ವಿದ್ಯಾಗಮ ಕೇಂದ್ರಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ಪರಿಶೀಲನೆ

0

Gummata Nagari : Bijapur News

ತಾಳಿಕೋಟೆ : ಕೊರೊನಾ ಕಾರಣದಿಂದ ಶಾಲಾ ಶಿಕ್ಷಣದಿಂದ ದೂರ ಉಳಿದಿರುವ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಜಾರಿ ಬಂದಿರುವ ವಿದ್ಯಾಗಮ ಯೋಜನೆಯು ಜಿಲ್ಲೆಯಾದ್ಯಂತ ಶಿಕ್ಷಕರ ಪರಿಶ್ರಮದಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಬಿಜಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಉಪನಿರ್ದೇಶಕ ಪಿ.ಟಿ.ಭೋಂಗಾಳೆ ಹೇಳಿದರು.

ಪಟ್ಟಣದ ಎಸ್.ಕೆ.ಉದ್ಯಾನ ವನದಲ್ಲಿ ನಡೆಯುತ್ತಿರುವ ವಿದ್ಯಾಗಮ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಪರ್ತಕರ್ತರೊಂದಿಗೆ ಅವರು ಮಾತನಾಡಿದರು.

ಕಲಿಕೆಯಿಂದ ದೂರವಿರುವ ಶಾಲಾ ಮಕ್ಕಳನ್ನು ಶಾಲೆಗೆ ಹಾಗೂ ಶಿಕ್ಷಣದಿಂದ ವಿಮುಖರ ಆಕರ್ಷಿಸುವುದೇ ವಿದ್ಯಾಗಮ ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿದ್ಯಾಗಮ ಯೋಜನೆಯಿಂದ ಸರ್ಕಾರಿ ಶಾಲೆಯೊಳಗೆ ದಾಖಲಾತಿ ಹೆಚ್ಚಿಳವಾಗಿದೆ. ಶಾಲಾ ವಂಚಿತ ಮಕ್ಕಳನ್ನು ಪಾಲಕರು ಕೂಲಿ ಕೆಲಸಕ್ಕೆ ಹಾಗೂ ಬಾಲ್ಯವಿವಾಹಕ್ಕೆ ಒಳಪಡಿಸುವ ಸಂಗತಿಗಳು ಗಮನಕ್ಕೆ ಬಂದಿವೆ. ಇಂದು ಈ ದಿಸೆಯಲ್ಲಿ ಪಾಲಕರು ಮಕ್ಕಳ ವಿದ್ಯೆಗೆ ಪ್ರಾಶಸ್ತ್ಯ ನೀಡಬೇಕು ಎಂದರು. ವಿದ್ಯಾಗಮ ಕೇಂದ್ರದಲ್ಲಿ ಕೆಲ ಮಕ್ಕಳು ಶಾಲೆ ಪ್ರಾರಂಭಿಸಲು, ವಿದ್ಯಾಗಮ ಯೋಜನೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಅಧಿಕಾರಿಗಳನ್ನು ವಿನಂತಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ನಂತರ ಪಟ್ಟಣದ ಎಸ್.ಕೆ.ಪ್ರೌಢ ಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷಾ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ಕೊಠಡಿಗಳನ್ನು ಸೆನಿಟೈಸ್ ಮಾಡಿರುವುದು, ಕೈಗಳಿಗೆ ಸೆನಿಟೈಸರ್ ವ್ಯವಸ್ಥೆ, ಮಾಸ್ಕ ವ್ಯವಸ್ಥೆ ಹಾಗೂ ಪರೀಕ್ಷಾರ್ಥಿಗಳ ಮಧ್ಯ ಸಾಮಾಜಿಕ ಅಂತರ ಕಾಪಾಡಿಕೊಂಡು ಆಸನದ ವ್ಯವಸ್ಥೆ ಮಾಡಿರುವುದನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೊಠಡಿಯಲ್ಲಿ ಪ್ರವೇಶ ನೀಡಲಾಗಿದ್ದು ಯಾವ ಮಗುವಿಗೆ ಜ್ವರದ ಲಕ್ಷಣ ಕಂಡುಬಂದಿಲ್ಲ, ಮುಂದಿನ ಪರೀಕ್ಷಾ ದಿನಗಳಂದು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾಗಮ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಂ.ಎ.ಗುಳೇದಗುಡ್ಡ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಡಿ.ಕರಜಗಿ, ಪ್ರಶ್ನೆ ಪತ್ರಿಕೆ ಪಾಲಕ ಆರ್.ಬಿ.ದಮ್ಮೂರಮಠ, ಸಿಆರ್‌ಸಿ ಸುರೇಶ ವಾಲಿಕಾರ ಸೇರಿದಂತೆ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.