23 ರಂದು ಬೆಂಗಳೂರಿನಲ್ಲಿ ಹೋರಾಟ

ಮತ್ತೊಂದು ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಅಣಿ

0

Gummata Nagari : Bijapur News

ಬಿಜಾಪುರ : ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರನ ಬೇಡಿಕೆಗಳಿಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ಹೀಗಾಗಿ ಮತ್ತೊಂದು ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಅಣಿಯಾಗುತ್ತಿದ್ದು, ಅಧಿವೇಶನ ಸಂದರ್ಭದಲ್ಲಿ ದಿ.23 ರಂದು ಬೆಂಗಳೂರಿನಲ್ಲಿ ಹೋರಾಟ ಕೈಗೊಳ್ಳಲಾಗುತ್ತಿದ್ದು, ದಿ.22 ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಿದ್ದಾರೆ.

ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಎಐಟಿಯುಸಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿ, ಪ್ರಾಣವನ್ನೇ ಪಣಕಿಟ್ಟು ಕೊರೊನಾ ಸಂದರ್ಭದಲ್ಲಿ ದುಡಿದ ಆಶಾ ಕಾರ್ಯಕರ್ತೆಯರು ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ ಆಶ್ವಾಸನೆಯನ್ನು ರಾಜ್ಯ ಸರ್ಕಾರ ತಪ್ಪಿದೆ.

ರಾಜ್ಯದ 42,000 ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20 ದಿನಗಳ ನಿರಂತರ ಹೋರಾಟ ಮಾಡಿದ ಸಂದರ್ಭದಲ್ಲಿ `ವೇತನ ಹೆಚ್ಚಳ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು, ಅದರನ್ವಯ ಎರಡು ತಿಂಗಳು ತಾಳ್ಮೆಯಿಂದ ಕಾಯ್ದರೂ ಆಶಾ ಕಾರ್ಯಕರ್ತೆಯರ ಬೇಡಿಕೆ ಮಾತ್ರ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಂದು ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಅಣಿಯಾಗುತ್ತಿರುವುದು ಅನಿವಾರ್ಯವಾಗಿದೆ.

ಕಳೆದ ಸುಮಾರು 10-11 ವರ್ಷಗಳಿಂದ ಆಶಾ ಕಾರ್ಯಕರ್ತೆಯರು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನತೆಯ ಆರೋಗ್ಯ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಆಶಾಗಳು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು, ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್ಲೈನ್ ಪೋರ್ಟಲ್ ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬ ನೀತಿಯಿಂದಾಗಿ 2018 ಮತ್ತು 2019 ರ ನಡುವೆ 15 ತಿಂಗಳುಗಳಲ್ಲಿ ಪ್ರತಿಕಾರ್ಯಕರ್ತೆಗೆ ಬರಬೇಕಾಗಿದ್ದ 15-25 ಸಾವಿರದಷ್ಟು ಹಣ ಬರದೇ ನಷ್ಟವಾಗಿರುವುದು ಇನ್ನೂ ಆಶಾಗಳಿಗೆ ಕೊಡುವ ವ್ಯವಸ್ಥೆ ಆಗಿಲ್ಲ. ಈಗಲೂ ತಿಂಗಳ ಕೆಲಸಕ್ಕೆ ತಕ್ಕಷ್ಟು ಹಣ ಅವರಿಗೆ ಸಿಗುತ್ತಿಲ್ಲ. ಆದರೆ ದಿನೇ ದಿನೇ ದುಡಿತ ಹೆಚ್ಚಿತೇ ಹೊರತುದುಡಿದ ಹಣ ಮಾತ್ರ ಕೈಗೆ ಬರಲಿಲ್ಲ. ಇದರಿಂದ ಮುಂದುವರಿದ ಈ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ ಎಂದರು.

ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ ರೂ. 12 ಸಾವಿರ ರೂ. ಘೋಷಿಸುವುದು, ಬಾಕಿ ಇರುವ ಪ್ರೋತ್ಸಾಹ ಧನವನವನ್ನು ಆಶಾ ಕಾರ್ಯಕರ್ತೆಯರಿಗೆ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಿದರು.

ಆಶಾ ಕಾರ್ಯಕರ್ತೆಯರ ಸಂಘಟನೆಯ ಕಾರ್ಯದರ್ಶಿ ಭಾರತಿ ದೇವಕತೆ, ಬಸವನ ಬಾಗೇವಾಡಿ ತಾಲೂಕಾ ಘಟಕದ ಅಧ್ಯಕ್ಷ ಲಕ್ಷ್ಮೀ ಸಿಮಿಕೇರಿ ಮೊದಲಾದವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.