ಸಿಂದಗಿ ಬಿಇಓರಿಂದ ಲಕ್ಷಾಂತರ ಅನುದಾನ ದುರುಪಯೋಗ

ತಾಪಂ ಸದಸ್ಯ ಶಿವುಕುಮಾರ ಬಿರಾದಾರ ಆರೋಪ

0

Gummata Nagari : Bijapur News

ಸಿಂದಗಿ : ಸಿಂದಗಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಿಂದಲೇ ಲಕ್ಷಾಂತರ ಅನುದಾನ ದುರುಪಯೋಗವಾಗಿದೆ ಎಂದು ತಾಪಂ ಸದಸ್ಯ ಶಿವುಕುಮಾರ ಬಿರಾದಾರ ಆರೋಪಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ಅವರು ಕೇವಲ ಒಂದು ವರ್ಷದ ಅವಧಿಯಲ್ಲಿ 28 ಲಕ್ಷ ರೂ. ಗಿಂತ ಹೆಚ್ಚು ಅನುದಾನ ಹಣ ದುರುಪಯೋಗ ಮಾಡಿದ್ದಾರೆ. ನಾನು ಹಣ ದುರ್ಬಳಕೆ ಕುರಿತು ಕಾರ್ಯಾಲಯದಲ್ಲಿ ಮಾಹಿತಿ ಕೇಳಿದ ಸಂದರ್ಭದಲ್ಲಿ, ನನಗೆ ಶಾಸಕ ಎಂ.ಸಿ. ಮನಗೂಳಿ ಅವರ ಶ್ರೀರಕ್ಷೆಯಿದೆ. ನನಗೆ ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅವರು ಉದ್ಧಟನ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜಾಪುರದಲ್ಲಿರುವ ಒಂದು ಮಹಿಳಾ ವಿವಿಧ ಉದ್ಧೇಶಗಳ ಸಹಕಾರಿ ಸಂಘದಲ್ಲಿ 2019ರ ಡಿಸೆಂಬರ್ 16 ರಿಂದ 2020ರ ಜನೆವರಿ 30ರ ಒಳಗಾಗಿ ಕೇವಲ 45 ದಿನಗಳಲ್ಲಿ 6 ಬಿಲ್ಲಗಳಲ್ಲಿ 5.93 ಲಕ್ಷ ರೂ. ಖರೀದಿ ಮಾಡಿದ್ದಾರೆ. ಬಿಜಾಪುರ ನಗರದಲ್ಲಿನ ಎಂಟರ್ ಪ್ರೈಜಸ್ ಅಂಗಡಿಯಲ್ಲಿ ಕೇವಲ ಒಂದು ತಿಂಗಳಿನಲ್ಲಿ 12 ಬಿಲ್ಲಗಳಲ್ಲಿ 7.26 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗಿದೆ ಎಂದು ಬಿಲ್ ತಗೆಯಲಾಗಿದೆ. ಹೀಗೆ ಕಂಪ್ಯೂಟರ್, ಫರ್ನಿಚರ್, ಝರಾಕ್ಸ್ ಪೇಪರ್, ಪಠ್ಯಪುಸ್ತಕ ಹಂಚಿಕೆ, ದಿನಪತ್ರಿಕೆಗಳು ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಸಿದ್ದೇವೆ ಎಂದು ಅಂದಾಜು ಒಟ್ಟು 28 ಲಕ್ಷ ರೂ. ಗಿಂತ ಹೆಚ್ಚು ಹಣವನ್ನು ದುರುಪಯೋಗ ಮಾಡುವ ಮೂಲಕ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಠ್ಯಪುಸ್ತಕಗಳನ್ನು ಪ್ರತಿ ಶಾಲೆಗೆ ನೇರವಾಗಿ ಸರಬರಾಜು ಮಾಡದೇ ಆಯಾ ಕ್ಲಸ್ಟರ್‌ಗೆ ಸರಬರಾಜು ಮಾಡುವ ಮೂಲಕ 1 ಲಕ್ಷ ರೂ. ಹಣ ಅವ್ಯವಹಾರ ಮಾಡಿದ್ದಾರೆ. ಹೀಗೆ ಕ್ಷೇತಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ಅವರು ಕೆಲ ಶಿಕ್ಷಕರು, ಖಾಸಗಿ ಶಾಲೆಯ ಮುಖ್ಯಸ್ಥರನ್ನು ಹೀಗೆ ಬೇರೆ ಮೂಲಗಳನ್ನು ಮಧ್ಯವರ್ತಿಯನ್ನಾಗಿ ಮಾಡಿಕೊಂಡು ಯಾವುದೇ ಖರೀದಿಗೆ ಟೆಂಡರ್ ಕರೆಯದೇ ಕೊಟ್ಟಿ ಕೊಟೆಶನ್ ಮೂಲಕ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಂದಗಿ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ಅವರು ಮಾಡಿದ ಹಗರಣದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ, ಡಿಡಿಪಿಐ ಬಿಜಾಪುರ, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ, ಲೋಕಾಯುಕ್ತರಿಗೆ ದೂರು ನೀಡಿದರೂ ಈ ಪ್ರಕರಣದ ಕುರಿತು ಯಾವುದೇ ತನಿಖೆ ಕೈಕೊಂಡಿಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದರು.

ಸರಕಾರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಶಿಕ್ಷಣಾಧಿಕಾರಿಗಳೇ ಸ್ವತಃ ಬ್ರಷ್ಠಾಚಾರಕ್ಕೆ ಇಳಿದರೇ ಶೈಕ್ಷಣಿಕ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇನ್ನಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳು ಜಾಗೃತಗೊಂಡು ಸಿಂದಗಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಅವ್ಯವಹಾರದ ಕುರಿತು ಶಿಘ್ರ ತನಿಖೆಯಾಗಬೇಕು ತಪ್ಪಿತಸ್ತ ಅಧಿಕಾರಿ ಹಾಗೂ ಸಿಬ್ಬಂಧಿಗಳ ಮೇಲೆ ಕಾನೂನು ಕ್ರಮ ಕೈಕೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.