ಜಲಧಾರೆ ವಿಶೇಷ ಯೋಜನಾ ವರದಿ ಸಿದ್ಧ: ಸಿಇಒ ಗೋವಿಂದ ರೆಡ್ಡಿ

0

Gummata Nagari : Bijapur News

ಬಿಜಾಪುರ : ಜಿಲ್ಲೆಯ 1045 ಜನವಸತಿಗಳಿಗೆ ನೀರು ಪೂರೈಸುವ ಜಲಧಾರೆ ವಿಶೇಷ ಯೋಜನಾ ವರದಿ ಸಿದ್ಧಪಡಿಸಿದ್ದು, ಒಟ್ಟು 1859.76 ಕೋಟಿ ರೂ.ಗಳ ಯೋಜನಾ ವೆಚ್ಚದ ಈ ಯೋಜನೆ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಂದ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುತ್ತಿದೆ ಎಂದು ಸಿಇಒ ಗೋವಿಂದ ರೆಡ್ಡಿ ತಿಳಿಸಿದರು.

ಬಿಜಾಪುರ ಜಿ.ಪಂ.ನಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಹಾಗೂ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಅಭಿಪ್ರಾಯ ಸಂಗ್ರಹಣೆಗೆ ವಿಡಿಯೋ ಸಂವಾದ ನಡೆಸಿದ ಅವರು, ಈಗಾಗಲೇ ಈ ಯೋಜನೆಗೆ ಸಂಬಂಧಪಟ್ಟಂತೆ ಡಿಪಿಆರ್ ಸಿದ್ಧಗೊಂಡಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುವ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.

ಜಲಧಾರೆ ಯೋಜನೆಯಡಿ ವಿವಿಧ ಗ್ರಾಮಗಳು ಹಾಗೂ ನಿಗದಿತ ಪಟ್ಟಣಗಳ ವರೆಗೆ ನೀರು ಲಭ್ಯವಾಗಲಿದ್ದು, ವಿವಿಧ ಗ್ರಾಮಗಳಿಗೆ ಆಂತರಿಕವಾಗಿ ಮನೆಮನೆಗಳಿಗೆ ಜಲಜೀವನ ಮಿಷನ್ ಯೋಜನೆ ಅಡಿ ನಳಗಳ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದ ಜಲಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವ ದಿಸೆಯಲ್ಲಿ ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುವ ಗ್ರಾಮ, ಪಟ್ಟಣಗಳಿಗೆ ನಿರಂತರ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ ಇದಾಗಿದೆ. ಜಿಲ್ಲೆಯ 5 ತಾಲೂಕುಗಳಾದ ಇಂಡಿ, ಸಿಂದಗಿ, ಬ.ಬಾಗೇವಾಡಿ, ಬಿಜಾಪುರ ಹಾಗೂ ಮುದ್ದೇಬಿಹಾಳ ತಾಲೂಕುಗಳ 1045 ಜನ ವಸತಿ ಪ್ರದೇಶಗಳಿಗೆ ಮತ್ತು ಜಿಲ್ಲೆಯ 11 ನಗರ ಸ್ಥಳೀಯ ವ್ಯಾಪ್ತಿಯ ಪಟ್ಟಣಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯನ್ನು 2052ರ ಜನಸಂಖ್ಯೆ ಆಧಾರದ ಮುಂದಾಲೋಚನೆಯೊAದಿಗೆ ಜಾರಿಗೊಳಿಸಲಾಗುತ್ತಿದ್ದು, 2011ರ ಜನಗಣತಿಯನ್ವಯ 2022ರ ಅವಧಿಗೆ 17.77 ಲಕ್ಷ, 2037ರ ಅವಧಿಗೆ 20.59 ಲಕ್ಷ ಹಾಗೂ 2052 ರ ಅವಧಿಗೆ 23.42 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸುವ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.

2022ಕ್ಕೆ 1.58 ಟಿಎಂಸಿ, 2037 ಕ್ಕೆ 1.83 ಟಿಎಂಸಿ ಹಾಗೂ 2052ಕ್ಕೆ 2.08 ಟಿಎಂಸಿ ನೀರಿನ ಅವಶ್ಯಕತೆಯ ಬಗ್ಗೆ ಯೋಜನೆಯಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಮೇಲ್ ಜಲಸಂಗ್ರಹಗಾರಗಳಿಗೆ (ಓಎಚ್‌ಟಿ) ನೀರು ಪೂರೈಸುವ ಮತ್ತು ನೀರಿನ ಮಿತವ್ಯಯ ಹಾಗೂ ನಿರ್ವಹಣೆಗಾಗಿ ಸ್ಕಾಡಾ ತಾಂತ್ರಿಕತೆ ಅಳವಡಿಸುವದು ಒಳಗೊಂಡಿದೆ ಎಂದು ಯೋಜನೆಯ ಬಗ್ಗೆ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ ವಿಭಾಗದ ಅಧಿಕಾರಿಗಳು ಇವರು ಮಾಹಿತಿ ಒದಗಿಸಿದರು.

ವಿ.ಪ. ಸದಸ್ಯ ಅರುಣ ಶಹಾಪೂರ ಅವರು ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ವಲಸಿಗ ಸಮುದಾಯ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಹಾಗೂ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಅವರು ಅಧಿಕೃತ ಜನಸಂಖ್ಯೆ ಅಂಕಿಅಂಶ ಸಂಗ್ರಹಣೆಗೆ ಹಾಗೂ ಗ್ರ್ಯಾವಿಟಿ ಮೂಲಕ ನೀರು ಪೂರೈಕೆಯ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ ಅವರ ಗಮನಕ್ಕೆ ತಂದು ಸಮಗ್ರ ಸಾಧಕ ಬಾಧಕಗಳ ಬಗ್ಗೆ ಅಭಿಪ್ರಾಯ ಪಡೆಯುವಂತೆ ತಿಳಿಸಿ, ಯೋಜನೆ ಜಾರಿಗಾಗಿ ರೈತರ ಸಹಕಾರ, ಭೂಸ್ವಾಧೀನ ಪರಿಹಾರ ಮತ್ತು ಪೈಪ್‌ಲೈನ್ ಅಳವಡಿಸುವ ಸಂದರ್ಭದಲ್ಲಿ ಬರಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಭಾವಿಯಾಗಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.