ಎರಡನೇ ದಿನಕ್ಕೆ ಕಾಲಿಟ್ಟ ತಳವಾರ ಸಮಾಜದ ಪ್ರತಿಭಟನೆ

0

Gummata Nagari : Bijapur News

ದೇವರಹಿಪ್ಪರಗಿ : ತಳವಾರ ಸಮಾಜದವರಿಗೆ ಎಸ್ಟಿ ಪ್ರಮಾಣ ಪತ್ರ ನೀಡಲು ಸರಕಾರ ಮೀನಮೇಷ ಎಣಿಸುತ್ತಿದೆ ಎಂದು ಆಗ್ರಹಿಸಿ ತಾಲೂಕು ತಳವಾರ ಸಮಾಜ ಸೇವಾ ಸಮಿತಿ ವತಿಯಿಂದ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಬುಧವಾರ ಎರಡನೇ ದಿನದ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿ ಧರಣಿಯಲ್ಲಿ ಪಾಲ್ಗೊಂಡಿವೆ. ಚಿಕ್ಕರೂಗಿಯ ತಳವಾರ ಸಮಾಜ ಬಾಂಧವರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಧರಣಿ ನೇತೃತ್ವ ವಹಿಸಿದ್ದ ತಳವಾರ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ರಾಜು ಮೆಟಗಾರ ಮಾತನಾಡಿ ಸ್ವಾತಂತ್ರ್ಯ ಸಿಕ್ಕು 72 ವರ್ಷಗಳಾದರೂ ಮೀಸಲಾತಿ ನೀಡುವಲ್ಲಿ ತಾರತಮ್ಯವಾಗುತ್ತಿದೆ. ಅದಕ್ಕಾಗಿ ರಾಜ್ಯದಲ್ಲಿರುವ ಲಕ್ಷಾಂತರ ತಳವಾರ ಸಮಾಜ ಬಂಧುಗಳಿಗೆ ಅನ್ಯಾಯವಾಗಿದೆ. ಸರಕಾರ ನಮ್ಮ ಮನವಿಗೆ ಸ್ಪಂದಿಸಿ ತಳವಾರ ಸಮಾಜದವರನ್ನು ಎಸ್ಟಿ ವರ್ಗಕ್ಕೆ ಸೇರಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಯುವ ಮುಖಂಡ ಸಾಯಬಣ್ಣ ಬಾಗೇವಾಡಿ, ಕೇಂದ್ರ ಸರಕಾರ ತಳವಾರ ಸಮೂದಾಯದವರಿಗೆ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದರೂ, ಇಲ್ಲಿನ ರಾಜಕೀಯ ಕುತಂತ್ರದಿಂದ ತಳವಾರ ಸಮಾಜದವರಿಗೆ ಪ್ರಮಾಣ ಪತ್ರ ಸಿಗುತ್ತಿಲ್ಲ. ಯಾವುದೇ ಕಾರಣಕ್ಕೂ ಹೋರಾಟ ಮಾಡಿಯಾದರೂ ಪ್ರಮಾಣ ಪತ್ರ ಪಡೆಯುತ್ತೇವೆ ಎಂದರು.

ಧರಣಿ ಸ್ಥಳಕ್ಕೆ ಮಾಜಿ ಶಾಸಕ, ತಳವಾರ ಸಮಾಜ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಶರಣಪ್ಪ ಸುಣಗಾರ, ಹಿರಿಯ ಮುಖಂಡರಾದ ಶರಣಪ್ಪ ಕಣಮೇಶ್ವರ ಸೇರಿದಂತೆ ಮತ್ತೀತರರು ಭೇಟಿ ನೀಡಿದರು.

ಧರಣಿಯಲ್ಲಿ ಕಾಶೀನಾಥ ಜಮಾದಾರ, ಅರವಿಂದ ನಾಯ್ಕೋಡಿ, ಆಕಾಶ ಬೂದಿಹಾಳ, ಲಕ್ಷö್ಮಣ ಅಸ್ಕಿ, ಶಂಕರ ಜಮಾದಾರ, ರಾಜಶೇಖರ ಮಣೂರ, ಅರ್ಜುನ ಶೇಬೇನ್ನವರ, ಬಸವರಾಜ ಮೆಟಗಾರ, ಶಿವಶಂಕರ ಗಿಡಕಾರ, ರಾವುತಪ್ಪ ಮೆಟಗಾರ, ಈಶು ನಾಟೀಕಾರ, ರಮೇಶ ಬಾಣಕರ, ಅಣ್ಣಪ್ಪ ತಳವಾರ, ರಾವುತಪ್ಪ ನಾಟೀಕಾರ ಸೇರಿದಂತೆ ವಿವಿಧ ಗ್ರಾಮಗಳ ತಳವಾರ ಬಂಧುಗಳು ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.