ಸೊಂಪುರ ರಸ್ತೆ ಕೆಸರು ಗದ್ದೆ!
ಹಾಳಾದ ರಸ್ತೆ ಕಂಡು ಪುರಸಭೆಗೆ ಹಿಡಿಶಾಪ ಹಾಕುತ್ತಿರುವ ನಿವಾಸಿಗರು
ಸಿಂದಗಿ : ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಸೊಂಪೂರ ರಸ್ತೆ ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿದೆ. ಸಂಚಾರಕ್ಕೆ ಭಾರಿ ಪ್ರಯಾಸ ಪಡಬೇಕಾಗಿದೆ. ಆ ರಸ್ತೆ ಮೇಲೆ ಸಂಚಾರ ಮಾಡುವವರು ಹಾಳಾದ ರಸ್ತೆ ಕಂಡು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದಲ್ಲಿ ಸತತ ಮಳೆಯಾಗಿದ್ದರಿಂದ ರಸ್ತೆಗಳು ಕೆಸರು ಗದ್ದೆಗಳಾಗಿವೆ, ರಸ್ತೆಗಳಲ್ಲಿನ ತೆಗ್ಗುಗಳು ನೀರು ತುಂಬಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಮಳೆಗಾಲ ಆರಂಭಗೊಂಡರೆ ಪಟ್ಟಣದ ಸೊಂಪುರ ರಸ್ತೆ ಹಾಳಾಗಿ ಹೋಗುತ್ತದೆ. ಇದರ ಬಗ್ಗೆ ಅರಿವಿದ್ದರೂ ಪುರಸಭೆ ಆಡಳಿತ ಸಾರ್ವಜನಿಕರ ಹಿತದಷ್ಟಿಯಿಂದ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೇ ಇರುವುದು ವಿಪರ್ಯಾಸವಾಗಿದೆ.
ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಹಾಳಾಗಿರುವ ಬಗ್ಗೆ ಅರಿವಿಲ್ಲದೇ ಸಾಕಷ್ಟು ಬಾರಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿರುವ ಉದಾಹರಣೆಗಳೂ ಸಾಕಷ್ಟಿವೆ. ಮಳೆಗಾಲ ಆರಂಭಕ್ಕೂ ಮುನ್ನ ಇಂಥ ರಸ್ತೆಗಳಲ್ಲಿ ಕನಿಷ್ಠ ಪಕ್ಷ ಖಡಿ, ಮೊರಂ ಹಾಕಿಸುವ ಸೌಜನ್ಯವನ್ನೂ ಸಹ ಪರಸಭೆ ಆಡಳಿತ ಪ್ರದರ್ಶಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ.
ಪುರಸಭೆ ಆಢಳಿತ ಪಟ್ಟಣದಲ್ಲಿ ನಾಗರಿಕ ಸ್ನೇಹಿ ವಾತಾವರಣ ನಿರ್ಮಿಸುವಲ್ಲಿ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಎದುರಿಸಬೇಕಾದೀತು ಎಂದು ಅಲ್ಲಿನ ನಿವಾಸಿಗಲಾದ ರಾಜಶೇಖರ ದೇವಣಿ, ನಿಂಗಣ್ಣ ಚೌಧರಿ, ವಿರುಪಾಕ್ಷಪ್ಪ ಹುಬ್ಬಳ್ಳಿ, ಅಣ್ಣಾರಾಯ ನಾಯಕ ಸೇರಿದಂತೆ ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..