ಧಾರಾಕಾರ ಮಳೆ: ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

0

Gummata Nagari : Bijapur News

ದೇವರಹಿಪ್ಪರಗಿ : ವಾಯುಭಾರ ಕುಸಿತ, ಹವಾಮಾನ ವೈಪರಿತ್ಯದಿಂದ ಕಳೆದ ಹಲವಾರು ದಿನಗಳಿಂದ ಬಿಟ್ಟು ಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ಜೀವನವೆಲ್ಲ ಚಿಂತಾಜನಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ತೋಟದ ವಸತಿಗಳಲ್ಲಿರುವ ಕುಟುಂಬಗಳ ಪಾಡು ಹೇಳತೀರದಾಗಿದೆ. ಇತ್ತ ಊರಿಗೆ ಬರದಂತಾಗಿದ್ದು, ಜಮೀನುಗಳಲ್ಲಿ ಇದ್ದ ಮನೆಗಳೆಲ್ಲ ಸೋರುತ್ತಿದ್ದು, ಮಳೆನೀರಿಗೆ ನೆನೆದು, ನೆನದು ಗೋಡೆಗಳು ಬೀಳುವ ಆತಂಕದ ಕಾಮರ್ಮೋಡದಲ್ಲಿ ಬದುಕೆಲ್ಲ ದುಸ್ತರಗೊಂಡಂತಾಗಿದೆ. ಮಕ್ಕಳು ಮರಿಗಳೊಂದಿಗೆ ತೋಟದ ವಸತಿಗಳಲ್ಲಿಯೇ ಇರುವ ಜನರ ಜೀವನ ಚಿಂತಾಜನಕವಾಗಿದೆ. ರಾತ್ರಿಯೆಲ್ಲ ಜಪ ಮಾಡುತ್ತ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಧಾರಾಕಾರ ಮಳೆ - ಜನ ಜೀವನ ಸಂಪೂರ್ಣ ಅಸ್ತವ್ಯಸ್ತ - Gummata Nagari
ಧಾರಾಕಾರ ಮಳೆ – ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

ಸಮೀಪದ ಸಾತಿಹಾಳ ಗ್ರಾಮದ ಪಕ್ಕ ಹರಿಯುತ್ತಿರುವ ಡೋಣಿ ತುಂಬಿ ತುಳುಕುತ್ತಿದ್ದು, ರಸ್ತೆಯ ಮೇಲೆ ಎಲ್ಲೆ ಮೀರಿ ಹರಿಯುತ್ತಿದೆ. ಇದರಿಂದ ಸಂಚಾರಕ್ಕೂ ಸಂಚಕಾರ ಬಂದಿದ್ದು, ಅಪಾಯದ ಮಟ್ಟ ತಲುಪಿದೆ. ಮಂಗಳವಾರದ ಮಳೆಗೆ ಆಲಮಟ್ಟಿಯ ಇಬ್ಬರು ವ್ಯಕ್ತಿಗಳು ತೆರಳುತ್ತಿದ್ದ ದ್ವಿಚಕ್ರ ವಾಹನವೊಂದು ಡೋಣಿಯಲ್ಲಿ ಮುಳುಗಿದ್ದು, ಗ್ರಾಮಸ್ಥರ ಸಹಕಾರದಿಂದ ಪ್ರಾಣಾಪಾಯದಿಂದ ಪಾರಾಗಿರುವುದು ಉಕ್ಕಿ ಹರಿಯುತ್ತಿರುವದಕ್ಕೆ ಸಾಕ್ಷಿಯಾಗಿದೆ.

ಬಿಟ್ಟು ಬಿಡದ ಮುಸಲಧಾರೆ ಮುನಿಸಿಗೆ ಗ್ರಾಮೀಣ ಪ್ರದೇಶದ ಮನೆಯ ಮಾಳಿಗೆಗಳೆಲ್ಲ ಸೋರುತ್ತಿದ್ದು, ನೀರಿನಿಂದ ನೆನೆದು ಗೋಡೆಗಳೆಲ್ಲ ಬಿರುಕು ಬಿಟ್ಟು ಆತಂಕ ಸೃಷ್ಠಿಸಿವೆ. ಹೊಲಗದ್ದೆಗಳಲ್ಲಿ ನೀರು ನಿಂತು ಹಳದಿಯಾಗುತ್ತಿದ್ದು, ಈ ಸಲ ರೈತ ಸಂಕಷ್ಟಕ್ಕೆ ಸಿಲುಕುವ ಹಂತ ತಲುಪಿದ್ದಾನೆ. ರೈತರಿಗೆ ಆದಾಯದ ಮೂಲವಾಗಿರುವ ತೊಗರಿ ಬೆಳೆ ನೀರಲ್ಲಿ ನಿಂತು ಹಳದಿಯಾಗಿದ್ದು, ಹೈರಾಣಾಗಿಸಿದೆ. ಬಿತ್ತನೆ ಪ್ರದೇಶವೆಲ್ಲ ಕೆರೆಯಂತಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಜೊತೆಗೆ ತಂಪಾಗಿ ಬೀಸುತ್ತಿರುವ ಗಾಳಿಯಿಂದ ಜನರಲ್ಲಿ ರೋಗ ರುಜಿನುಗಳಿಗೆ ಅವ್ಹಾನ ನೀಡುವಂತಾಗಿದೆ. ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದು, ವೃದ್ಧರು, ಚಿಕ್ಕಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.