ನನ್ನ ಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಜಾರಿ

ಕೆರೆ ತುಂಬಿಸುವ ಯೋಜನೆ ಕುರಿತು ಎಂಬಿಗೆ ನಡಹಳ್ಳಿ ಎದಿರೇಟು

0

ಜಿಲ್ಲೆಯ ನೀರಾವರಿ ವಿಷಯದಲ್ಲಿ ಯಾರು, ಏನು ಹೋರಾಟ ಮಾಡಿದ್ದಾರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರಾವರಿಗೆ ಎಷ್ಟು ಹಣ ಬಿಡುಗಡೆ ಆಗಿದೆ ಅನ್ನೋ ದಾಖಲೆ ನನ್ನ ಬಳಿ ಇದೆ. ಎಂಬಿಪಾ ಬಹಿರಂಗ ಚರ್ಚೆಗೆ ಸಿದ್ದರಿದ್ದರೆ ನಾನು ದಾಖಲೆ ಸಮೇತ ಸ್ಪಷ್ಟಪಡಿಸಲು ತಯಾರಿದ್ದೇನೆ. ನೀರಾವರಿ ಕನಸು ಜಿಲ್ಲೆಯ 10 ಲಕ್ಷ ಜನರದ್ದೇ ಹೊರತು ಎಂಬಿಪಾ ಒಬ್ಬರದ್ದೇ ಅಲ್ಲ. ಎಂಬಿಪಾರವರೇ ನೀವು ಕನಸು ಕಾಣ್ತಾನೆ ಇರಿ ಅದನ್ನು ಬಿಜೆಪಿಯವರಾದ ನಾವು ನನಸು ಮಾಡ್ತಾನೇ ಇರ್ತೀವಿ.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು.

Gummata Nagari : Bijapur News

ಮುದ್ದೇಬಿಹಾಳ : ನೈಸರ್ಗಿಕ ಗುರುತ್ವಾಕರ್ಷಣೆ ಆಧರಿಸಿ ಹಳ್ಳಗಳ ಮೂಲಕ ಕೆರೆ ತುಂಬಿಸುವ ಯೋಜನೆ ತಮ್ಮ ಕನಸಿನ ಕೂಸು ಎಂದು ಹೇಳಿಕೊಂಡಿರುವ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲರಿಗೆ ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅದು ನಾನು ನನ್ನ ಮತಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಜಾರಿಗೊಳಿಸಿರುವ ಯೋಜನೆಯಾಗಿದೆ ಎಂದು ಎದಿರೇಟು ನೀಡಿದ್ದಾರೆ.

ಇಲ್ಲಿಯ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳ್ಳದ ಮೂಲಕವೇ ಕೆರೆಗಳಿಗೆ ನೀರು ಹೋಗುತ್ತೆ, ನಯಾಪೈಸೆ ಖರ್ಚಿಲ್ಲದೆ ಇದನ್ನು ಮಾಡಬಹುದು ಎನ್ನುವ ಕನಿಷ್ಠ ಚಿಂತನೆಯಾಗಲಿ, ನೈಸರ್ಗಿಕ ಗುರುತ್ವಾಕರ್ಷಣ ಆಧಾರದಲ್ಲಿ ಕೆರೆ ತುಂಬಿಸಬಹುದು ಎನ್ನುವ ಕಲ್ಪನೆಯಾಗಲಿ ಅವರಲ್ಲಿ ಇರಲಿಲ್ಲ. ಇದನ್ನು ನಾನು ನನ್ನ ಮತಕ್ಷೇತ್ರದಲ್ಲಿ ಜಾರಿಗೊಳಿಸಿದ ಮೇಲೆ ಅವರಿಗೆ ಜ್ಞಾನೋದಯ ಆಗಿದೆ. ಇವರು ಸಚಿವರಿದ್ದಾಗ ಆ ಸಾಧ್ಯತೆ ಬಗ್ಗೆ ಹೇಳಿದರೂ ಕಿವಿಗೆ ಹಾಕಿಕೊಳ್ಳದವರು ನನ್ನ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜಾರಿಯಾದ ಮೇಲೆ ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕೆರೆ ತುಂಬೋ ಯೋಜನೆ ಅವರ ಕನಸೇ ಆಗಿರಬಹುದು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಖರ್ಗೆ ನೀರಾವರಿ ಸಚಿವರಿದ್ದಾಗ ಅವರ ಯೋಜನೆಗೆ ಒಪ್ಪಿಗೆ ಸಿಗಲಿಲ್ಲ. ಎಂಬಿಪಾ ನೀರಾವರಿ ಸಚಿವರಾದ ಮೇಲೆ ಜಿಲ್ಲೆಯ ನೀರಾವರಿ ಕನಸು ನನಸಾಗುವ ನಿರೀಕ್ಷೆ ಇತ್ತು. ಆದರೆ ಸಚಿವರಾದ ಖುಷಿಯಲ್ಲಿ ಕೆಲವು ತಾಂತ್ರಿಕ ವಿಚಾರಗಳ ಕುರಿತು ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಅವರಲ್ಲಿರಲಿಲ್ಲ. ನಾವು ಪ್ರಸ್ತಾಪ ಮಾಡಿದರೂ ಕೇಳಲಿಲ್ಲ. ನಿರಾವರಿ ದನಿ ಎತ್ತಿದ ನನ್ನನ್ನು ರಾಜಕೀಯವಾಗಿ ಮುಗಿಸಲು ತಯಾರಾದರು. ಆದರೂ ಜನರ ಆಶೀರ್ವಾದದಿಂದ ಗೆದ್ದು ಬಂದೆ ಎಂದರು.

