ಬ.ಬಾಗೇವಾಡಿಯಲ್ಲಿ ಎ.ಸಿ. ಕಚೇರಿ ಸ್ಥಾಪಿಸಲು ಮನವಿ

0

Gummata Nagari : Bijapur News

ಬಿಜಾಪುರ : ಬಸವನ ಬಾಗೇವಾಡಿ ತಾಲೂಕಿನಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿ, ಬಸವನ ಬಾಗೇವಾಡಿ ತಾಲೂಕಿನಲ್ಲಿ ಉಪವಿಭಾಗಾಧಿಕಾರಿಗಳ ಸ್ಥಾಪನೆಯ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಕೆ. ಬೆಳ್ಳುಬ್ಬಿ, ಬಸವನ ಬಾಗೇವಾಡಿ ಅತ್ಯಂತ ದೊಡ್ಡ ತಾಲೂಕುಗಳಲ್ಲಿ ಒಂದಾಗಿದೆ, ಅದೇ ತೆರನಾಗಿ ಬಸವನ ಬಾಗೇವಾಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ನಿಡಗುಂದಿ, ಕೊಲ್ಹಾರ ಮೊದಲಾದ ತಾಲೂಕುಗಳ ಪ್ರದೇಶಗಳು ಸೇರ್ಪಡೆಗೊಂಡಿವೆ, ಉಪವಿಭಾಗಾಧಿಕಾರಿಗಳ ಕಚೇರಿ ಇಲ್ಲದೇ ಇರುವುದರಿಂದ ಬಸವನ ಬಾಗೇವಾಡಿ ಜನತೆ ತಮ್ಮ ಕೆಲಸ ಕಾರ್ಯಗಳಿಗೆ ದೂರ ಪ್ರಯಾಣಿಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಬರಬೇಕಾಗುತ್ತದೆ, ಇದರಿಂದಾಗಿ ರೈತರ, ಸಾರ್ವಜನಿಕರ ಸಮಯ, ಹಣ ಹಾಗೂ ಶ್ರಮ ವ್ಯರ್ಥವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕೂಡಲೇ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಬಸವೇಶ್ವರ ಪ್ರತಿಮೆ ಸ್ಥಾಪಿಸಿ : ಮುಖ್ಯಮಂತ್ರಿಗಳಿಗೆ ಮನವಿ

ವಿಧಾನಸೌಧ ಹಾಗೂ ವಿಕಾಸಸೌಧದ ಎದುರು ಕ್ರಾಂತಿಯೋಗಿ ಅಣ್ಣ ಬಸವಣ್ಣನವರ ಪ್ರತಿಮೆ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ಕ್ರಾಂತಿಯೋಗಿ ಅಣ್ಣ ಬಸವಣ್ಣನವರು ವಿಶ್ವದ ಶ್ರೇಷ್ಠ ಚಿಂತಕರಲ್ಲೊಬ್ಬರು, ವಚನಗಳ ಮೂಲಕ ದೊಡ್ಡ ಸುಧಾರಣೆ ತಂದ ಮಹಾನುಭಾವ. ಜಗತ್ತಿನ ಪ್ರಥಮ ಪಾರ್ಲಿಮೆಂಟ್ ಎಂದೇ ಕರೆಯಲಾಗುವ ಅನುಭವ ಮಂಟಪವನ್ನು ರೂಪಿಸಿ ಅನೇಕ ಶರಣರ ಚಿಂತನೆಗಳಿಗೆ ವೇದಿಕೆ ಒದಗಿಸಿದರು. ಸಮಾಜದಲ್ಲಿರುವ ಮೂಡನಂಬಿಕೆ, ವ್ಯರ್ಥ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಿದ ಅಣ್ಣ ಬಸವಣ್ಣನವರ ಕೊಡುಗೆಗಳು ಅನನ್ಯ. ಹೀಗಾಗಿ ಅಣ್ಣ ಬಸವಣ್ಣನವರ ಪ್ರತಿಮೆಯನ್ನು ವಿಧಾನಸೌಧ ಹಾಗೂ ವಿಕಾಸಸೌಧದ ಮುಂಭಾಗದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸಬೇಕು ಎಂದು ಬೆಳ್ಳುಬ್ಬಿ ಒತ್ತಾಯಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.