ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಭೂ-ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ

0

Gummata Nagari : Bijapur News

ಬಿಜಾಪುರ : ಭೂ-ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ದಾರಿ ಸಮಸ್ಯೆ ಇತ್ಯರ್ಥಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.

ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ನೂತನವಾಗಿ ಜಾರಿಗೊಳಿಸುತ್ತಿರುವ ಭೂ-ಸ್ವಾಧೀನ ಕಾಯ್ದೆ ಅತ್ಯಂತ ಅವೈಜ್ಞಾನಿಕ ಹಾಗೂ ರೈತ ವಿರೋಧಿ ನಿಲುವು ಹೊಂದಿದೆ. ಈ ಕಾಯ್ದೆಗೆ ಯಾವುದೇ ಕಾರಣಕ್ಕೂ ತಿದ್ದುಪಡಿ ತರಬಾರದು ಎಂದರು. ಇನ್ನು ರೈತರ ದಾರಿ ಸಮಸ್ಯೆ ಎನ್ನುವುದು ಸಾಧಾರಣವಾದ ಸಮಸ್ಯೆಯಲ್ಲ, ಇದೊಂದು ಗಂಭೀರವಾದ ಸಮಸ್ಯೆಯಾಗಿದೆ, ಈ ಕುರಿತಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಸೂಕ್ತ ವಹಿವಾಟು ದಾರಿ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಹಳ್ಳಿಗಳಲ್ಲಿ ವಹಿವಾಟು ದಾರಿಗಾಗಿ ರೈತರು ತಕರಾರು ತೆಗೆಯುತ್ತಿದ್ದಾರೆ. ನಕ್ಷೆಯಲ್ಲಿ ದಾರಿ ಗುರುತು ಇದ್ದರೆ ಮಾತ್ರ ಹಾಯ್ದು ಹೋಗಲು ಅವಕಾಶ ಕೊಡುತ್ತಾರೆ. ಇಲ್ಲದಿದ್ದರೆ ಅವಕಾಶ ಕೊಡುವುದಿಲ್ಲ. ರೈತರು ಬೆಳೆದ ಉತ್ಪನ್ನಗಳನ್ನು ತೆಗೆದುಕೊಂಡು ಬರಲು ಮತ್ತು ಉಳುಮೆ ಮಾಡಲು ದಾರಿ ಇಲ್ಲದೇ ವ್ಯವಸಾಯ ಮಾಡಲು ಆಗುತ್ತಿಲ್ಲ. ಇದರಿಂದ ಜಮೀನುಗಳು ಬೀಳು ಬೀಳುತ್ತಿವೆ.ಇಂತಹ ದಾರಿ ಸಮಸ್ಯೆಇರುವ ರೈತ ಕುಟುಂಬಗಳಿಗೆ ವ್ಯವಸಾಯ ಮಾಡದೇ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ ಎಂದರು.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಅಡಿಯಲ್ಲಿ ರಚಿತವಾಗಿರುವ ಕಾನೂನಿನಲ್ಲಿ ಕಂದಾಯ ಅಧಿಕಾರಿಗಳು ನಿರ್ವಹಿಸಬೇಕಾದ ಕೆಲಸಗಳು ಹಾಗೂ ಇತರೆ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಅಧಿನಿಯಮದ ಅಧ್ಯಾಯ 9ರಲ್ಲಿ ರೆವೆನ್ಯೂ ಮೋಜಣಿ ಕೋಡು ಮತ್ತು ಭೂ ಸಂಪದಗಳ ವಿಭಜನೆ ಕುರಿತು ವವರಣೆ ಇರುತ್ತದೆ. ಅಧ್ಯಾಯ 12 ರಲ್ಲಿ ಮೇರೆಗಳು ಮತ್ತು ಮೇರೆಯ ಗುರುತುಗಳ ವಿವರವಿದೆ, ಈ ಅಧ್ಯಾಯಗಳ ಅಡಿಯಲ್ಲಿ ಖಾಸಗಿ ಜಮೀನುಗಳಿಗೆ ರೈತರು ತಮ್ಮ ಉತ್ಪನ್ನಗಳನ್ನು ತೆಗೆದುಕೊಂಡು ಬರಲು ಮತ್ತು ಜಮೀನು ಉಳುಮೆ ಮಾಡಲು ರಸ್ತೆ ಸಂಪರ್ಕ ಕುರಿತು ತಕರಾರರು ಬಂದಲ್ಲಿ ಕಂದಾಯ ಇಲಾಖೆ ನಿರ್ವಹಿಸುವ ಪಾತ್ರದ ಕುರಿತು ಎಲ್ಲಿಯೂ ಉಲ್ಲೇಖ ಇರುವುದಿಲ್ಲ ಎಂದು ಸಮಸ್ಯೆಯನ್ನು ವಿವರಿಸಿದರು.

