ಹೆಚ್ಚುವರಿ ಹಣ ಕೇಂದ್ರ, ರಾಜ್ಯ ಸರಕಾರ ಭರಿಸಲು ಮನವಿ

0

Gummata Nagari : Bijapur News

ಬಿಜಾಪುರ : ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಿವಿಧ ವಸತಿ ಯೋಜನೆಗಳ ಪ್ರಯೋಜನ ಪಡೆಯಲು ಫಲಾನುಭವಿಗಳ ಭರಿಸಬೇಕಾದ ಹೆಚ್ಚುವರಿ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಿಸಿದರೆ ಬಡ ಜನರಿಗೆ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಧಾನ ಮಂತ್ರಿಗಳ ಗಮನ ಸೆಳೆದಿದ್ದಾರೆ.

ಬಿಜಾಪುರ ಜಿಲ್ಲೆ ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಅನುಕೂಲ ಕಲ್ಪಿಸಲು ಈ ಮಹತ್ವಾಕಾಂಕ್ಷೆ ಯೋಜನೆಯ ಅನುದಾನವನನು ಹೆಚ್ಚಿಸಬೇಕು ಎಂದು ವಿನಂತಿಸಿ ಪ್ರಧಾನಮಂತ್ರಿಗಳಿಗೆ ಲಿಖಿತವಾದ ಮನವಿಯನ್ನು ಸಲ್ಲಿಸಿದ್ದಾರೆ.

ಈ ಕುರಿತು ವಿವರಣೆ ನೀಡಿರುವ ಸಂಸದ ಜಿಗಜಿಣಗಿ, ಬಿಜಾಪುರ ಜಿಲ್ಲೆಯ ನಗರ ಬಡ ಕುಟುಂಬದ ವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಜನರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಸನ್ 2016-17 ನೇ ವರ್ಷದಲ್ಲಿ ರಾಜ್ಯ, ಕೇಂದ್ರ, ಸಂಘ ಸಂಸ್ಥೆಗಳ ಹಾಗೂ ಫಲಾನುಭವಿಗಳ ಪಾಲು ಅನುಪಾತದ ಸರಾಸರಿಯಲ್ಲಿ ಒಂದು ಮನೆಗೆ 4.50 ಲಕ್ಷ ರೂ.ಇದ್ದು, ಆದರೆ ಪ್ರಸ್ತುತ ಮನೆಗಳ ನಿರ್ಮಾಣದಲ್ಲಿ ಸನ್ 2018-19 ರ ಪ್ರಕಾರ ರಾಜ್ಯ, ಕೇಂದ್ರ, ಸಂಘ ಸಂಸ್ಥೆಗಳ ಹಾಗೂ ಫಲಾನುಭವಿಗಳ ಪಾಲು ಅನುಪಾತದ ಸರಾಸರಿಯಲ್ಲಿ ಒಂದು ಮನೆಗೆ ರೂ. 5.87 ಲಕ್ಷ ರೂ. ನಿಗದಿಗೊಳಿಸಲಾಗಿದೆ, ಏತನ್ಮಧ್ಯೆ ರಾಜ್ಯ, ಕೇಂದ್ರ, ಸಂಘ ಸಂಸ್ಥೆಗಳ ಪಾಲುಗಾರಿಕೆಯಲ್ಲಿ ಹೆಚ್ಚಳವಾಗದೇ ಕೇವಲ ಬಡ ಫಲಾನುಭವಿಗಳ ಪಾಲುಗಾರಿಕೆಯಲ್ಲಿ 1.37 ಲಕ್ಷ ರೂ. ಹೆಚ್ಚಳವಾಗಿರುತ್ತದೆ. ಹೀಗಿರುವಾಗ ಸರ್ಕಾರದ ಮಹತ್ವಾಕಾಂಕ್ಷೆಯ ಮನೆಗಳ ನಿರ್ಮಾಣ ಯೋಜನೆಯಲ್ಲಿ ಎಸ್.ಸಿ/ಎಸ್.ಟಿ ಹಾಗೂ ಇತರೆ ಹಿಂದುಳಿದ ಜನಾಂಗದವರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಮನೆಗಳು ಬಡ ಕುಟುಂಬದ ಪಾಲಾಗದೇ ಕೇವಲ ಹಣವಂತರ ಪಾಲಿಗೆ ಹೋಗಲಿದೆ ಎಂದು ಜಿಗಜಿಣಗಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಡ ಫಲಾನುಭವಿಗಳ ಪಾಲುಗಾರಿಕೆಯಲ್ಲಿ ಹೆಚ್ಚಳವಾದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಸರಾಸರಿ ಅನುಪಾತದಲ್ಲಿ ನಿಭಾಯಿಸಿದಲ್ಲಿ ಎಸ್.ಸಿ/ಎಸ್.ಟಿ ಹಾಗೂ ಬಡ ಹಿಂದುಳಿದ ಜನಾಂಗದವರಿಗೆ ಅನುಕೂಲವಾಗಲಿದೆ ಎಂದು ಜಿಗಜಿಣಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.