ಬಿಜಾಪುರ : ಸತ್ಯ ಮತ್ತು ಅಹಿಂಸೆಗಳು ಪರ್ವತದಷ್ಟೇ ಪುರಾತನವಾದದ್ದು, ಅಂತಹ ತತ್ವಗಳನ್ನು ಪಾಲಿಸಿದರೆ ಸೋಲಿಲ್ಲ ಎಂಬುವುದನ್ನು ಗಾಂಧೀಜಿಯವರು ಅರಿತಿದ್ದರು ಎಂದು ಧಾರವಾಡದ ನ್ಯಾಯವಾದಿ ಹಾಗು ಗಾಂಧಿವಾದಿ ಬಸವಪ್ರಭು ಹೊಸಕೇರಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ವಿವಿಯ ಜ್ಞಾನಶಕ್ತಿ ಆವರಣದಲ್ಲಿರುವ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಜರುಗಿದ ಗಾಂಧಿ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮ ಎಂಬುವುದನ್ನು ಮರೆತು ಬರೀ ಗಾಂಧಿ ಎಂಬುವುದನ್ನು ಪಾಲಿಸಿದರೆ ಅಂತಹವರು ನನ್ನ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂದು ಗಾಂಧೀಜಿ ತಮ್ಮ ಹಿಂಬಾಲಕರಿಗೆ ಕಿವಿ ಮಾತನ್ನು ಸದಾ ಹೇಳುತ್ತಿದ್ದರು. ಆದರೆ ಈಗಿನ ಕೆಲವರು ಗಾಂಧಿಯನ್ನು ತಿಳಿಯದೆಯೇ, ಅವರನ್ನು ಅರಿತುಕೊಳ್ಳದೆಯೇ ಅವರನ್ನು ವಿರೋಧಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ.
ಸಮಾಜದ ಎಲ್ಲ ಪ್ರಗತಿಯನ್ನು, ಎಲ್ಲ ಆಯಾಮಗಳು ಅಭಿವೃದ್ಧಿ ಹೊಂದಲಿ ಎಂಬುವುದೇ ಗಾಂಧಿ ಅವರ ಆಶಯವಾಗಿತ್ತು. ಮತ್ತು ಮಹಿಳೆಯರ ಕುರಿತು ಗಾಂಧಿಯ ಅಭಿಪ್ರಾಯ ಅತ್ಯಂತ ಕಾಳಜಿಯುತವಾಗಿತ್ತು. ಗಾಂಧೀಜಿ ದೃಷ್ಠಿಯಲ್ಲಿ ಮಹಿಳೆ ಇತರೇ ಪಂಡಿತರ ನಿಲುವಿಗಿಂತ ವಿಭಿನ್ನವಾಗಿದ್ದಳು. ಸ್ತ್ರೀಯರ ಹಕ್ಕು – ಬಾಧ್ಯತೆಗಳ ವಿಷಯದಲ್ಲಿ ನಾನು ಸ್ವಲ್ಪವೂ ಸೋಲಲಾರೆ, ಗಂಡು ಮತ್ತು ಹೆಣ್ಣು ಸಮಾನರು ಅದರಲ್ಲೂ ಪುರುಷರಿಗಿಂತ ಸ್ತ್ರಿ ಹೆಚ್ಚು ಎಂಬ ನಿಲುವು ಗಾಂಧೀಜಿಯವರದ್ದಾಗಿತ್ತು. ಏಕೆಂದರೆ ಪುರುಷರಿಗಿಂತ ಸ್ತಿçಯ ಜ್ಞಾನ, ಶಕ್ತಿ, ಮೌನ, ತಾಳ್ಮೆ, ಧೈರ್ಯ ಎಲ್ಲವೂ ಹೆಚ್ಚು ಸ್ತ್ರೀಯ ನೆರಳಿಲ್ಲದೇ ಪುರುಷ ಏನನ್ನೂ ಸಹ ಮಾಡಲಾರ ಎಂಬುದು ಗಾಂಧಿಯ ವಾದವಾಗಿತ್ತು ಎಂದರು.
ವಿವಿಯ ಕುಲಸಚಿವೆ ಪ್ರೊ. ಆರ್ ಸುನಂದಮ್ಮ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ನಾವು ನಿಜವಾಗಲೂ ಗಾಂಧಿ ತತ್ವಗಳನ್ನು ಪಾಲಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಗಾಂಧಿಯ ಕನಸಾದ ಹೆಣ್ಣು-ಪುರುಷರಿಗೆ ಸಮಾನ ಹೆಣ್ಣು ಪುರುಷ ಸಮಾನ ಹಕ್ಕು ಹೊಂದಿದವಳು ಎಂಬ ಮಾತು ಎಲ್ಲಿದೆ ಎಂಬ ಧ್ವನಿ ನಮ್ಮ ಅಂತರಾಳದಲ್ಲಿ ಹುಟ್ಟುತ್ತಿದೆ. ಭಾರತ ಶ್ರೇಷ್ಠ ಸಂಸ್ಕೃತಿಯ ಸಂಕೇತ ಅಂತಹ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆಯೇ ವಿನಹ: ಅದನ್ನು ವಿನಾಶಕ್ಕೆ ಧೂಡಿ ಇಡೀ ಜಗತ್ತೇ ನಮ್ಮನ್ನು ನೋಡಿ ನಗುವಂತೆ ಆಗಬಾರದು ಎಂದು ಹೇಳಿದರು.
ಕುಲಪತಿ ಡಾ.ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಜಿ.ತಡಸದ, ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ತಹಮೀನಾ ಕೋಲಾರ ಪಾಲ್ಗೊಂಡಿದ್ದರು.
ಎನ್.ಎಸ್.ಎಸ್,ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕಲಾವತಿ ಕಾಂಬಳೆ ನಿರೂಪಿಸಿದರು, ಎನ್.ಎಸ್.ಎಸ್. ಘಟಕದ ಸಂಯೋಜಕ ಪ್ರೊ. ನಾಮದೇವ ಗೌಡ ಸ್ವಾಗತಿಸಿದರು. ಎನ್.ಎಸ್.ಎಸ್. ಘಟಕದ ಕಾಯಕ್ರಮ ಅಧಿಕಾರಿ ಜನ್ನಿಫರ್ ಸೌಲಮ ವಂದಿಸಿದರು.
ಶ್ರಮದಾನ – ಕಾರ್ಮಿಕರಿಗೆ ಸನ್ಮಾನ
ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿಜಿ ಜಯಂತೋತ್ಸವ ಪ್ರಯುಕ್ತ ವಿಶ್ವವಿದ್ಯಾಲಯದ ಸಿಬ್ಬಂದಿ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ವಿಶ್ವವಿದ್ಯಾಲಯದ ಆವರಣವನ್ನು ಹಸಿರಾಗಿಸುವಲ್ಲಿ ನಿತ್ಯ ಶ್ರಮಿಸುವ ಉದ್ಯಾನವನ ಸಿಬ್ಬಂದಿಗಳಿಗೆ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಅವರ ಕಾರ್ಯಕ್ಕ ಧನ್ಯವಾದ ಅರ್ಪಿಸಲಾಯಿತು. ಉದ್ಯಾನವನದಲ್ಲಿ ಸೇವೆ ಸಲ್ಲಿಸುವ 24 ಸಿಬ್ಬಂದಿಗಳಿಗೆ ಸನ್ಮಾನಿಸಿ ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..