ಮಳೆ ನಿಂತ ಮೇಲೆ ಕೊಟ್ಯಂತರ ಹಾನಿ!
ಬಿಜಾಪುರ ಜಿಲ್ಲಾದ್ಯಂತ 2,065 ಮನೆಗಳಿಗೆ ಹಾನಿ, ನೀರಿನಲ್ಲಿ ಬೆಳೆಗಳು: ಭೀಮಾನದಿಯ ತಗ್ಗದ ಪ್ರವಾಹ, ಡೋಣಿ ನದಿ ಶಾಂತ : ಗಂಜಿ ಕೇಂದ್ರ ಶುರು
ಬಿಜಾಪುರ : ಬಿಜಾಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವರುಣನ ಪ್ರತಾಪ ಜೋರಾಗಿದೆ, ಶುಕ್ರವಾರ ಮಳೆ ಪ್ರಮಾಣ ತಗ್ಗಿದರೂ ಸಹ ಮಳೆ ನೀರಿನಲ್ಲಿ ನೆನೆದ ನೂರಾರು ಸಂಖ್ಯೆಯ ಕಚ್ಚಾ ಮನೆಗಳು ನೆಲಕ್ಕುರುಳಿವೆ. ಶುಕ್ರವಾರ ಸುರಿದ ಮಳೆಯಿಂದಾಗಿ ಮತ್ತೆ ಜಿಲ್ಲೆಯಲ್ಲಿ 786 ಮನೆಗಳು ಭಾಗಶ: ಹಾನಿಗೀಡಾಗಿವೆ.
ಕಳೆದ ಸೋಮವಾರದಿಂದ ಶುಕ್ರವಾರದವರೆಗೆ ಬಿಜಾಪುರ ಜಿಲ್ಲೆಯಾದ್ಯಂತ 2065 ಮನೆಗಳು ಭಾಗಶ: ಪ್ರಮಾಣದಲ್ಲಿ ಹಾನಿಯಾಗಿವೆ. ಗ್ರಾಮೀಣ ಭಾಗದಲ್ಲಿ ಮಣ್ಣಿನ ಮನೆಗಳೇ ಅಧಿಕವಾಗಿರುವುದರಿಂದ ಮಳೆಗೆ ನೆನೆದು ಮನೆಗಳ ಗೋಡೆಗಳು ಕುಸಿದಿವೆ. ಪರಿಣಾಮವಾಗಿ ಮನೆ ಕಳೆದುಕೊಂಡವರ ಹಾಗೂ ಮನೆಗೆ ಹಾನಿಯಾದವರ ಕುಟುಂಬಗಳ ನೋವು ಮುಗಿಲು ಮುಟ್ಟಿದೆ.
ಕಳೆದ ನಾಲ್ಕು ದಿನಗಳಲ್ಲಿ ಸುರಿದ ಮಳೆಗೆ ಬಿಜಾಪುರ ತಾಲೂಕಿನಲ್ಲಿ 36, ಬಬಲೇಶ್ವರ ತಾಲೂಕಿನಲ್ಲಿ 27, ತಿಕೋಟಾ ತಾಲೂಕಿನಲ್ಲಿ 110, ಬಸವನ ಬಾಗೇವಾಡಿ ತಾಲೂಕಿನಲ್ಲಿ 90, ಕೊಲ್ಹಾರ ತಾಲೂಕಿನಲ್ಲಿ 106, ನಿಡಗುಂದಿ ತಾಲೂಕಿನಲ್ಲಿ 95, ಮುದ್ದೇಬಿಹಾಳದಲ್ಲಿ 147, ತಾಳಿಕೋಟೆ ತಾಲೂಕಿನಲ್ಲಿ 60, ಇಂಡಿ ತಾಲೂಕಿನಲ್ಲಿ 214, ಚಡಚಣ ತಾಲೂಕಿನಲ್ಲಿ 20, ಸಿಂದಗಿ ತಾಲೂಕಿನಲ್ಲಿ 288, ದೇವರಹಿಪ್ಪರಗಿ ತಾಲೂಕಿನಲ್ಲಿ 86 ಮನೆಗಳು ಹಾನೀಗೀಡಾಗಿದ್ದು, ಶುಕ್ರವಾರ ಸುರಿದ ಮಳೆಗೆ ಬಿಜಾಪುರ ಜಿಲ್ಲೆಯಲ್ಲಿ 786 ಮನೆಗಳು ಭಾಗಶ: ಹಾನೀಗೀಡಾಗಿದ್ದು, ತಾಲೂಕಾವಾರು ವಿವರವನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಒಂದೆಡೆ ವ್ಯಾಪಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಇನ್ನೊಂದೆಡೆ ಜಲಾಶಯಗಳಿಂದ ಹರಿದು ಬರುತ್ತಿರುವ ನೀರುಗಳು ಜಮೀನುಗಳಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ಹಾನಿಗೀಡಾಗಿವೆ.
