ರೈಲ್ವೆ ಖಾಸಗೀಕರಣಕ್ಕೆ ವಿರೋಧ

ಜಿಲ್ಲಾ ಕೇಂದ್ರ ರೈಲ್ವೆ ನಿಲ್ದಾಣದ ಎದುರು ಎಸ್ಯುಸಿಐ ಪ್ರತಿಭಟನೆ

0

Gummata Nagari, Vijayapura News

ಬಿಜಾಪುರ : ರೈಲ್ವೆ ಖಾಸಗೀಕರಣ ವಿರೋಧಿಸಿ ಎಸ್‌ಯುಸಿಐ ಪದಾಧಿಕಾರಿಗಳು ಸೋಮವಾರ ಬಿಜಾಪುರ ಜಿಲ್ಲಾ ಕೇಂದ್ರ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

`ರೈಲ್ವೆ ಖಾಸಗೀಕರಣ ಬೇಡ’, `ರೈಲ್ವೆ ಪ್ರಯಾಣದರ ಹೆಚ್ಚಳ ಕೈ ಬಿಡಿ’, `ರೈಲ್ವೆ ಸಾರ್ವಜನಿಕ ಆಸ್ತಿ – ಸಾರ್ವಜನಿಕ ಆಸ್ತಿಯಾಗಿಯೇ ಉಳಿಯಲಿ’ ಎಂಬಿತ್ಯಾದಿ ಫಲಕಗಳನ್ನು ಪ್ರದರ್ಶಿಸಿದರು. ನಂತರ ರೈಲ್ವೆ ಉನ್ನತ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಭಿ.ಭಗವಾನರೆಡ್ಡಿ ಮಾತನಾಡಿ, ಭಾರತೀಯ ರೈಲ್ವೆ ಪ್ರಪಂಚದಲ್ಲೇ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾಗಿದ್ದು, ದೇಶದ ಆರ್ಥಿಕತೆಯ ಬಹುದೊಡ್ಡ ಜೀವನಾಡಿಯಾಗಿದೆ. ಆದರೆ ಈ ಹೆಮ್ಮೆಯ ಸಾರ್ವಜನಿಕ ಸೇವಾ ಉದ್ಯಮವನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ರೈಲ್ವೆ ವಲಯವನ್ನು ಹಂತಹಂತವಾಗಿ ಖಾಸಗೀಕರಿಸುವ ಹುನ್ನಾರದಿಂದ `ವಿವೇಕ ದೇಬರಾಯ್ ಸಮಿತಿ’ ರಚಿಸಿ ರೈಲ್ವೆಯನ್ನು ತುಂಡು ತುಂಡು ಮಾಡಿ ಸರ್ವನಾಶ ಮಾಡುವ ನೀಲನಕ್ಷೆಯನ್ನು ರೂಪಿಸಿತು ಎಂದು ರೆಡ್ಡಿ ದೂರಿದರು.

ರೈಲ್ವೆಯ ನಿರ್ಮಾಣ, ಕಾರ್ಯಾಚರಣೆಗಳು, ನಿರ್ವಹಣೆ, ರೈಲುಕೋಚ್ (ರೋಲಿಂಗ್ ಸ್ಟಾಕ್), ಮೀಸಲು ಮಾರ್ಗಗಳು, ಟ್ರೇನ್ ಸೆಟ್‌ಗಳು, ಇತ್ಯಾದಿ ಭಾರತೀಯರೈಲ್ವೇ ನಿರ್ವಹಿಸುವ ಎಲ್ಲಾ ಕಾರ್ಯಚಟುವಟಿಕೆಗಳನ್ನು ವಿಭಜಿಸಿ ಖಾಸಗೀಕರಣಗೊಳಿಸಲು, ಶೇ.100 ನೇರ ವಿದೇಶಿ ಬಂಡವಾಳ ಹೂಡಲು ಅನುಮತಿ ನೀಡಿತು. ಇದರಿಂದಾಗಿಯೇ ರೈಲ್ವೆ ಇಲಾಖೆ ಅವನತಿಯ ಹಾದಿ ಹಿಡಿಯುತ್ತಿದೆ ಎಂದರು.

ಜನವಿರೋಧಿ ವಿವೇಕ್ ದೇಬರಾಯ್ ಸಮಿತಿಯ ಶಿಫಾರಸ್ಸುಗಳನ್ನು ಕೂಡಲೇ ಕೈ ಬಿಡಬಬೇಕು, 109 ರೂಟ್‌ಗಳಲ್ಲಿ 151 ಖಾಸಗಿ ಟ್ರೆöÊನುಗಳನ್ನು ಓಡಿಸುವ ಯೋಜನೆಯನ್ನು ಕೈ ಬಿಡಬೇಕು, ಹೆಚ್ಚಿಸಿರುರುವ ಪ್ಲಾಟ್ ಫಾರ್ಮ್ ದರವನ್ನು ಕೂಡಲೇ ಇಳಿಕೆ ಮಾಡುವುದು, ಏಳು ರೈಲ್ವೆ ಉತ್ಪಾದಕ ಘಟಕಗಳನ್ನು ಕಾರ್ಪೋರೇಟ್ ಮನೆತನಗಳಿಗೆ ಮಾರುವುದನ್ನುತಡೆಗಟ್ಟಬೇಕು, ಉದ್ಯೋಗ ಕಡಿತದ ಬದಲು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು, 55 ವರ್ಷ ವಯಸ್ಸು ಅಥವಾ 30 ವರ್ಷಗಳ ಸೇವೆಯ ಹೆಸರಲ್ಲಿ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂದು ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಹಕ್ಕೊತ್ತಾಯ ಮಂಡಿಸಿದರು.

ಪಕ್ಷದ ಮುಖಂಡರಾದ ಎಚ್.ಟಿ. ಮಲ್ಲಿಕಾರ್ಜುನ, ಎಚ್.ಟಿ. ಭರತಕುಮಾರ, ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಸುನೀಲ ಸಿದ್ರಾಮಶೆಟ್ಟಿ, ಶೋಭಾ ಯರಗುದ್ರಿ, ದುಂಡೇಶ್ ಬಿರಾದಾರ, ಕಾವೇರಿ ಶಿವರಂಜನಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.