ಬರಪೀಡಿತ ಜಿಲ್ಲೆಯ ನೀರಾವರಿಗೆ ನಾನು ಒಂದು ಬಾರಿ ಬಂಡಿಯಾತ್ರೆ, ಇನ್ನೊಂದು ಬಾರಿ ಪಾದಯಾತ್ರೆ, ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಂದು ಬಾರಿ ಪಾದಯಾತ್ರೆ ನಡೆಸಿ ಹೋರಾಡಿದ್ದರ ಪ್ರತಿಫಲವಾಗಿ ಯೋಜನೆಗಳು ಜಾರಿಯಾಗಿವೆಯೇ ಹೊರತು ಎಂಬಿಪಿ ಅವರಿಂದಲ್ಲ. ಪ್ರಯತ್ನ ನಮ್ಮದು, ಹೆಸರು ಅವರದ್ದು ಎನ್ನುವಂತೆ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಬಿಚ್ಚಿಟ್ಟರು.

ಜಿಲ್ಲೆಯ ನೀರಾವರಿ ಕುರಿತು ವಿಧಾನಸಭೆ ಒಳಗಾಗಲಿ, ಹೊರಗಾಗಲಿ ಒಂದು ದಿನವೂ ದನಿ ಎತ್ತದ, ಹೋರಾಟವನ್ನೂ ನಡೆಸದ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯೋಜನೆಗಳನ್ನು ತನ್ನದು ಎಂದು ಹೇಳಿಕೊಳ್ಳುತ್ತಿರುವುದು, ನಾನೂ ಸೇರಿ ಕೆಲವರು ಈ ಕುರಿತು ನಡೆಸಿದ್ದ ಹೋರಾಟಗಳನ್ನು ಪರಿಗಣಿಸದೆ ನಿರ್ಲಕ್ಷಿಸಿರುವುದು ವಿಷಾಧ ಪಡುವಂಥದ್ದು. ಜಿಲ್ಲೆಯ ರೈತರು, ಸಾರ್ವಜನಿಕರು ಸತ್ಯ ತಿಳಿದುಕೊಳ್ಳಬೇಕು ಎಂದರು.

ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಜಿಲ್ಲೆಯಲ್ಲಿ ನಡೆದ ಹೋರಾಟ, ವಿದಾನಸಭೆಯ ಒಳಗೆ, ಹೊರಗೆ ನಡೆಸಿದ ಪ್ರಸ್ತಾಪಗಳು, ಮೊದಲ ಬಾರಿ ಬಿಜೆಪಿ ಸರ್ಕಾರ ಬಂದಾಗ, ನಂತರ ಬಿಜೆಪಿ ಸರ್ಕಾರ ಇದ್ದಾಗ ಬಿಡುಗಡೆಯಾದ ಅನುದಾನ, ನಡೆದ ಪ್ರಯತ್ನ, ಸ್ಪಂಧನೆ ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿಟ್ಟ ಶಾಸಕರು, ಎಂಬಿಪಾ ಅಧಿಕಾರದಲ್ಲಿದ್ದಾಗ ಯೋಜನೆಗಳು ಹೋರಾಟದ ಫಲವಾಗಿ ಅನುಷ್ಠಾನಗೊಂಡವುಗಳೇ ಹೊರತು ಅವರ ಸ್ವಪ್ರಯತ್ನದಿಂದಲ್ಲ ಎಂದು ಚಾಟಿ ಬೀಸಿದರು.

