70 ವರ್ಷ ಆಳಿದ ಕಾಂಗ್ರೆಸ್ ಸರ್ಕಾರಗಳು ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ಕಂಡಿವೆ ಹೊರತು ನೈಜ ಕಲ್ಯಾಣವನ್ನು ಬಯಸಿಲ್ಲ.
ಮುಖ್ತಾರ್ ಪಠಾಣ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ
ಬಿಜಾಪುರ : ಮದರಸಾಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ರಾಜ್ಯ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಲು ತೀರ್ಮಾನಿಸಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಧಾರ್ಮಿಕ ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳನ್ನು ಕಲಿಯುವ ನಿಟ್ಟಿನಲ್ಲಿ ಹೊಸ ಪಠ್ಯಕ್ರಮ ರೂಪಿಸಲಾಗುವುದು. ಅರಬ್ಬೀ ಶಿಕ್ಷಣದ ಜೊತೆಗೆ ಇಲೆಕ್ಟ್ರೀಷಿಯನ್, ಫಿಟ್ಟರ್, ಟೇಲರಿಂಗ್ ಮೊದಲಾದ ಕೌಶಲ್ಯಗಳನ್ನು ಬೋಧಿಸಲಾಗುವುದು, ಶೀಘ್ರದಲ್ಲಿಯೇ ಈ ಬಗ್ಗೆ ಸಮಿತಿ ರಚನೆ ಮಾಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಪಡೆಯುವ ಫಲಾನುಭವಿಗಳು ಸಾಲ ಮರುಪಾವತಿ ಮಾಡಬೇಕು, ಬಹುತೇಕರು ಸಾಲ ಪಡೆದರೆ ಮನ್ನಾ ಆಗಿದೆ ಎಂದು ತಿಳಿದು ಮರುಪಾವತಿ ಮಾಡುವುದೇ ಇಲ್ಲ, ಹೀಗಾಗಿ ನಿಗಮಕ್ಕೆ ಹೊರೆಯಾಗಿ ಬೇರೆ ಫಲಾನುಭವಿಗಳಿಗೆ ಸಾಲ ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಪ್ರಕ್ರಿಯೆ ಸರಳೀಕರಣ
ಕಳೆದ ವರ್ಷ ಭೀಕರ ಪ್ರವಾಹ ಪರಿಸ್ಥಿತಿ ಹಾಗೂ ಪ್ರಸಕ್ತ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ನಿಗಮಗಳಿಗೂ ಅನುದಾನ ಕಡಿತಗೊಳಿಸಲಾಗಿದೆ. ಅಲ್ಪಸಂಖ್ಯಾತ ಅಭಿವೃದ್ಧಿಯ ಬಗ್ಗೆ ನೈಜ ಕಾಳಜಿ ಹೊಂದಿರುವ ಬಿಜೆಪಿ ನಿಗಮದ ಸೌಲಭ್ಯಗಳನ್ನು ಇನ್ನಷ್ಟೂ ಸರಳೀಕರಣಗೊಳಿಸಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ, ಕೇಂದ್ರ ಅಲ್ಪಸಂಖ್ಯಾತ ಸಚಿವರನ್ನು ಶೀಘ್ರದಲ್ಲಿಯೇ ರಾಜ್ಯ ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ಭೇಟಿ ಮಾಡಿ ಕೇಂದ್ರದಿಂದಲೂ ಹೆಚ್ಚಿನ ಅನುದಾನ ತರಲಿದ್ದಾರೆ ಎಂದು ಭರವಸೆ ನೀಡಿದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅನುದಾನವನ್ನು ಮಾತ್ರ ಕಡಿತಗೊಳಿಸಲಾಗಿದೆ ಎಂಬುದು ತಪ್ಪು ಕಲ್ಪನೆ, ಪ್ರವಾಹ, ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ನಿಗಮಗಳ ಅನುದಾನ ಕಡಿತಗೊಳಿಸಲಾಗಿದೆ, ಇದಕ್ಕೆ ವಿಶೇಷಾರ್ಥ ಕಲ್ಪಿಸಬೇಕಾದ ಅಗತ್ಯತೆ ಇಲ್ಲ. ಈ ಹಿಂದೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 572 ಕೋಟಿ ರೂ.ಗಳ ಬೃಹತ್ ಮೊತ್ತದ ಅನುದಾನ ನೀಡಿದ್ದೇ ಬಿಜೆಪಿ ಸರ್ಕಾರ ಎನ್ನುವುದನ್ನು ಮರೆಯಬಾರದು ಎಂದರು.
70 ವರ್ಷ ಆಳಿದ ಕಾಂಗ್ರೆಸ್ ಸರ್ಕಾರಗಳು ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ಕಂಡಿವೆ ಹೊರತು ನೈಜ ಕಲ್ಯಾಣವನ್ನು ಬಯಸಿಲ್ಲ. ಪ್ರತಿವರ್ಷ ಕಾಂಗ್ರೆಸ್ ನಾಯಕರು ಹಜ್ ಯಾತ್ರಿಕರನ್ನು ಬೀಳ್ಕೋಡಲು ಆಗಮಿಸುತ್ತಿದ್ದರು, ಹಸಿರು ನಿಶಾನೆ ತೋರಿ ಮನೆ ಸೇರುತ್ತಿದ್ದರು. ಆದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸಹ ಹಜ್ ಯಾತ್ರಿಕರನ್ನು ಬೀಳ್ಕೊಡಲು ಆಗಮಿಸಿದ್ದರು. ಆ ಸಂದರ್ಭದಲ್ಲಿ ಹಜ್ ಯಾತ್ರಿಕರು ಟೆಂಟ್ನಲ್ಲಿರುವುದನ್ನು ಕಂಡು ಕೂಡಲೇ ಇದೇನೋ ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದ ಯಾತ್ರಿಕರು ಟೆಂಟ್ನಲ್ಲಿರುವುದೇ? ಬೇಡ ಎಂದು ಕೂಡಲೇ ಹಜ್ ಭವನ ನಿರ್ಮಾಣಕ್ಕೆ ಅಣಿಯಾದರು. ಇದು ಅಲ್ಪಸಂಖ್ಯಾತ ಬಂಧುಗಳ ನಿಜವಾದ ಕಾಳಜಿ ಎಂದರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡುವೆ
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಹಾಗೂ ವಿವಿಧ ಯೋಜನೆಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸಲು ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.
ಟಿಪ್ಪು ಸುಲ್ತಾನ ಜಯಂತೋತ್ಸವವನ್ನು ಕಾಂಗ್ರೆಸ್ ಒಂದು ವಿಷಯಾಧಾರಿತ ಚರ್ಚೆಯನ್ನಾಗಿಸಿತು, ಈ ಹಿಂದೆ ಸರಳವಾಗಿ ಜಯಂತಿ ನಡೆಯುತ್ತಿತ್ತು. ಮುಸ್ಲಿಂ ಬಾಂಧವರು ಜಯಂತಿ ಆಚರಣೆಗೆ ಕೋರಿಕೆ ಮಾಡಿರಲೂ ಇಲ್ಲ, ಆದರೆ ವಿನಾಕಾರಣ ಕಾಂಗ್ರೆಸ್ ಈ ವಿಷಯವನ್ನು ದೊಡ್ಡ ರಾಜಕೀಯ ವಿಷಯವಸ್ತುವಾಗಿಸಿತು ಎಂದರು.
ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಸೈಯ್ಯದ್ಅಶ್ರಫ್ ನಿಡೋಣಿ ಮಾತನಾಡಿದರು.