ಅರ್ಥಪೂರ್ಣ `ಜೀವನ ಕೌಶಲ ಮತ್ತು ಸಮನ್ವಯ ಶಿಕ್ಷಣ ತರಬೇತಿ’

0

Gummata Nagari : Bijapur News

ಬಿಜಾಪುರ : ಆಧುನಿಕ ಶಿಕ್ಷಣ ಕ್ರಮದಲ್ಲಿ ಜೀವನ ಕಲಿಕೆಗೆ ಸ್ಥಾನ ಕಲ್ಪಿಸುವುದಕ್ಕಾಗಿಯೇ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ `ಜೀವನ ಕೌಶಲ ಮತ್ತು ಸಮನ್ವಯ ಶಿಕ್ಷಣ ತರಬೇತಿ’ ಅರ್ಥಪೂರ್ಣವಾಗಿ ನಡೆಯಿತು. ಹಲವಾರು ಶಿಕ್ಷಕರು ಆಸಕ್ತಿಯಿಂದ ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಇಂಡಿ ತಾಲೂಕಿನಲ್ಲಿರುವ ಒಟ್ಟು 1086 ಪ್ರಾಥಮಿಕ ಶಾಲಾ ಶಿಕ್ಷಕರನ್ನು 23 ಕ್ಲಸ್ಟರ್‌ವಾರು ವಿಭಾಗಿಸಿ, ಪ್ರತಿಯೊಬ್ಬ ಶಿಕ್ಷಕರಿಗೆ 10 ದಿನದ ತರಬೇತಿ ನೀಡಿದೆ. ಒಂದು ತಂಡದಲ್ಲಿ ವಿವಿಧ ಶಾಲೆಗಳ 20 ಶಿಕ್ಷಕರನ್ನು ಮಾತ್ರ ನಿಯೋಜಿಸಿ, ಅವರಿಗೆ ತಲಾ 5 ದಿನದಂತೆ ಜೀವನ ಕೌಶಲ ಮತ್ತು ವಿಷಯಾಧಾರಿತ ತರಬೇತಿ ನೀಡಲಾಯಿತು.

ಪ್ರಾಯೋಗಿಕ ಹಾಗೂ ಆಲೋಚನಾತ್ಮಕ, ಪ್ರಾತ್ಯಕ್ಷಿಕೆ ಪ್ರಯೋಗಗಳ ಮೂಲಕ ಶಿಕ್ಷಕರನ್ನು ತೊಡಗಿಸುವ ನಿಟ್ಟಿನಲ್ಲಿ ಪೂರಕವಾದ ಕಾರ್ಯಚಟುವಟಿಕೆಗಳನ್ನು ಶಿಬಿರದಲ್ಲಿ ಸಂಘಟಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಪಿ.ಟಿ. ಬೊಂಗಾಳೆ, ಜೀವನ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವಂತೆ ಮಾಡುವದರಿಂದ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡಬಹುದಾಗಿದೆ ಎಂದರು.

ಶಿಕ್ಷಣ ಬದುಕುವ ರೀತಿಯನ್ನು ಕಲಿಸಬೇಕು. ಕೇವಲ ಜ್ಞಾನಾರ್ಜನೆಗಷ್ಟೇ ಸೀಮಿತವಾಗಿರದೆ ಮುಂದಿನ ಬದುಕಿನ ಅವಶ್ಯಕತೆಗಳ ಬಗ್ಗೆ ಅವನ ಹೊಂದಿಸಿಕೊಳ್ಳುವ ಬಗ್ಗೆ, ತನ್ನ ಕುಟುಂಬ ಸಮಾಜವನ್ನು ಸರಿಯಾಗಿ ಬೆಳೆಸುವ, ಉದ್ಯೋಗವನ್ನು ಮಾಡಿಕೊಂಡು ಬದುಕಲು ನೆರವಾಗುವ ಜ್ಞಾನವನ್ನು ಕೊಡುವ ಕಾರ್ಯ ನಡೆದರೆ ಶಿಕ್ಷಣಕ್ಕೂ ಜೀವನಕ್ಕೂ ಇರುವ ಸಂಬಂಧ ಪರಸ್ಪರ ಪೂರಕವಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳ ಬದುಕಿಗೆ ನೆರವುವಾಗುತ್ತದೆ ಎಂದರು.

ಡಿಡಿಪಿಐ ಪ್ರಸನ್ನಕುಮಾರ ಶಿಬಿರದ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ, ಇಂದಿನ ವಿದ್ಯಾರ್ಥಿಗಳ ಕಲಿಕೆಯ ವ್ಯಾಪ್ತಿಯು ತರಗತಿ ಕೋಣೆಗಷ್ಟೇ ಸೀಮಿತವಾಗದೆ ನಿತ್ಯ ಜೀವನಕ್ಕೆ ವ್ಯಾಪಿಸಿದೆ. ಅದರಂತೆ ಜೀವನ ಕೌಶಲಗಳು, ರಸ್ತೆ ಸುರಕ್ಷತಾ ನಿಯಮಗಳು, ಸಮನ್ವಯ ಶಿಕ್ಷಣದ ಮಾಹಿತಿಯು ಮಗುವನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಸಮಾಜಕ್ಕೆ ಪರಿಚಯಿಸುವ ಪರಿಕಲ್ಪನೆಯಾಗಿದೆ ಎಂದರು.

ಇಂಡಿ ಬಿಇಓ ವಸಂತ ರಾಠೋಡ, ತರಬೇತಿಯ ನೋಡಲ್ ಅಧಿಕಾರಿ ಆರ್.ಎ. ಮುಜಾವರ ಮತ್ತು ಇಂಡಿಯ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ, ಬಿ.ಆರ್.ಪಿ.ಗಳಾದ ಆಯ್.ಜಿ. ಆಳೂರ, ಎ.ಜಿ. ಚೌಧರಿ, ಬಸವರಾಜ ಗೊರನಾಳ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.