ಯಾಲಯ ಅನುದಾನ ಆಯೋಗ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಅವರು ಆನ್‌ಲೈನ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಮಹಿಳಾ ವಿವಿಯಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 67 ವಿದ್ಯಾರ್ಥಿಗಳಿಗೆ 70 ಚಿನ್ನದ ಪದಕ ಹಾಗೂ ನಗದು ಬಹುಮಾನ ಮತ್ತು ಒಟ್ಟು 55 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿಯನ್ನು ಈ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ’ ಎಂದರು.

‘ಈ ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು 9,371 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದು, ಅದರಲ್ಲಿ ಒಟ್ಟು 1087 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಎಂ.ಎ.- 415, ಎಂ.ಕಾಂ.- 271, ಎಂ.ಬಿ.ಎ.- 45, ಎಂ.ಎಸ್.ಸಿ.- 241, ಎಂ.ಈಡಿ- 8, ಎಂ.ಪಿ.ಈಡಿ- 11, ಎಂ.ಎಲ್.ಆಯ್.ಎಸ್‌ಸಿ.- 23, ಎಂ.ಎಸ್.ಡಬ್ಲ್ಯೂ- 47 ಮತ್ತು ಎಂ.ಸಿ.ಎ.- 16 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗೆ ಅರ್ಹರಾಗಿದ್ದಾರೆ’ ಎಂದು ತಿಳಿಸಿದರು.

‘ಅದರಂತೆ, ಪಿ.ಜಿ.ಡಿಪ್ಲೋಮಾ ಕೋರ್ಸುಗಳಾದ ಯೋಗ ಅಧ್ಯಯನದಲ್ಲಿ 10, ಡಿ.ಎಫ್.ಎಂ.ನಲ್ಲಿ 23 ಹೀಗೆ ಒಟ್ಟು 54 ವಿದ್ಯಾರ್ಥಿನಿಯರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಜೊತೆಗೆ ಒಟ್ಟು 8230 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲಿದ್ದು ಈ ಪೈಕಿ ಬಿ.ಎ.- 3738, ಬಿ.ಎಸ್.ಡಬ್ಲ್ಯೂ- 40, ಬಿ.ಕಾಂ- 3040, ಬಿಬಿಎ- 158, ಬಿ.ಎಸ್.ಸಿ- 1133, ಬಿ.ಎಚ್.ಎಸ್.ಸಿ- 9, ಬಿ.ಸಿ.ಎ- 79 ಮತ್ತು ಬಿ.ಎಫ್.ಟಿ- 24 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿದ್ದಾರೆ’ ಎಂದರು.

‘ಘಟಿಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಲು ಈಗಾಗಲೇ ಹಲವಾರು ಸಮಿತಿಗಳನ್ನು ರಚಿಸಲಾಗಿದೆ, ಭರದಿಂದ ಸಿದ್ಧತೆಗಳು ನಡೆದಿವೆ’ ಎಂದು ತಿಳಿಸಿದ ಅವರು, ‘ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಘಟಿಕೋತ್ಸವದಲ್ಲಿ ಕೇವಲ ಚಿನ್ನದ ಪದಕ ಪಡೆದಿರುವ ವಿದ್ಯಾರ್ಥಿನಿಯರು ಹಾಗೂ ಪಿಎಚ್‌ಡಿ ಪದವೀಧರರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಆನ್‌ಲೈನ್ ಮೂಲಕವೇ ಘಟಿಕೋತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಈ ಘಟಿಕೋತ್ಸವವನ್ನು ಅಕ್ಕ ಟಿವಿ ಯುಟ್ಯೂಬ್ ನ್ಯೂಸ್‌ಚಾನೆಲ್ ಲಿಂಕ್ ಮೂಲಕ ಮತ್ತು ಕೆಎಸ್‌ಡಬ್ಲ್ಯೂಯು ಮೀಡಿಯಾಸೆಲ್ ಫೇಸ್‌ಬುಕ್ ಲೈವ್ ಮೂಲಕ ವೀಕ್ಷಿಸಲುಅವಕಾಶವಿದೆ’ ಎಂದರು.

‘ವಿದ್ಯಾರ್ಥಿನಿಯರು ಸಾಮಾಜಿಕ ಅಂತರಕಾಪಾಡಲು ಎರಡು ಉಪ ವೇದಿಕೆಗಳನ್ನು ರಚಿಸಲಾಗಿದ್ದು, ಪದಕ/ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲು ಮಾತ್ರ ವಿದ್ಯಾರ್ಥಿನಿಯರು ಘಟಿಕೋತ್ಸವದ ಮುಖ್ಯ ವೇದಿಕೆಗೆ ಆಗಮಿಸಿ ಪದಕ/ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸುತ್ತಾರೆ’ ಎಂದರು.

‘ಅದರಂತೆ, ಆಹ್ವಾನಿತರು ಮತ್ತು ವಿದ್ಯಾರ್ಥಿನಿಯರಿಗೆ ಆವರಣ ಪ್ರವೇಶ ಮಾಡುವ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಸಭೆ ಮುಗಿಯವವರೆಗೆ ಮಾಸ್ಕ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ’ ಎಂದರು. ‘ಘಟಿಕೋತ್ಸವದ ದಿನ ಇಡೀ ಆಡಳಿತ ಭವನ, ಮುಖ್ಯ ವೇದಿಕೆ ಹಾಗೂ ಉಪ ವೇದಿಕೆಗಳನ್ನು ಡಿಸ್‌ಇನ್ಪೆಕ್ಷನ್ ಮಾಡಿ ಶುಚಿಗೊಳಿಸಲಾಗುತ್ತದೆ. ಅಲ್ಲದೇ ಸೆನಿಟೈಸರ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದಕ್ಕಾಗಿ ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಆರೋಗ್ಯ ಕಾಳಜಿಗಾಗಿ ಅಗತ್ಯ ಕ್ರಮಗಳನ್ನು ಕೈಕೊಳ್ಳಲು ಸಂಬಂಧಪಟ್ಟ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಘಟಿಕೋತ್ಸವ ಸಂದರ್ಭದಲ್ಲಿ ಮೊಬೈಲ್ ಫೋನ್, ವಿಡಿಯೋಕ್ಯಾಮೆರಾ, ಸ್ಟಿಲ್ ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ’ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ಘಟಿಕೋತ್ಸವದ ಸಂಯೋಜನಾಧಿಕಾರಿ ಪ್ರೊ.ಡಿ.ಎಂ.ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.