ಢವಳಗಿ ಹೊಸ ಬಡಾವಣೆ ಮನೆಗಳಿಗೆ ನುಗ್ಗಿದ ನೀರು

ಹಳ್ಳದ ನೀರಿನಿಂದ ಕಿರು ಸೇತುವೆ ಜಲಾವೃತ: ಸಂಚಾರಕ್ಕೆ ಸಂಚಕಾರ

0

Gummata Nagari : Bijapur News

ಮುದ್ದೇಬಿಹಾಳ : ತಾಲೂಕಿನ ಢವಳಗಿ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಆಗಿದ್ದು ಢವಳಗಿ ಗ್ರಾಮದ ಹೊಸ ಬಡಾವಣೆಯ ಕೆಲ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಸರಕೋಡ-ಸಿದ್ದಾಪುರ ರಸ್ತೆ ಮೇಲಿರುವ ಕಿರು ಸೇತುವೆ ಹಳ್ಳದ ನೀರಿನಿಂದ ಜಲಾವೃತಗೊಂಡಿದ್ದು ಸಂಚಾರ ಸಮಸ್ಯೆ ತಲೆದೋರಿದೆ. ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 25-30 ಮನೆಗಳಿಗೆ ಹಾನಿಯಾಗಿದೆ ಎಂದು ಉಪತಹಶೀಲ್ದಾರ್ ಜಹಾಗಿರದಾರ ತಿಳಿಸಿದ್ದಾರೆ. ಹಲವು ಜಮೀನುಗಳಲ್ಲಿ ನೀರು ನಿಂತು ತೊಗರಿ, ಸಜ್ಜೆ ಸೇರಿ ಜಮೀನಿನಲ್ಲಿದ್ದ ಬೆಳೆಗಳು ಹಾನಿಯಾಗುವ ಆತಂಕ ತಲೆದೋರಿದೆ. ಹೋಬಳಿ ವ್ಯಾಪ್ತಿಯಲ್ಲಿ 82 ಮಿಲಿ ಮೀಟರ್ ಮಳೆ ಆಗಿದ್ದು ಇತ್ತೀಚಿನ ದಿನಗಳಲ್ಲಿಯೇ ಅತಿ ದೊಡ್ಡ ಮಳೆ ಇದಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಢವಳಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ಬಡಾವಣೆಯೊಂದರಲ್ಲಿ ಹೊಸದಾಗಿ ಸಿಸಿ ರಸ್ತೆ ಮಾಡಲಾಗಿದೆ. ಆದರೆ ರಸ್ತೆ ಎರಡೂ ಬದಿ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಮಳೆನೀರು ಮುಂದೆ ಹರಿದು ಹೋಗಲು ಅವಕಾಶ ಇಲ್ಲದ್ದರಿಂದ ಶಿವಪ್ಪ ಎರಿಕ್ಯಾಳ, ಶಿವಪ್ಪ ಕೊಣ್ಣೂರ, ನಿಂಗಪ್ಪ ಬಿರಗೊಂಡ, ಶಾಂತಪ್ಪ ಬಿರಗೊಂಡ, ಮಲ್ಲಪ್ಪ ಬಿರಗೊಂಡ ಇವರ ಮನೆಗಳಿಗೆ ಹಾಗೂ ಪಕ್ಕದಲ್ಲೇ ಇರುವ ಹಿಟ್ಟಿನ ಗಿರಣಿಗೂ ನೀರು ನುಗ್ಗಿದೆ. ಮಧ್ಯರಾತ್ರಿ ನಡೆದ ಈ ಘಟನೆಯಿಂದ ಕಂಗಾಲಾದ ಆ ಮನೆಯ ನಿವಾಸಿಗಳು ರಕ್ಷಣೆಗಾಗಿ ಸಾಕಷ್ಟು ಪರದಾಟ ನಡೆಸಿದರು. ಮನೆಯಲ್ಲಿ ಮಲಗಿದ್ದಾಗ ರಾತ್ರಿ ಎರಡು ಗಂಟೆ ಹೊತ್ತಿಗೆ ಏಕಾಏಕಿ ನೀರು ಮನೆಯೊಳಗೆ ಬಂದು ನಮಗೆ ದಿಕ್ಕು ತೋಚದಂತೆ ಮಾಡಿತ್ತು. ನಂತರ ಹೇಗೋ ಸುಧಾರಿಸಿಕೊಂಡು ಮನೆಯಲ್ಲಿದ್ದ ಅಗತ್ಯ ಸಾಮಗ್ರಿಗಳನ್ನು ಸುರಕ್ಷಿತವಾಗಿಡಲು ಹರಸಾಹಸ ಪಡಬೇಕಾಯಿತು ಎಂದು ಶಿವಪ್ಪ ಎರಿಕ್ಯಾಳ ಸುದ್ದಿಗಾರರ ಎದುರು ಅಳಲು ತೋಡಿಕೊಂಡರು.

ಏತನ್ಮಧ್ಯೆ ಬಸರಕೋಡದಿಂದ ಸಿದ್ದಾಪುರಕ್ಕೆ ಹೋಗುವ ರಸ್ತೆಯ ಮೇಲಿನ ಕಿರು ಸೇತುವೆಗೆ ಹಳ್ಳದ ನೀರು ರಭಸದಿಂದ ಹರಿದು ಬರುತ್ತಿರುವುದು ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಇದೇ ಹಳ್ಳದ ನೀರು ಅಕ್ಕಪಕ್ಕದಲ್ಲಿರುವ ಜಮೀನುಗಳಿಗೆ ನುಗ್ಗಿದ್ದು ಬೆಳೆ ಹಾನಿಯ ಆತಂಕ ಉಂಟಾಗಿದೆ. ಇಲ್ಲೇ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮಾಲೀಕತ್ವದ ಜಮೀನುಗಳು ಇದ್ದು ಶಾಸಕರು ಸೇತುವೆ ಮೇಲೆ ನೀರು ಬರದಂತೆ ಎತ್ತರಿಸಲು ಕ್ರಮ ಕೈಕೊಂಡು ಸುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಕ್ಕಪಕ್ಕದ ಜಮೀನುಗಳ ರೈತರು ಒತ್ತಾಯಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.