ಭೀಮಾ ನದಿ ತೀರದಲ್ಲಿ ತಗ್ಗದ ಪ್ರವಾಹ – ಡೋಣಿ ಶಾಂತ
ಭೀಮಾ ನದಿಗೆ ಮಹಾರಾಷ್ಟçದ ವಿವಿಧ ಜಲಾಶಯಗಳಿಂದ ಐದು ಲಕ್ಷ ಕ್ಯೂಸೆಕ್ಸ್ಗೂ ಅಧಿಕ ನೀರು ಹರಿಬಿಡಲಾಗುತ್ತಿದೆ, ಪರಿಣಾಮವಾಗಿ 8 ಬ್ಯಾರೇಜ್ಗಳು ಸಂಪೂರ್ಣ ಭರ್ತಿಯಾಗಿವೆ, ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೀಮಾ ನದಿ ತೀರದಲ್ಲಿ ಬರುವ ಹಿಂಗಣಿ, ಬರಗುಡಿ, ಪಡನೂರ, ಶಿರಗೂರ ಇನಾಂ, ಗುಬ್ಬೇವಾಡ, ಅಗರಖೇಡ, ಚಿಕ್ಕಮಣ್ಣೂರ, ಭುಯ್ಯಾರ, ನಾಗರಳ್ಳಿ, ಖೇಡಗಿ, ರೋಡಗಿ, ಮಿರಗಿ ಸೇರಿದಂತೆ 12 ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳಾದ ಕಬ್ಬು, ತೊಗರಿ, ಹತ್ತಿ, ದಾಳಿಂಬೆ, ದ್ರಾಕ್ಷಿ, ಶೇಂಗಾ, ಮೆಕ್ಕೆಜೋಳ ಮೊದಲಾದ ಬೆಳೆಗಳು ಸಂಪೂರ್ಣವಾಗಿ ನೀರಲ್ಲಿ ಮುಳುಗಡೆಯಾಗಿವೆ.
ಡೋಣಿ ನದಿ ಸಹ ಕಳೆದ ಎರಡು ದಿನಗಳ ಹಿಂದೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಿಂದಗಿ ತಾಲೂಕಿನ ತಾರಾಪೂರ, ಬಬಲೇಶ್ವರ ತಾಲೂಕಿನ ಸಾರವಾಡ, ಧನ್ಯಾಳ ಮೊದಲಾದ ಗ್ರಾಮಗಳಿಗೂ ನೀರು ನುಗ್ಗಿತ್ತು, ಆದರೆ ಈಗ ಡೋಣಿ ನದಿ ಪ್ರವಾಹ ಸಂಪೂರ್ಣವಾಗಿ ಶಾಂತವಾಗಿದೆ.
336.03 ಕೀ.ಮೀ. ರಸ್ತೆ – 11 ಸೇತುವೆ ಹಾನಿ
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು ಹಾನಿಗೀಡಾಗುವ ಜೊತೆಗೆ ವಿವಿಧ ಇಲಾಖೆಗಳ 336.03 ಕೀ.ಮೀ. ರಸ್ತೆ ಹಾಗೂ 11 ಸೇತುವೆಗಳು ಸಂಪೂರ್ಣವಾಗಿ ಹಾನಿಗೀಡಾಗಿದ್ದರಿಂದ ಸುಮಾರು 1322.10 ಲಕ್ಷ ರೂ.ಗಳಷ್ಟು ಹಾನಿಯಾಗಿದೆ.
ಅದರಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 63.03 ಕೀ.ಮೀ. ಹಾಗೂ ಎರಡು ಬ್ರಿಡ್ಜಗಳು ಹಾನೀಗೀಡಾಗಿದ್ದು ಅಂದಾಜು 467 ಲಕ್ಷ ರೂ. ಹಾನಿಯಾಗಿದೆ, ಪಂಚಾಯತ್ ರಾಜ್ ಹಾಗೂ ಇಂಜನಿಯರಿಂಗ್ ಇಲಾಖೆಗೆ ಸೇರಿದ 214.50 ಕೀ.ಮೀ. ರಸ್ತೆ ಹಾಗೂ 09 ಸೇತುವೆಗಳು ಹಾನಿಗೀಡಾಗಿದ್ದು 308.50 ಲಕ್ಷ ರೂ. ಹಾನಿಯಾಗಿದೆ. ನಗರ-ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 58.50 ಕೀ.ಮೀ. ರಸ್ತೆ ಹಾನಿಯಾಗಿದ್ದು 536 ಲಕ್ಷ ರೂ. ಹಾನಿಯಾಗಿದೆ. ಅದೇ ತೆರನಾಗಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 10 ಲಕ್ಷ ರೂ. ಮೌಲ್ಯದ ಆಸ್ತಿಗೆ ಹಾನಿಯಾಗಿದೆ.
161566.00 ಹೆಕ್ಟೆರ್ ಬೆಳೆ ಹಾನಿ
ಕಳೆದ ನಾಲ್ಕು ದಿನಗಳಲ್ಲಿ ಸುರಿದ ಮಳೆಯಿಂದಾಗಿ 64679.00 ಲಕ್ಷ ರೂ. ಮೌಲ್ಯದ 161566 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಗೀಡಾಗಿವೆ.
63646.00 ಲಕ್ಷ ರೂ. ಮೌಲ್ಯದ 160739.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕೃಷಿ ಬೆಳೆಗಳು ಹಾನೀಗೀಡಾಗಿದ್ದರೆ, 1033.00 ಲಕ್ಷ ರೂ. ಮೌಲ್ಯದ 827.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕಾ ಬೆಳೆಗಳು ಮಳೆಯಿಂದಾಗಿ ಹಾನಿಗೀಡಾಗಿರುವ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.
8 ಕಾಳಜಿ ಕೇಂದ್ರ ಸ್ಥಾಪನೆ
ಬಿಜಾಪುರ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಅನೇಕ ಗ್ರಾಮಗಳು ಜಲಾವೃತವಾಗಿವೆ. ಅನೇಕ ಜನರು ನಿರಾಶ್ರಿತರಾಗಿದ್ದು ಅವರಿಗಾಗಿ ವಿವಿಧ ಭಾಗಗಳಲ್ಲಿ 08 ಕಾಳಜಿ ಕೇಂದ್ರಗಳನ್ನು ತೆರೆದು 341 ಜನರಿಗೆ ವಸತಿ ಹಾಗೂ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ.
ಸಿಂದಗಿ ತಾಲೂಕಿನಲ್ಲಿ ಕಡಣಿ, ಬ್ಯಾಡಗಿಹಾಳ, ದೇವಣಗಾಂವ, ಕುಮಸಗಿ, ಮೋರಟಗಿ, ಚಡಚಣ ತಾಲೂಕಿನ ಉಮರಾಣಿ, ಇಂಡಿ ತಾಲೂಕಿನ ರೂಡಗಿ ಬರಗುಡಿಯಲ್ಲಿ ಕಾಳಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಶುಕ್ರವಾರ ತಗ್ಗಿದ ಮಳೆ ಪ್ರಮಾಣ
ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದು, ಶುಕ್ರವಾರ 077 ಮೀ.ಮೀ. ಮಾತ್ರ ಮಳೆ ಸುರಿದಿದೆ. ಬಿಜಾಪುರ ತಾಲೂಕಿನಲ್ಲಿ 0.4 ಮೀ.ಮೀ, ಬಬಲೇಶ್ವರ ತಾಲೂಕಿನಲ್ಲಿ 3.0 ಮೀ.ಮೀ, ತಿಕೋಟಾ ತಾಲೂಕಿನಲ್ಲಿ 2.2 ಮೀ.ಮೀ, ಇಂಡಿ ತಾಲೂಕಿನಲ್ಲಿ 1.25 ಮೀ.ಮೀ. ಚಡಚಣ ತಾಲೂಕಿನಲ್ಲಿ 1.25 ಮೀ.ಮೀ, ಸಿಂದಗಿ ತಾಲೂಕಿನಲ್ಲಿ 1.15 ಮೀ.ಮೀ. ಮಳೆ ಸುರಿದಿದೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..