ಜಿಲ್ಲೆಯಲ್ಲಿ ರೆಡ್ ಅಲರ್ಟ್

ಬಿಜಾಪುರ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ

0

ಟೋಲ್-ಫ್ರೀ ಸಹಾಯವಾಣಿ
ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರಿಗೆ ಸ್ಪಂದಿಸಲು ಜಿಲ್ಲೆಯ ಎಲ್ಲ ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದ್ದು, 24*7 ಸಹಾಯವಾಣಿ ಲಭ್ಯವಾಗುವಂತೆ ಮಾಡಬೇಕು, ಅದೇ ತೆರನಾಗಿ ಈ ನಿಯಂತ್ರಣ ಕೊಠಡಿಗಳಿಗೆ 24*7 ಸಿಬ್ಬಂದಿ ನೇಮಿಸಬೇಕು ಎಂದು ಸೂಚಿಸಿದ್ದು, ಜಿಲ್ಲಾಧಿಕಾರಿಗಳ ಸಹಾಯವಾಣಿ ಸಂಖ್ಯೆ 08352-221261ಗೂ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Gummata Nagari : Bijapur News

ಬಿಜಾಪುರ : ಬಿಜಾಪುರ ಜಿಲ್ಲೆಯಲ್ಲಿ ವರುಣನ ಆರ್ಭಟ ಕಳೆದೆರಡು ದಿನಗಳಿಂದ ಜೋರಾಗಿದ್ದು ಈ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.

ಅಗ್ನಿಶಾಮಕ ಇಲಾಖೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಕಂದಾಯ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಿಗೆ ಈಗಾಗಲೇ ಜ್ಞಾಪನ ಹೊರಡಿಸಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ, ಹೀಗಾಗಿ ಅಧಿಕಾರಿಗಳು ಈ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಬೇಕು, ಅದೇ ತೆರನಾಗಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಪ್ರವಾಹ ಮುನ್ನಚ್ಚರಿಕಾ ಚಟುವಟಿಕೆಗಳಿಗಾಗಿ ಎಲ್ಲ ಅಗತ್ಯ ಸಾಮಗ್ರಿಗಳಿಗೊಂದಿಗೆ 24*7 ಸಿದ್ಧರಾಗಿರಬೇಕು ಎಂದು ಸೂಚಿಸಿದ್ದಾರೆ.

ಪ್ರತಿ ದಿನ ಮಳೆಯ ವರದಿ, ಪ್ರಕೃತಿ ವಿಕೋಪದಿಂದಾಗುವ ಮನೆ ಹಾನಿ, ಜೀವ ಹಾನಿ, ಜಾನುವಾರುಗಳ ಪ್ರಾಣ ಹಾನಿಯ ಕುರಿತು ಹಾಗೂ ಬೆಳೆ ನಾಶದ ಕುರಿತು ಕಾಲಕಾಲಕ್ಕೆ ವರದಿ ಸಲ್ಲಿಸುವುದು, ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಓಗಳು ತಾವು ಕಾರ್ಯನಿರ್ವಹಿಸುವ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂದರ್ಭವಿದ್ದರೆ ತಕ್ಷಣವೇ ಗ್ರಾಮಸ್ಥರನ್ನು ಎಚ್ಚರಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ರವಾನಿಸಿದ್ದಾರೆ.

ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಿ

ಬಹುಮುಖ್ಯವಾಗಿ ನದಿಪಾತ್ರದಲ್ಲಿರುವ ಜನರಿಗೆ ನದಿಯತ್ತ ತೆರಳದಂತೆ ಅಗತ್ಯ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು, ಮಳೆಯಿಂದ ಹಾನಿಯಾಗುವ ಸಂದರ್ಭ ಎದುರಾಗುತ್ತಿದ್ದರೆ ಮುಂಜಾಗ್ರತಾ ಕ್ರಮವಾಗಿ ತ್ವರಿತಗತಿಯಲ್ಲಿ ಸಮುದಾಯ ಭವನ, ದೊಡ್ಡ ಕಟ್ಟಡಗಳಿಗೆ ಸ್ಥಳಾಂತರಿಸಿ ಗಂಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ನದಿ ತೀರದ ಜನತೆಯನ್ನು ಸಾಗಿಸುವ ಸಂದರ್ಭದ ಅನಿವಾರ್ಯತೆಯೂ ಸೃಷ್ಟಿಯಾಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ತವಾದ ಬೋಟ್‌ಗಳ ಲಭ್ಯತೆಯನ್ನು ಪರಿಶೀಲನೆ ಮಾಡಿಕೊಂಡು ಬೋಟ್‌ಗಳನ್ನು ಸಹ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.

ಜನ ಸಾಮಾನ್ಯರ ಆರೋಗ್ಯಕ್ಕೆ ಬೇಕಾಗುವ ಔಷಧಿಗಳ ದಾಸ್ತಾನು ಬಗ್ಗೆಯೂ ನಿಗಾ ವಹಿಸಬೇಕು, ಅಗತ್ಯ ಔಷಧಿಗಳು ಆಯಾ ಪಿಎಚ್‌ಸಿಗಳಲ್ಲಿ ಲಭ್ಯವಿದೆಯೋ ಇಲ್ಲವೋ ಎಂಬುದರ ವಿವರವನ್ನು ತಕ್ಷಣವೇ ಪಡೆದುಕೊಳ್ಳಬೇಕು, ಅವುಗಳ ಕೊರತೆ ಎದುರಾಗಿದ್ದರೆ ತಕ್ಷಣವೇ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ಔಷಧಿಯನ್ನು ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಹೆಸ್ಕಾಂ ಸಹ ಈ ಎಲ್ಲ ವಿಷಯಗಳ ಕುರಿತು ಗಂಭೀರವಾಗಿ ಕಾರ್ಯೋನ್ಮುಖವಾಗಬೇಕು, ವಿದ್ಯುತ್ ಅವಘಢ ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗಲು ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಗ್ರಾ.ಪಂ.ಗಳು ಆದ್ಯತೆ ಮೇರೆ ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.