ಮಹಿಳಾ ವಸ್ತು ಸಂಗ್ರಹಾಲಯ ಕಾರ್ಯಾರಂಭ ಶೀಘ್ರ

ಅಕ್ಕಮಹಾದೇವಿ ಮಹಿಳಾ ವಿವಿ ಹಂಗಾಮಿ ಕುಲಪತಿ ಪ್ರೊ.ಓಂಕಾರ ಕಾಕಡೆ ಘೋಷಣೆ

0

Gummata Nagari : Bijapur News

ಬಿಜಾಪುರ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ಇಡೀ ದೇಶದಲ್ಲಿಯೇ ವಿಶಿಷ್ಟವಾಗಿರುವ ಮಹಿಳಾ ವಸ್ತುಸಂಗ್ರಹಾಲಯ ಕಾರ್ಯಾರಂಭ ಮಾಡಲಿದೆ ಎಂದು ಹಂಗಾಮಿ ಕುಲಪತಿ ಪ್ರೊ.ಓಂಕಾರ ಕಾಕಡೆ ಪ್ರಕಟಿಸಿದರು.

ಬಿಜಾಪುರದ ಜ್ಞಾನಶಕ್ತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ 11ನೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಸ್ತು ಸಂಗ್ರಹಾಲಯದ ರೂಪರೇಷೆಗಳ ನೀಲನಕ್ಷೆಯನ್ನು ತಜ್ಞರು ಸಿದ್ಧಪಡಿಸಿದ್ದಾರೆ. ಈ ಯೋಜನೆಯಲ್ಲಿ ಮಹಿಳೆಯರ ಜ್ಞಾನ, ಕೌಶಲ್ಯ ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಬಿಂಬಿಸುವ ರೀತಿಯಲ್ಲಿ ವಸ್ತುಸಂಗ್ರಹಾಲಯ ನಿರ್ಮಿಸುವುದು ವಿಶ್ವವಿದ್ಯಾನಿಲಯದ ಕನಸಾಗಿದೆ. ವಸ್ತು ಸಂಗ್ರಹಾಲಯದ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ವಿವರಿಸಿದರು.

ಹಳೆಯ ಕಟ್ಟಡಗಳ ದುರಸ್ತಿಕಾರ್ಯ ಹಾಗೂ ಪ್ರಯೋಗಾಲಯಗಳ ಉನ್ನತೀಕರಣಕ್ಕಾಗಿ ರೂಸಾ ಅನುದಾನವನ್ನು ಪಾರದರ್ಶಕವಾಗಿ ಬಳಸಿಕೊಳ್ಳಲಾಗಿದೆ. ಗ್ರಂಥಾಲಯ ಕಟ್ಟಡದ ವಿಸ್ತರಣಾ ಕಾಮಗಾರಿಯು ಮುಕ್ತಾಯಗೊಂಡಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿರುವುದರಿಂದ ಶೈಕ್ಷಣಿಕ ಆಡಳಿತಾತ್ಮಕ ಮತ್ತು ವಿದ್ಯಾರ್ಥಿನಿಯರ ದೃಷ್ಟಿಯಿಂದ ಅನುಕೂಲವಾಗಿದೆ. ಇದಕ್ಕೆ ಕಾರಣಕರ್ತರಾಗಿರುವ  ಹಿಂದಿನ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರ ಶ್ರಮ ಇಲ್ಲಿ ಸ್ಮರಣೀಯ ಎಂದು ಪ್ರೊ.ಕಾಕಡೆ ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆ ಈ ಸಭಾಂಗಣ ನಿರ್ಮಾಣಕ್ಕಾಗಿ 8 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅತ್ಯಂತ ಭವ್ಯ ಹಾಗೂ ಸುಸಜ್ಜಿತ ಬಹುಪಯೋಗಿ ಸಭಾಂಗಣಕ್ಕೆ ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಭಾ ಭವನ ಎಂದು ನಾಮಕರಣ ಮಾಡಲಾಗಿದೆ.

ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ರಸಾಯನ ಶಾಸ್ತ್ರ ವಿಭಾಗ, ಸಸ್ಯಶಾಸ್ತ್ರ ವಿಭಾಗ, ವಸತಿ ನಿಲಯ, ಹಿಂದಿ ಭವನ ಮುಂತಾದ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಸತಿ ನಿಲಯದಲ್ಲಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದೆ. ಮಂಡ್ಯ ವಿಸ್ತರಣಾ ಕೇಂದ್ರದ ಆಡಳಿತ ಕಟ್ಟಡವು 5 ಕೋಟಿ ರೂಪಾಯಿ ಅನುದಾನದಡಿಯಲ್ಲಿ ಪ್ರಗತಿಯಲ್ಲಿದೆ. ಸಿಂಧನೂರಿನಲ್ಲಿ ಆಡಳಿತ ಕಟ್ಟಡ ಕಾಮಗಾರಿಗಳನ್ನು 13 ಕೋಟಿ ಅಂದಾಜು ಮೊತ್ತದೊಂದಿಗೆ ಆರಂಭಿಸಲಾಗಿದೆ. ಕಾಮಗಾರಿಯು ಪ್ರಗತಿ ಹಂತದಲ್ಲಿದೆ ಎಂದರು.

ನಮ್ಮ ವಿಶ್ವವಿದ್ಯಾನಿಲಯವು ಈ ವರ್ಷವೂ ಪ್ರಸಾರಾಂಗದ ಮೂಲಕ ಪದವಿಯ ಐದು ಮತ್ತು ಆರನೆಯ ಸೆಮಿಸ್ಟರ್‌ಗೆ ಕನ್ನಡ ಮತ್ತು ಇಂಗ್ಲೀಷ್‌ನ ಒಟ್ಟು 12 ಭಾಷಾ ಪಠ್ಯಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪದವಿ ಭಾಷಾ ಕನ್ನಡ ಮತ್ತು ಇಂಗ್ಲೀಷ್ ಪಠ್ಯಪುಸ್ತಕ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಸ್ತುತ ಪದವಿಯ ಒಂದು ಮತ್ತು ಎರಡನೆ ಸೆಮಿಸ್ಟರ್ ಹಿಂದಿ ಭಾಷಾ ಪಠ್ಯಪುಸ್ತಕಗಳು ಪ್ರಕಟಗೊಂಡಿದ್ದು ಉಳಿದ ಸೆಮಿಸ್ಟರ್‌ನ ಪಠ್ಯಗಳು ಮುದ್ರಣ ಹಂತದಲ್ಲಿವೆ ಎಂದೂ ಅವರು ಹೇಳಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.