ಮಳೆ ಹಾನಿ ಸಮೀಕ್ಷೆ ಕೈಗೊಳ್ಳಿ, ಶೀಘ್ರ ಪರಿಹಾರ ನೀಡಿ

ಜಿಲ್ಲಾಧಿಕಾರಿ ಸುನೀಲ್ ಕುಮಾರಗೆ ಶಾಸಕ ಎಂ.ಬಿ.ಪಾಟೀಲ್ ಮನವಿ

0

Gummata Nagari : Bijapur News

ಬಿಜಾಪುರ : ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧಡೆ ಮನೆಗಳು ಬೀಳುತ್ತಿದ್ದು, ಹಾನಿಗೊಳಗಾದ ಮನೆಗಳ ಸಂಪೂರ್ಣ ಸಮೀಕ್ಷೆಯನ್ನು ಯಥಾವತ್ತಾಗಿ ಕೂಡಲೇ ಕೈಗೊಳ್ಳಬೇಕು ಹಾಗೂ ಮಳೆ ಹಾನಿಯಿಂದ ಉಂಟಾದ ಬೆಳೆ, ಜನ-ಜಾನುವಾರುಗಳ ಹಾನಿಯ ಸಮೀಕ್ಷೆಯನ್ನು ಸಹ ಕೈಗೆತ್ತಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಈ ಕುರಿತು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಬಿಜಾಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಜಿಲ್ಲೆಯಾಧ್ಯಂತ ಹಲವಾರು ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಇನ್ನು ಕೆಲವು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇದರಿಂದ ಅಲ್ಲಿ ವಾಸಿಸುವ ಕುಟುಂಬಗಳು ಸಂಪೂರ್ಣ ನಿರ್ಗತಿಕರಾಗಿದ್ದಾರೆ. ಇಂತಹ ಕುಟುಂಬಗಳಿಗೆ ತಾತ್ಕಾಲಿಕವಾಗಿ ತಕ್ಷಣ ವಸತಿ, ಪಡಿತರ ಸೇರಿದಂತೆ ಅಗತ್ಯ ನೆರವು ಒದಗಿಸಬೇಕು. ಮತ್ತು ಹಾನಿಗೊಳಗಾದ ಮನೆಗಳ ಸರಿಯಾದ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಲ್ಲಿ ಎಂ.ಬಿ.ಪಾಟೀಲ್ ಕೋರಿದ್ದಾರೆ.

ಅಲ್ಲದೇ ಧಾರಾಕಾರ ಮಳೆಯಿಂದ ಈ ಬಾರಿ ರೈತರು ಬೆಳೆದ ಫಸಲು ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ನಿಟ್ಟಿನಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡು, ಬಾಧಿತ ಎಲ್ಲ ರೈತರಿಗೆ ಪರಿಹಾರದ ವ್ಯವಸ್ಥೆ ದೊರೆಯುವಂತೆ ಅಗತ್ಯ ಸಿದ್ಧತೆಗಳನ್ನು ಈ ಕೂಡಲೇ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ತಹಶೀಲ್ದಾರಗಳಿಗೆ ಸೂಚನೆ

ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಉಂಟಾದ ಮನೆಗಳ, ಬೆಳೆ ಹಾನಿ ಹಾಗೂ ಜಾನುವಾರುಗಳ ಹಾನಿ ಕುರಿತು ತಕ್ಷಣ ಸಮೀಕ್ಷೆ ನಡೆಸಿ ಎಂದು ಬಬಲೇಶ್ವರ ಹಾಗೂ ತಿಕೋಟಾ ತಹಶೀಲ್ದಾರು ಹಾಗೂ ತಾ.ಪಂ. ಇಓಗಳಿಗೆ ಎಂ.ಬಿ.ಪಾಟೀಲ್ ಸೂಚಿಸಿದ್ದಾರೆ.

ಆಯಾ ಗ್ರಾಮಗಳ ಸ್ಥಳೀಯ ಪಿಡಿಓಗಳು, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮಸಹಾಯಕರ ನೆರವಿನಿಂದ ತಕ್ಷಣ ಸಮೀಕ್ಷೆ ಕೈಗೊಂಡು, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಹೇಳಿದ್ದು, ಸಮೀಕ್ಷೆಯಲ್ಲಿ ಯಾವುದೇ ಹಾನಿಗೊಳಗಾದ ಬಾಧಿತರು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಎಂ.ಬಿ.ಪಾಟೀಲ್‌ರವರು ಸೂಚಿಸಲಾಗಿದೆ.

ಹೊನವಾಡ, ಕೊಟ್ಯಾಳ, ಧನ್ಯಾಳ, ದಾಶ್ಯಾಳ, ಸಾರವಾಡ, ತೊನಶ್ಯಾಳ, ಹೊನಗನಹಳ್ಳಿ, ಸವನಳ್ಳಿ ಗ್ರಾಮಗಳು ವಿಶೇಷವಾಗಿ ಬಬಲೇಶ್ವರ ಕ್ಷೇತ್ರದ ಈ ಗ್ರಾಮಗಳು ಡೋಣಿ ನದಿ ತೀರದಲ್ಲಿದ್ದು, ಅಧಿಕಾರಿಗಳು ಈ ಗ್ರಾಮಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಲು ತಿಳಿಸಿದ್ದಾರೆ.

ಶಾಸಕ ಎಂ.ಬಿ.ಪಾಟೀಲ್‌ರ ಸೂಚನೆಯಂತೆ ಬಬಲೇಶ್ವರ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಿರಾದಾರ ಹಾಗೂ ತಿಕೋಟಾ ತಹಶೀಲ್ದಾರ ಸಂತೋಷ ಮ್ಯಾಗೇರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಈ ಕೂಡಲೇ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಬಬಲೇಶ್ವರ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.