ಸಮರ್ಥವಾಗಿ ಕೊರೊನಾ ನಿಭಾಯಿಸದ ರಾಜ್ಯ ಸರಕಾರ

ಹೇಳಿಕೆಯಲ್ಲಿಯೇ ಕಾಲಹರಣ ಮಾಡುತ್ತಿರುವ ಉಸ್ತುವಾರಿ ಸಚಿವರು: ಆರ್. ಧೃವನಾರಾಯಣ್ ಆಕ್ರೋಶ

0

ರಾಜ್ಯ ಸರ್ಕಾರ ದಿವಾಳಿ
ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹಾಗೂ ಕೇಂದ್ರದಲ್ಲಿಯೂ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಹಣ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿ ಸಾಲ ಬೇಕಾದರೆ ತೆಗೆದುಕೊಳ್ಳಿ ಎನ್ನುತ್ತಿದ್ದೆ. ರಾಜ್ಯದ ಪಾಲಿನ ನ್ಯಾಯಯುತವಾಗಿ ಬರಬೇಕಾದ ಹಣ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ನಿಸ್ಸಾಹಯಕವಾಗಿದ್ದು, ಜಿಎಸ್ಟಿ ಹಣವನ್ನು ಸಾಲದ ರೂಪದಲ್ಲಿ ಪಡೆದು ಬಡ್ಡಿ ಕಟ್ಟಿ ಪ್ರತಿಯೊಬ್ಬ ನಾಗರಿಕರ ಮೇಲೆ ಸಾಲದ ಹೊರೆ ಹೊರೆಸುವ ಕೆಟ್ಟ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿಸಿರುವುದು ನೋವಿನ ಸಂಗತಿ.
-ಆರ್. ಧೃವನಾರಾಯಣ್

Gummata Nagari : Bijapur News

ಬಿಜಾಪುರ : ಕೇರಳ ರಾಜ್ಯದಲ್ಲಿ ಒಬ್ಬರೇ ಆರೋಗ್ಯ ಸಚಿವರಿದ್ದರೂ ಸಮರ್ಥವಾಗಿ ಕೊರೊನಾ ನಿಯಂತ್ರಣ ಕಾರ್ಯ ನಡೆದಿದೆ. ನಮ್ಮ ರಾಜ್ಯದಲ್ಲಿ ಕೊರೊನಾ ನಿರ್ವಹಣೆಗಾಗಿಯೇ ಐದಾರು ಜನ ಸಚಿವರು ಉಸ್ತುವಾರಿ ಇದ್ದರೂ ಸಹ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ ಎಂದು ಆರೋಗ್ಯ ಹಸ್ತ ನಿರ್ವಹಣಾ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧೃವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆರೋಗ್ಯ ಹಸ್ತ ಯೋಜನೆಯ ಕುರಿತು ಪ್ರಗತಿಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಅವರು, ಕೊರೊನಾ ಪರಿಸ್ಥಿತಿ ನಿರ್ವಹಣೆಯ ಬದಲು ಈ ಎಲ್ಲ ಉಸ್ತುವಾರಿ ಸಚಿವರು ಹೇಳಿಕೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಆರೋಗ್ಯ ಸಚಿವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ, ಕೋವಿಡ್ ವಿಷಯವಾಗಿ ಹೇಳಿಕೆ ನೀಡಲು ಸಹ ಅವರಿಗೆ ಬಿಡಲಿಲ್ಲ, ಕೋವಿಡ್ ಪರಿಸ್ಥಿತಿಗಾಗಿ ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ, ಕಂದಾಯ ಹೀಗೆ ಅನೇಕ ಸಚಿವರ ಉಸ್ತುವಾರಿ ಸಚಿವರನ್ನು ನಿಯೋಜಿಸಲಾಗಿದೆ, ಕೇರಳದಲ್ಲಿ ಒಬ್ಬರೇ ಆರೋಗ್ಯ ಸಚಿವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

ಜೊತೆಗೆ “ನಮ್ಮಲ್ಲಿ ಅನೇಕ ಉಸ್ತುವಾರಿ ಸಚಿವರಿದ್ದರೂ ಸಹ ಕೊರೊನಾ ಪರಿಸ್ಥಿತಿ ನಿರ್ವಹಣೆಯಾಗಿಲ್ಲ, ಇಂದಿಗೂ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಇದೆ, ಸಾವಿನ ಪ್ರಮಾಣವೂ ಅಧಿಕವಾಗಿದೆ ಎಂದರು. ಕೇವಲ ಈ ಎಲ್ಲ ಕೋವಿಡ್ ಉಸ್ತುವಾರಿ ಸಚಿವರು ಹೇಳಿಕೆ ನೀಡುವುದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಹೊರತು ನಿರ್ವಹಣೆಗೆ ಆಸಕ್ತಿ ವಹಿಸುತ್ತಿಲ್ಲ, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

