ತ್ವರಿತ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಿ
ಬಿಜಾಪುರ ವಿಮಾನ ನಿಲ್ದಾಣ ಹೋರಾಟ ಸಮಿತಿ ಪದಾಧಿಕಾರಿಗಳಿಂದ ಒತ್ತಾಯ
ಬಿಜಾಪುರ : ಬಿಜಾಪುರ ನಗರದ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಸರ್ವತೋಮುಖ ಪ್ರಗತಿಗಾಗಿ ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಬಿಜಾಪುರ ವಿಮಾನ ನಿಲ್ದಾಣ ಹೋರಾಟ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಉದ್ದೇಶಿತ ವಿಮಾನ ನಿಲ್ದಾಣ ಪ್ರದೇಶಕ್ಕೆ ತೆರಳಿದ ಹೋರಾಟ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಹಕ್ಕೊತ್ತಾಯ ಮಂಡಿಸಿದರು.
ನೇತೃತ್ವ ವಹಿಸಿದ್ದ ವಿಮಾನ ನಿಲ್ದಾನ ಹೋರಾಟ ಸಮಿತಿ ಅಧ್ಯಕ್ಷ ಸತೀಶ ಭಾವಿ ಮಾತನಾಡಿ, ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ ಸಮಸ್ತ ರಂಗದಲ್ಲಿಯೂ ಬೆಳವಣಿಗೆಯಾಗುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ ಅಂಬಾದಾಸ ಜೋಶಿ ಮಾತನಾಡಿ, 10 ವರ್ಷಗಳ ಹಿಂದೆ ಈ ಟೆಂಡರ್ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಮತ್ತೆ ಆರಂಭಗೊಂಡಿದೆ, ಈ ಕಾಮಗಾರಿ ಈ ಹಿಂದಿನಂತೆ ನಿಲ್ಲಬಾರದು, ವಿಮಾನ ನಿಲ್ದಾಣ ನಿರ್ಮಾಣಗೊಂಡರೆ ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗಲಿದ್ದು, ಪ್ರವಾಸೋದ್ಯಮ ಇನ್ನಷ್ಟೂ ವೃದ್ಧಿಯಾಗಲಿದೆ ಎಂದರು. ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಸಂತೋಷ ತಂದಿದೆ, ಅದೇ ತೆರನಾಗಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ನಿರ್ಮಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಈರಣ್ಣ ಅಳ್ಳಗಿ, ಸಾಗರ ಮೋಗಲಿ, ಭಾವೇಶ ಪೋರವಾಲ, ಮಹೇಶ ಜಾಲವಾದಿ ಪಾಲ್ಗೊಂಡಿದ್ದರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..