ಜಿಲ್ಲೆಯ ನೀರಾವರಿ ವಿಷಯ ಕುರಿತು ಅಧಿವೇಶನದಲ್ಲಿ ಯಾರು, ಎಷ್ಟು ಮಾತಾಡಿದ್ದಾರೆ ಅನ್ನೋದಕ್ಕೆ ಹಾಗೂ ಸುದೀರ್ಘ 45 ನಿಮಿಷ ಮಾತನಾಡಿದ್ದಕ್ಕೆ ದಾಖಲೆ ಇದೆ. ಚಿಮ್ಮಲಗಿ, ಮುಳವಾಡ ಏತ ನೀರಾವರಿ ಯೋಜನೆಗಳಿಗೆ 800 ಕೋಟಿ ರೂ ಅನುದಾನ ಬಿಡುಗಡೆ ಮಾಡಿ ಚಾಲನೆ ಕೊಟ್ಟಿದ್ದು ಆಗಿನ ಬಿಜೆಪಿ ಸರ್ಕಾರ ಎನ್ನುವುದನ್ನು ಘಂಟಾಘೋಷವಾಗಿ ಹೇಳುತ್ತೇನೆ. ಇದರಲ್ಲಿ ಎಂಬಿಪಾರವರ ಪಾತ್ರ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ಮಮದಾಪುರ, ಬಿಜಾಪುರದ ಬೇಗಂ ತಾಲಾಬ್ ಕೆರೆ ತುಂಬಿಸಲು ಮಾತ್ರ ಇವರ ಸಾಧನೆ ಸೀಮಿತ. ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಕೆರೆಗೆ ಒಂದೇ ದಿನ ನೀರು ಹರಿಸಿ ನಂತರ ಬಂದ್ ಮಾಡಿದರು ಎಂದರು.

ಅಂದಾಜು 45 ನಿಮಿಷಗಳ ಸುಧೀರ್ಘ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಾದ ನೀರಾವರಿ ಕಾಮಗಾರಿಗಳನ್ನು ವಿಸ್ತೃತವಾಗಿ ವಿವರಿಸಿದ ಅವರು, ಎಂಬಿಪಾರವರು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅಭಿನಂದಿಸಬೇಕಿತ್ತು. ಆದರೆ ಹಾಗೆ ಮಾಡದೆ ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಳ್ಳುತ್ತ ತಾವೇ ಎಲ್ಲವನ್ನೂ ಮಾಡಿದ್ದು ಎಂದು ಬಿಂಬಿಸಲು ಹೊರಟಿರುವುದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ. ಇನ್ನು ಮುಂದಾದರೂ ಎಂಬಿಪಾರವರು ಬಿಜೆಪಿ ಸರ್ಕಾರದ ಕೆಲಸಗಳನ್ನು ತನ್ನ ಕೆಲಸಗಳು ಎಂದು ಹೇಳುವುದನ್ನು ಕೈಬಿಡಬೇಕು. ಬಿಜೆಪಿ ಸರ್ಕಾರ ಬಂದ ಮೇಲೆ ಅನುಷ್ಠಾನ ಆಗುತ್ತಿರುವ ಕೆಲಸಗಳ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಧನ್ಯವಾದ ಹೇಳುವುದನ್ನು ಕಲಿಯಬೇಕು. ಎಲ್ಲವೂ ನನ್ನಿಂದಲೇ ಆಗಿದ್ದು ಎಂದು ಹೇಳುವ ಮನೋಭಾವ ಕೈಬಿಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಡಾ. ಪರಶುರಾಮ ಪವಾರ ಗೋಷ್ಠಿಯಲ್ಲಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.