ರೈತ ಮುಖಂಡ ಸದಾಶಿವ ಬರಟಗಿ ಮಾತನಾಡಿ, ಈಗಿನ ಜಮೀನಿನ ಮಾರುಕಟ್ಟೆ ಮೌಲ್ಯ ವೃದ್ಧಿಯಾಗಿರುವುದರಿಂದ ಮತ್ತು ಜಮೀನುಗಳನ್ನು ನೀರಾವರಿಗೆ ಒಳಪಡಿಸಿ ರೈತರು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡ ನಂತರ ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿ ಉಳುಮೆ ಮಾಡುತ್ತಿದ್ದಾರೆ. ಆದ್ದರಿಂದ ಯಾವ ರೈತರು ತಮ್ಮ ಜಮೀನಿನಲ್ಲಿ ರಸ್ತೆ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪುತ್ತಿರುವುದಿಲ್ಲ. ಇದರಿಂದ ರಸ್ತೆಯ ಒಳಗಿರುವ ಜಮೀನುಗಳಿಗೆ ಹೋಗಲು ತೀವ್ರ ತೊಂದರೆ ಪಡುತ್ತಿದ್ದಾರೆ ಎಂದರು.

ರಾಜ್ಯಾದ್ಯಂತ ಜಮೀನುಗಳನ್ನು ಸರ್ವೆ ಮಾಡಿ ಹೊಸ ಪಹಣಿ ಪತ್ರಿಕೆ ವಿತರಿಸಬೇಕು. ರೈತರಿಗೆ ವಿರೋಧಿ ಹಾಗೂ ಮಾರಕವಾದ ಭೂ ಸುಧಾರಣೆ ಎಪಿಎಂಸಿ ಸುಘ್ರಿವಾಜ್ಞೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಚನ್ನಪ್ಪಗೌಡ ಪಾಟೀಲ, ಅಶೋಕ ಅಲ್ಲಾಪೂರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಸಿದ್ರಾಮ ಅಂಗಡಗೇರಿ, ಮುದ್ದುಗೌಡ ಪಾಟೀಲ, ಶಿವಶರಣಪ್ಪಗೌಡ ಪಾಟೀಲ, ಗುರು ಕೋಟ್ಯಾಳ, ಈರಣ್ಣ ದೇವರಗುಡಿ, ನಂದನಗೌಡ ಬಿರಾದಾರ, ಅರ್ಜುನ ಹಾವಗೊಂಡ, ಶಿವಪ್ಪ ಯರನಾಳ, ಶಿವಪ್ಪ ಮಂಗೊಂಡ, ಹೊನಕೇರೆಪ್ಪ ತೆಲಗಿ, ಲಕ್ಷ್ಮಣ ಸಿಂಧೋಳ, ರಮೇಶ ಶಿಂಧೋಳ, ಕಾಟೆಪ್ಪ ಶಿಂಧೋಳ, ಯಲ್ಲಪ್ಪ ಶಿಂಧೋಳ, ಜಂಬವ್ವ ಸಿಂಧೋಳ, ಲಕ್ಷ್ಮೀ ಶಿಂಧೋಳ, ಗುಂಡವ್ವ ಶಿಂಧೋಳ, ಬಾಬು ಕೋಡಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.