ಔಷಧಿ ನುಂಗಿಸುವ ಕಾರ್ಯಕ್ರಮ ಯಶಸ್ವಿಗೆ ಸೂಚನೆ

ಆನೆಕಾಲು ರೋಗ ನಿಯಂತ್ರಣ

0

Gummata Nagari : Bijapur News

ಬಿಜಾಪುರ : ಜಿಲ್ಲೆಯ ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಇದೇ ಸೆ.27 ರಿಂದ ಅ.11 ರವರೆಗೆ ಸಾಮೂಹಿಕ ಆನೆಕಾಲು ರೋಗದ ಔಷಧಿ ನುಂಗಿಸುವ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಅಂತರ್ ಇಲಾಖೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಆನೆಕಾಲು ರೋಗ ಸಂಪೂರ್ಣ ನಿರ್ಮೂಲನೆಗಾಗಿ ಜಿಲ್ಲೆಯ ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಮಾತ್ರ ಏರ್ಪಡಿಸಲಾದ ಈ ಕಾರ್ಯಕ್ರಮದ ಅಂಗವಾಗಿ ಪ್ರತಿ ಮನೆಯ ಕುಟುಂಬಸ್ಥರಿಗೆ ಆನೆಕಾಲು ರೋಗದ ಔಷಧಿ ನುಂಗಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಸೂಚನೆ ನೀಡಿದರು.

ಪ್ರತಿ ವರ್ಷಕ್ಕೊಮ್ಮೆ ಡಿಇಸಿ ಹಾಗೂ ಅಲ್ಬೇಂಡಜೋಲ್ ಔಷಧಿ ನುಂಗಿಸುವುದರಿಂದ ಆನೆಕಾಲು ರೋಗವನ್ನು ನಿಯಂತ್ರಿಸಬಹುದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು. ಕಾರ್ಯಕ್ರಮದ ಅನುಕೂಲಕ್ಕಾಗಿ ಅಂಗನವಾಡಿ ಕಾರ್ಯಕರ್ತರ ಹೆಚ್ಚುವರಿ ಬೇಡಿಕೆಯನ್ನು ನಿವಾರಿಸುವುದಾಗಿ ಅವರು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ಜೇಬುನ್ನಿಸಾಬೇಗಂ ಬೀಳಗಿ ಅವರು 2-5 ವರ್ಷದವರೆಗೆ 100 ಮಿಲಿ ಗ್ರಾಂ ಡಿಇಸಿ ಒಂದು ಮಾತ್ರೆ ಹಾಗೂ 400 ಮಿಲಿ ಗ್ರಾಂ ಅಲ್ಬೇಂಡಜಾಲ್ ಒಂದು ಮಾತ್ರೆ ನುಂಗಿಸಲಾಗುತ್ತಿದೆ. 6-14 ವರ್ಷದವರಿಗೆ 200 ಮಿಲಿ ಗ್ರಾಂ ಡಿಇಸಿ 2 ಮಾತ್ರೆಗಳು ಹಾಗೂ 400 ಮಿಲಿ ಗ್ರಾಂ ಅಲ್ಬೆಂಡಜಾಲ್ ಒಂದು ಮಾತ್ರೆ ನುಂಗಿಸಲಾಗುತ್ತಿದೆ. ಅದರಂತೆ 15 ವರ್ಷ ಮೇಲ್ಪಟ್ಟವರಿಗೆ 300 ಮಿಲಿ ಗ್ರಾಂ 3 ಡಿಇಸಿ ಮಾತ್ರೆಗಳನ್ನು ಹಾಗೂ 400 ಮಿಲಿ ಗ್ರಾಂ ಒಂದು ಅಲ್ಬೆಂಡಜಾಲ್ ಮಾತ್ರೆಯನ್ನು ನುಂಗಿಸಲಾಗುತ್ತಿದೆ.

ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ತೀವ್ರಕಾಯಿಲೆಯಿಂದ ನರಳುತ್ತಿರುವವರನ್ನು ಹೊರತುಪಡಿಸಿ ಎಲ್ಲರೂ ಊಟದ ನಂತರ ತಪ್ಪದೇ ಡಿಇಸಿ ಗುಳಿಗೆ ಸೇವಿಸುವದು. ಬಿ.ಪಿ ಹಾಗೂ ಸಕ್ಕರೆ ಕಾಯಿಲೆ ಇದ್ದವರು ಸಹ ಔಷಧಿ ಸೇವಿಸಬಹುದು.

ಈ ಔಷಧಿ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಮತ್ತು ಇದರಿಂದ ಯಾವುದೇ ತೀವ್ರ ತರವಾದ ಅಡ್ಡ ಪರಿಣಾಮಗಳಾಗುವುದಿಲ್ಲ. ಒಂದು ವೇಳೆ ಡಿಇಸಿ ಸೇವಿದವರಲ್ಲಿ ವಾಂತಿ, ವಾಕರಿಕೆ, ನಿದ್ದೆ, ತಲೆಸುತ್ತುವುದು ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಗಾಬರಿಪಡುವ ಅಗತ್ಯವಿರುವುದಿಲ್ಲ. ಇವು ತಾತ್ಕಾಲಿಕವಾಗಿದ್ದು, ಯಾವುದೇ ಚಿಕಿತ್ಸೆಯಿಲ್ಲದೆ ಗುಣವಾಗುತ್ತದೆ. ಆದರೂ ಸಹ ಆರೋಗ್ಯ ಸಹಾಯಕರಿಗೆ ಅಥವಾ ವೈದ್ಯಾಧಿಕಾರಿಗಳಿಗೆ ತಕ್ಷಣ ತಿಳಿಸಬೇಕು.

ಸೊಳ್ಳೆ ಪರದೆ ಉಪಯೋಗಿಸಿ ಆನೆಕಾಲು ರೋಗ, ಮಲೇರಿಯಾ, ಡೆಂಗಿ, ಚಿಕನ್‌ಗುನ್ಯಾ, ಮೆದುಳು ಜ್ವರಗಳಿಂದ ರಕ್ಷಿಸಿಕೊಳ್ಳಲು ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಲು ಅಗತ್ಯಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಆರ್.ಸಿ.ಎಚ್ ಮಹೇಶ ನಾಗರಬೆಟ್ಟ, ಡಬ್ಲೂಎಚ್‌ಒ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗಲಗಲಿ, ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ ಇಂಗಳೆ, ಸತೀಶ ತಿವಾರಿ, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸಂಪತ್‌ಗುಣಾರೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕೋವಿಡ್-19 ಗೆ ಸಂಬಂಧಪಟ್ಟಂತೆ ವಿಶೇಷ ವರ್ಗದ ನಾಗರೀಕರಿಗೆ ಮುಖ್ಯಮಂತ್ರಿಗಳ ಸಂದೇಶವುಳ್ಳ ಮಾಹಿತಿ, ಆನೆಕಾಲು ರೋಗ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.