8500 ಆರೋಗ್ಯ ಹಸ್ತ ಕಿಟ್ ವಿತರಣೆ
ಕಾಂಗ್ರೆಸ್ ಪಕ್ಷ ಆರೋಗ್ಯ ರಕ್ಷಣೆಗಾಗಿ ಮನೆ-ಮನೆಗೆ ಹೋಗುತ್ತಿರುವುದು ಜನತೆಯಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕೆಲಸವನ್ನು ಕಾಂಗ್ರೆಸ್ ಪಕ್ಷ ಕೈಗೊಳ್ಳುತ್ತಿದೆ. 7,800 ಪ್ರದೇಶಗಳಲ್ಲಿ ಆರೋಗ್ಯ ಹಸ್ತ ಅಭಿಯಾನ ನಡೆಯುತ್ತಿದ್ದು, ನುರಿತ ಕಾರ್ಯಕರ್ತರಿಗೆ 8500 ಆರೋಗ್ಯ ಹಸ್ತ ಕಿಟ್‌ಗಳನ್ನು ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್, ಎನ್-95 ಮಾಸ್ಕ್ ಹಾಗೂ ಗೌನ್, ಫೇಸ್ ಶೀಲ್ಡ್ ಮಾಸ್ಕ್ ಮೊದಲಾದ ಪರಿಕರಗಳು ಕಿಟ್‌ನಲ್ಲಿ ಒಳಗೊಂಡಿವೆ ಎಂದರು.

ಕಾರ್ಯಕರ್ತರಿಗೆ ತರಬೇತಿ ನೀಡಿ ಕೊರೊನಾ ವಾರಿಯರ್ಸ್ಗಳನ್ನಾಗಿ ರೂಪಿಸಿ ಮನೆ-ಮನೆಗೆ ಹೋಗಿ ಆರೋಗ್ಯ ತಪಾಸಣೆ ಹಾಗೂ ಕೊರೊನಾ ರೋಗ ಬಾರದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ವಿವರಿಸಲು ಹಾಗೂ ಆರೋಗ್ಯ ತಪಾಸಣೆಗಾಗಿ 15 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ವಾರಿಯರ್ಸ್ ಆಗಿ ತೊಡಗಿಸಿಕೊಂಡಿದ್ದು, ಪ್ರತಿಯೊಬ್ಬರಿಗೂ 1 ಲಕ್ಷ ರೂ. ಗ್ರುಪ್ ಇನ್ಸೂರೆನ್ಸ್ ನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಎರಡನೇಯ ಸ್ಥಾನಕ್ಕೆ ತಲುಪಿರುವುದು ನೋವಿನ ಸಂಗತಿ, ಅದೇ ತೆರನಾಗಿ ಸೋಂಕಿತರ ಸಂಖ್ಯೆ ಇದೇ ರೀತಿಯಾಗಿ ಮುಂದುವರೆದರೆ 15 ದಿನಗಳಲ್ಲಿಯೇ ವಿಶ್ವದಲ್ಲಿಯೇ ಅತೀ ಹೆಚ್ಚು ಸೋಂಕಿತರ ಸಂಖ್ಯೆ ಭಾರತದಲ್ಲಿ ಇರಲಿದೆ ಎಂದು ವಿಷಾದಿಸಿದರು.

ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹೊರದೇಶದಿಂದ ಬಂದಂತವರಿಗೆ ಸೂಕ್ತ ರೀತಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಕೊರಂಟೈನ್‌ಗೆ ಒಳಪಡಿಸಿದ್ದರೆ ಈ ರೀತಿಯ ಕೆಟ್ಟ ಪರಿಸ್ಥಿತಿ ಎದುರಾಗುತ್ತಲೇ ಇರಲಿಲ್ಲ, ದೇಶದ ಇವತ್ತಿನ ಕಠೋರ ಆರ್ಥಿಕ ಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ. ಶ್ರೀಲಂಕಾ ಮೊದಲಾದ ರಾಷ್ಟçಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡ ಪರಿಣಾಮ ಅಲ್ಲಿ ದೊಡ್ಡ ಪ್ರಮಾಣದ ತೊಂದರೆ ಉಂಟಾಗಲಿಲ್ಲ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ತೋರಿದ ನಿರ್ಲಕ್ಷ್ಯದಿಂದಾಗಿ ಕೊರೋನಾ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ದೂರಿದರು.

ಸಮಿತಿಯ ರಾಜ್ಯ ಸಂಚಾಲಕ ಸದಾನಂದ ಡಂಗನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಾಜು ಆಲಗೂರ, ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಶಾಖೀರ್ ಸನದಿ, ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳೀಮನಿ, ಟಾಸ್ಕಫೋರ್ಸ್ ಸಮಿತಿ ಅಧ್ಯಕ್ಷ ಮೊಹ್ಮದ್‌ ರಫೀಕ್ ಟಪಾಲ್, ವಿಠ್ಠಲ ಕಟಕದೊಂಡ, ಬಿ.ಆರ್. ಪಾಟೀಲ ಯಾಳಗಿ, ಸಂಗಮೇಶ ಬಬಲೇಶ್ವರ, ಎಸ್.ಎಂ. ಪಾಟೀಲ ಗಣಿಹಾರ, ವಿದ್ಯಾರಾಣಿ ತುಂಗಳ, ಕಾಂತಾ ನಾಯಕ, ಸುರೇಶ ಘೋಣಸಗಿ, ಜಮೀರ್ ಭಕ್ಷಿ, ಚಾಂದಸಾಬ ಗಡಗಲಗಾವ, ಸುನೀಲ ಉಕ್ಕಲಿ, ಅಬ್ದುಲ್‌ಖಾದೀರ್ ಖಾದೀಮ್, ಅಬ್ದುಲ್‌ರಜಾಕ ಹೊರ್ತಿ, ನಾಗರಾಜ ಲಂಬು, ಈರಪ್ಪ ಜಕ್ಕಣ್ಣವರ, ವಸಂತ ಹೊನಮೋಡೆ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.