ಆಲಮಟ್ಟಿ ಜಲಾಶಯ ಭದ್ರತೆಗೆ ಹೆಚ್ಚಿನ ಪೊಲೀಸರ ನಿಯೋಜನೆ

0

Gummata Nagari : Bijapur News

ಬಿಜಾಪುರ : ಆಲಮಟ್ಟಿ ಜಲಾಶಯದ ಭದ್ರತೆಗೆ 100 ಕ್ಕಿಂತ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಆಂತರಿಕ ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಆಲಮಟ್ಟಿಗೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ಡಿಎಆರ್ ಪಡೆಯನ್ನು ಆಲಮಟ್ಟಿ ಜಲಾಶಯ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಅಣೆಕಟ್ಟು ವೀಕ್ಷಣೆಗೆ ಬರುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ ಎಂದು ತಿಳಿಸಿದರು.

ಆಲಮಟ್ಟಿ ಡ್ಯಾಂ ಭದ್ರತೆಗೆ ನಿಯೋಜನೆ ಮಾಡಿರುವ ಡಿಎಆರ್ ತಂಡಕ್ಕೆ ಬೋಟಿಂಗ್, ಮತ್ತು ಸೂಕ್ಷ್ಮ ದರ್ಶಕ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಪ್ರಮುಖ ಸ್ವತ್ತುಗಳಾದ ವಿದ್ಯುತ್ ಸ್ಥಾವರ್, ಜಲಾಶಯಗಳು, ರಿಸರ್ವ್ ಬ್ಯಾಂಕ್, 6 ವಿಮಾನ ನಿಲ್ದಾಣಗಳ ಭದ್ರತೆಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಅವರು ತಿಳಿಸಿದರು.

ಸರಕಾರ ರಚಿಸಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 3 ಬಟಾಲಿಯನ್ ಕಾರ್ಯ ನಿರ್ವಹಿಸುತ್ತಿವೆ. ಈ ಪಡೆಗಳು ಕೇವಲ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಭಯೋತ್ಪಾದಕ ಕೃತ್ಯಗಳನ್ನು ಎದುರಿಸಿ ಭಯೋತ್ಪಾದಕರ ಆಧುನಿಕ ತಂತ್ರಜ್ಞಾನ ಮೆಟ್ಟಿ ನಿಲ್ಲಲು ಈ ಪಡೆಗಳು ಸನ್ನದ್ಧವಾಗಿವೆ. ಈ ಪಡೆಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಅಕ್ರಮವಾಗಿ ಮೀನುಗಾರಿಕೆ ಬಗ್ಗೆ ಮಾಹಿತಿ ಇದೆ. ಕೆಲ ಮೀನುಗಾರರು ಲೈಸನ್ಸ್ ಹೊಂದಿದ್ದಾರೆ. ಇನ್ನೂ ಕೆಲವರು ಅನುಮತಿ ಹೊಂದಿಲ್ಲ. ಅವರ ಮೀನುಗಾರಿಕೆಗೆ ಯಾವುದೇ ಅಡ್ಡಿ ಪಡಿಸುವುದಿಲ್ಲ. ಜಲಾಶಯದ ಭದ್ರತೆಗಾಗಿ ಕೆಲ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಂತಹ ಸ್ಥಳಗಳ ಕಡೆಗೆ ಮೀನುಗಾರರು ಬರದಂತೆ ನಿಗಾ ವಹಿಸಲಾಗಿದೆ. ಮೀನುಗಾರರು ನಿರ್ಭಂದಿತ ಪ್ರದೇಶಗಳತ್ತ ಬರದಂತೆ ಎಚ್ಚರ ವಹಿಸಬೇಕು ಎಂದು ಭಾಸ್ಕರರಾವ್ ತಿಳಿಸಿದರು.

ವಿದೇಶಗಳಿಂದ ಬರುವ ಡ್ರಗ್ಸ್ ತಡೆಗಟ್ಟಲು ಕರಾವಳಿ ಕಾವಲು ಪಡೆ ಎಚ್ಚರಿಕೆ ವಹಿಸಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಭಾಸ್ಕರರಾವ್ ಯಲಗೂರು ಶ್ರೀ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.